IPL 2024: ಇದ್ದಕ್ಕಿದ್ದಂತೆ ಎಲ್ಲಾ ಫ್ರಾಂಚೈಸಿಗಳ ಮಾಲೀಕರ ಸಭೆ ಕರೆದ ಬಿಸಿಸಿಐ..!

BCCI: ಐಪಿಎಲ್ ನಡುವೆ ಬಿಸಿಸಿಐ ಸಭೆ ಕರೆದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಆದರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಸಭೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಬಗ್ಗೆಯಂತೂ ಅಲ್ಲ. ಬದಲಿಗೆ ಮುಂಬರುವ 18ನೇ ಆವೃತ್ತಿಯ ಐಪಿಎಲ್​ನ ಮೆಗಾ ಹರಾಜಿನ ಬಗ್ಗೆ.

IPL 2024: ಇದ್ದಕ್ಕಿದ್ದಂತೆ ಎಲ್ಲಾ ಫ್ರಾಂಚೈಸಿಗಳ ಮಾಲೀಕರ ಸಭೆ ಕರೆದ ಬಿಸಿಸಿಐ..!
ಐಪಿಎಲ್ 2024
Follow us
ಪೃಥ್ವಿಶಂಕರ
|

Updated on:Apr 01, 2024 | 5:12 PM

17ನೇ ಆವೃತ್ತಿಯ ಐಪಿಎಲ್ (IPL 2024)  ಆರಂಭವಾಗಿ ವಾರಕ್ಕೂ ಹೆಚ್ಚು ಸಮಯ ಕಳೆದಿದೆ. ಈಗಾಗಲೇ ಭಾಗಶಃ ಎಲ್ಲಾ ತಂಡಗಳು ತಲಾ 3 ಪಂದ್ಯಗಳನ್ನು ಆಡಿ ಮುಗಿಸಿವೆ. ಮುಂಬರುವ ಪಂದ್ಯಗಳು ಯಾವ ರೀತಿಯಾಗಿ ಅಭಿಮಾನಿಗಳನ್ನು ರಂಜಿಸಲಿವೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಇದೆಲ್ಲದರ ನಡುವೆ ಬಿಸಿಸಿಐ (BCCI), ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರ ಸಭೆ ಕರೆದಿದೆ. ಈ ಸಭೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏಪ್ರಿಲ್ 16 ರಂದು ನಡೆಯಲಿದೆ. ಆ ದಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (GT vs DC) ನಡುವೆ ರೋಚಕ ಪಂದ್ಯ ನಡೆಯಲಿದೆ. ಇದೇ ವೇಳೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಸಭೆ ನಡೆಸಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah), ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಿಸಿಸಿಐ ಸಭೆ ಕರೆದಿರುವುದು ಏಕೆ?

ಐಪಿಎಲ್ ನಡುವೆ ಬಿಸಿಸಿಐ ಸಭೆ ಕರೆದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಆದರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಸಭೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಬಗ್ಗೆಯಂತೂ ಅಲ್ಲ. ಬದಲಿಗೆ ಮುಂಬರುವ 18ನೇ ಆವೃತ್ತಿಯ ಐಪಿಎಲ್​ನ ಮೆಗಾ ಹರಾಜಿನ ಬಗ್ಗೆ. ವಾಸ್ತವವಾಗಿ ಬಿಸಿಸಿಐ ಎರಡು ವರ್ಷಗಳಿಗೊಮ್ಮೆ ಐಪಿಎಲ್​ನ ಮೆಗಾ ಹರಾಜು ನಡೆಸಲಿದೆ. ಅದರಂತೆ ಕಳೆದ ಬಾರಿಯ ಮೆಗಾ ಹರಾಜು 2022ರಲ್ಲಿ ನಡೆದಿತ್ತು. ಹೀಗಾಗಿ ಮುಂದಿನ ವರ್ಷ ಮೆಗಾ ಹರಾಜು ನಡೆಸಲು ಬಿಸಿಸಿಐ ತಯಾರಿ ನಡೆಸಿದೆ. ಆದರೆ ಅದಕ್ಕೂ ಮುನ್ನ ಮುಂದಿನ ಮೆಗಾ ಹರಾಜಿನ ಬಗ್ಗೆ ಫ್ರಾಂಚೈಸಿಗಳಲ್ಲಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಲುವಾಗಿ ಬಿಸಿಸಿಐ ಸಭೆ ಕರೆದಿದೆ ಎಂದು ವರದಿಯಾಗಿದೆ.

ಯಾರಿಗೆಲ್ಲಾ ಆಹ್ವಾನ?

ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳ ಎಲ್ಲಾ ಹತ್ತು ಮಾಲೀಕರಿಗೆ ಸಭೆಯ ಆಹ್ವಾನಗಳನ್ನು ಕಳುಹಿಸಲಾಗಿದೆ. ಇದರ ಹೊರತಾಗಿ, ಮಾಲೀಕರು ತಮ್ಮ ತಂಡದ ಸಿಇಒ ಮತ್ತು ಕಾರ್ಯಾಚರಣಾ ತಂಡಗಳನ್ನು ಸಭೆಗೆ ಕರೆದುಕೊಂಡು ಹೋಗಬಹುದು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಅಜೆಂಡಾ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಐಪಿಎಲ್‌ನ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯುವುದು ಖಚಿತ ಎಂದು ನಂಬಲಾಗಿದೆ.

ಮೂರು ಸಂಗತಿಗಳ ಬಗ್ಗೆ ಚರ್ಚೆ

ಸಭೆಯಲ್ಲಿ ಪ್ರಮುಖವಾಗಿ ಮೂರು ಸಂಗತಿಗಳ ಬಗ್ಗೆ ಚರ್ಚೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಫ್ರಾಂಚೈಸಿಗಳ ನಡುವೆಯೇ ಭಿನ್ನಾಭಿಪ್ರಾಯಗಳಿವೆ ಎಂದು ತಿಳಿದುಬಂದಿದೆ. ಕೆಲವು ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 4 ರಿಂದ 8ಕ್ಕೆ ಏರಿಸಬೇಕು ಎಂದು ಪಟ್ಟುಹಿಡಿದಿವೆ. ಇನ್ನು ಕೆಲವು ಫ್ರಾಂಚೈಸಿಗಳು ಈಗಿನ ನಿಯಮವನ್ನೇ ಮುಂದುವರೆಸಲು ಅಭಿಪ್ರಾಯ ಪಟ್ಟಿವೆ.

ಎರಡನೇಯದ್ದು, ಮೆಗಾ ಹರಾಜಿನಲ್ಲಿ ಈ ಹಿಂದೆ ಬಳಸಲಾಗುತ್ತಿದ್ದ ರೈಟ್ ಟು ಮ್ಯಾಚ್ ಕಾರ್ಡ್ ನಿಯಮವನ್ನು ಮತ್ತೆ ಆರಂಭಿಸುವಂತೆ ಕೇಳಿಕೊಂಡಿವೆ. ವಾಸ್ತವವಾಗಿ ಮೆಗಾ ಹರಾಜಿನ ಸಮಯದಲ್ಲಿ ಈ ಹಿಂದೆ ತನ್ನ ತಂಡದಲ್ಲಿದ್ದ ಆಟಗಾರನನ್ನು ಇತರ ತಂಡಗಳು ಅಧಿಕ ಮೊತ್ತಕ್ಕೆ ಖರೀದಿಸಿದ ಸಮಯದಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ನಿಯಮವನ್ನು ಬಳಸಿ ತನ್ನಲ್ಲಿಯೇ ಉಳಿಸಿಕೊಳ್ಳಬಹುದು. ಆದರೆ ಕೆಲವು ವರ್ಷಗಳ ಹಿಂದೆ ಬಿಸಿಸಿಐ ಈ ನಿಯಮವನ್ನು ರದ್ದುಗೊಳಿಸಿತ್ತು. ಆದರೀಗ ಆ ನಿಯಮವನ್ನು ಮರು ಆರಂಭಿಸುವಂತೆ ಫ್ರಾಂಚೈಸಿಗಳು ಕೇಳಿಕೊಂಡಿವೆ.

ಮೂರನೇಯದ್ದು, ತಂಡಗಳ ಪರ್ಸ್​ ಗಾತ್ರವನ್ನು ಹೆಚ್ಚಿಸಬೇಕೆಂದು ಎಲ್ಲಾ ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ ಎಂದು ತಿಳಿದುಬಂದಿದೆ. ಕಳೆದ ಬಾರಿ ಅಂದರೆ 2023 ರಲ್ಲಿ ನಡೆದ ಮಿನಿ ಹರಾಜಿನಲ್ಲಿ ಎಲ್ಲಾ ತಂಡಗಳಿಗೆ 10 ಕೋಟಿ ರೂಗಳನ್ನು ಅಧಿಕವಾಗಿ ನೀಡಿದ್ದ ಬಿಸಿಸಿಐ, ಫ್ರಾಂಚೈಸಿಗಳ ಪರ್ಸ್​ ಗಾತ್ರವನ್ನು 100 ಕೋಟಿಗೆ ಏರಿಸಿತ್ತು. ಆದರೀಗ ಈ ಗಾತ್ರವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಎಲ್ಲಾ ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ ಎಂದು ತಿಳಿದುಬಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Mon, 1 April 24