
ಐಪಿಎಲ್ 2026 (IPL 2026) ರ 16 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ವಿಸ್ಫೋಟಕ ಇನ್ನಿಂಗ್ಸ್ ಆಡಿದರು. ಎಂದಿನಂತೆ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ರಾಜಸ್ಥಾನ್ ಪರ ಈ ಆವೃತ್ತಿಯಲ್ಲೇ ಎರಡನೇ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ವಾಸ್ತವವಾಗಿ ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ 21 ರನ್ಗಳಿದ್ದಾಗ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ತನ್ನ ಎಂದಿನ ಆಟವನ್ನು ಮುಂದುವರೆಸಿದ ವೈಭವ್ ಸೂರ್ಯವಂಶಿ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಅವರಂತಹ ಅನುಭವಿ ಬೌಲರ್ಗಳಿಗೆ ಸಿಕ್ಸರ್ ಹಾಗೂ ಬೌಂಡರಿಗಳ ಮಳೆ ಸುರಿಸಿದರು. ಇದರ ಪರಿಣಾಮವಾಗಿ ಪವರ್‌ಪ್ಲೇನಲ್ಲಿಯೇ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 15 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಈ ಅರ್ಧಶತಕ ಪೂರೈಸಿದರು. ಈ ಮೂಲಕ ಇದೇ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಸಿಎಸ್ಕೆ ವಿರುದ್ಧದ ಪಂದ್ಯದಲ್ಲೂ ವೈಭವ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು. ವೈಭವ್ ಅವರ ಈ ಅಬ್ಬರದ ಇನ್ನಿಂಗ್ಸ್ನಿಂದಾಗಿ ರಾಜಸ್ಥಾನ್ ತಂಡ ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಮಾಡಿತು.
RR vs RCB IPL 2026 Live Score: ರಾಜಸ್ಥಾನ್ 4ನೇ ವಿಕೆಟ್ ಪತನ
ರಾಜಸ್ಥಾನ್ ತಂಡ ಮೊದಲ 6 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 97 ರನ್ ಕಲೆಹಾಕಿತು. ಅರ್ಧಶತಕದ ಬಳಿಕವೂ ತನ್ನ ಹೊಡಿಬಡಿ ಆಟವನ್ನು ಮುಂದುವರೆಸಿದ ವೈಭವ್ 6.2 ಓವರ್‌ಗಳಲ್ಲಿ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಹಾಗೆಯೇ 7.4 ಓವರ್‌ಗಳಲ್ಲಿ ಧೃವ್ ಜುರೇಲ್ ಅವರೊಂದಿಗೆ ಶತಕದ ಜೊತೆಯಾಟವನ್ನು ಹಂಚಿಕೊಂಡರು. ಶತಕದತ್ತ ಸಾಗುತ್ತಿದ್ದ ವೈಭವ್ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 78 ರನ್ ಬಾರಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Fri, 10 April 26