ವಿಲ್ ಜ್ಯಾಕ್ಸ್​ರನ್ನು ಬಿಟ್ಟುಕೊಟ್ಟ ಆರ್​ಸಿಬಿಗೆ ಕೈಕುಲುಕಿ ಧನ್ಯವಾದ ಹೇಳಿದ ಆಕಾಶ್ ಅಂಬಾನಿ

|

Updated on: Nov 25, 2024 | 7:40 PM

IPL Auction 2025: ಆರ್​ಸಿಬಿಯ ಈ ನಿರ್ಧಾರ ಕಂಡು ಒಂದು ಕ್ಷಣ ಇಡೀ ಮುಂಬೈ ಪಾಳಯವೇ ಅಚ್ಚರಿ ವ್ಯಕ್ತಪಡಿಸಿತು. ಕೆಲವು ಹೊತ್ತು ಅಚ್ಚರಿಯಿಂದಲೇ ಕುಳಿತಿದ್ದ ಮುಂಬೈ ತಂಡದ ಸದಸ್ಯರು, ಜ್ಯಾಕ್ಸ್ ನಮ್ಮ ತಂಡಕ್ಕೆ ಸೇರಿದರೆಂಬ ಸಂತಸದಲ್ಲಿ ಒಬ್ಬರನ್ನೊಬ್ಬರು ಕೈಕುಲುಕಿ ಹರ್ಷ ವ್ಯಕ್ತಪಡಿಸಿದರು.

ವಿಲ್ ಜ್ಯಾಕ್ಸ್​ರನ್ನು ಬಿಟ್ಟುಕೊಟ್ಟ ಆರ್​ಸಿಬಿಗೆ ಕೈಕುಲುಕಿ ಧನ್ಯವಾದ ಹೇಳಿದ ಆಕಾಶ್ ಅಂಬಾನಿ
ವಿಲ್ ಜ್ಯಾಕ್ಸ್
Follow us on

ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್​ಸಿಬಿ, ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತಂಡಕ್ಕೆ ಯಾವ್ಯಾವ ಆಟಗಾರರು ಬರಬೇಕೆಂದು ಅಭಿಮಾನಿಗಳು ಬಯಸಿದ್ದರೋ, ಆ ಯಾವ ಆಟಗಾರರನ್ನು ಆರ್​​ಸಿಬಿ ಖರೀದಿಸಿಲ್ಲ. ಇತ್ತ ಮೆಗಾ ಹರಾಜಿಗೂ ಮುನ್ನ ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಆರ್​ಸಿಬಿ, ಮಿಕ್ಕ ಮೂವರು ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಆರ್​ಟಿಎಮ್ ಬಳಸಿಕೊಂಡು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅಭಿಮಾನಿಗಳು ನಿರೀಕ್ಷಿಸಿದ್ದ ಆ ಹೆಸರಿನಲ್ಲಿ ಪ್ರಮುಖ ಹೆಸರೆಂದರೆ ಅದು ಇಂಗ್ಲೆಂಡ್​ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್. ಅಭಿಮಾನಿಗಳ ಹೊರತಾಗಿ ಕ್ರಿಕೆಟ್ ಪಂಡಿತರು ಕೂಡ ಆರ್​ಸಿಬಿ, ವಿಲ್ ಜ್ಯಾಕ್ಸ್​ರನ್ನು ಆರ್​ಟಿಎಮ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾಗಿಸಿದೆ.

ಕಡಿಮೆ ಮೊತ್ತಕ್ಕೆ ಜ್ಯಾಕ್ಸ್ ಸೇಲ್

ವಾಸ್ತವವಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುವ ಆಟಗಾರರ ಪಟ್ಟಿಯಲ್ಲಿ ವಿಲ್ ಜ್ಯಾಕ್ಸ್ ಅವರ ಹೆಸರಿತ್ತು. ಅದರಂತೆ ಹರಾಜಿನ ಎರಡನೇ ದಿನ ಹರಾಜಿಗೆ ಬಂದ ವಿಲ್ ಜ್ಯಾಕ್ಸ್​ರನ್ನು ಖರೀದಿಸಲು ಮುಂಬೈ ಹಾಗೂ ಪಂಜಾಬ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮುಂಬೈ ಜ್ಯಾಕ್ಸ್​ಗೆ 5.25 ಕೋಟಿ ರೂ. ನೀಡಲು ಮುಂದಾಯಿತು. ಈ ವೇಳೆ ಆರ್​ಸಿಬಿ ಆರ್​ಟಿಎಮ್ ಬಳಸಿ ವಿಲ್ ಜ್ಯಾಕ್ಸ್​ರನ್ನು ಮತ್ತೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬುದು ಎಲ್ಲರ ಧೃಡ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ಆರ್​ಸಿಬಿ, ಜ್ಯಾಕ್ಸ್ ಮೇಲೆ ಆರ್​ಟಿಎಮ್ ಬಳಸಲೇ ಇಲ್ಲ.

ಆಕಾಶ್ ಖುಷಿಗೆ ಪಾರವೇ ಇಲ್ಲ

ಆರ್​ಸಿಬಿಯ ಈ ನಿರ್ಧಾರ ಕಂಡು ಒಂದು ಕ್ಷಣ ಇಡೀ ಮುಂಬೈ ಪಾಳಯವೇ ಅಚ್ಚರಿ ವ್ಯಕ್ತಪಡಿಸಿತು. ಕೆಲವು ಹೊತ್ತು ಅಚ್ಚರಿಯಿಂದಲೇ ಕುಳಿತಿದ್ದ ಮುಂಬೈ ತಂಡದ ಸದಸ್ಯರು, ಜ್ಯಾಕ್ಸ್ ನಮ್ಮ ತಂಡಕ್ಕೆ ಸೇರಿದರೆಂಬ ಸಂತಸದಲ್ಲಿ ಒಬ್ಬರನ್ನೊಬ್ಬರು ಕೈಕುಲುಕಿ ಹರ್ಷ ವ್ಯಕ್ತಪಡಿಸಿದರು. ಇತ್ತ ತನ್ನ ತಂಡಕ್ಕೆ ವಿಲ್ ಜ್ಯಾಕ್ಸ್ ಸೇರಿದ ಖುಷಿಯಲ್ಲಿ ತನ್ನ ಕುರ್ಚಿಯಿಂದ ಎದ್ದು ಬಂದ ಆಕಾಶ್ ಅಂಬಾನಿ, ಆರ್​ಸಿಬಿ ತಂಡದ ಬಳಿ ಬಂದು ಎಲ್ಲರಿಗೂ ಕೈಕುಲುಕಿ ಧನ್ಯವಾದ ತಿಳಿಸಿದರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಒಳಒಪ್ಪಂದದ ಗುಮಾನಿ

ಈ ಇಬ್ಬರ ನಡುವಿನ ಈ ನಡೆಯನ್ನು ಗಮನಿಸಿದ ಅಭಿಮಾನಿಗಳು ವಿಲ್ ಜ್ಯಾಕ್ಸ್​ರನ್ನು ಆರ್​ಸಿಬಿಯಿಂದ ಮುಂಬೈ ತಂಡಕ್ಕೆ, ಇತ್ತ ಟಿಮ್ ಡೇವಿಡ್​ರನ್ನು ಮುಂಬೈ ತಂಡದಿಂದ ಆರ್​ಸಿಬಿಗೆ ಬಿಟ್ಟುಕೊಡಲು ಒಳಗೊಳಗೆ ಒಪ್ಪಂದ ಮಾಡಿಕೊಂಡಿರಬಹುದು ಎಂದು ಸೋಶೀಯಲ್ ಮೀಡಿಯಾದಲ್ಲಿ ಮಾತನಾಡಲಾರಂಭಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದ ಎಲ್ಲರಲ್ಲೂ ಅದೇ ಅಭಿಪ್ರಾಯ ಮೂಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ