ಮಿತಿಮೀರಿದ ಆಟಗಾರರ ವರ್ತನೆ; ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟ ಬಿಸಿಸಿಐ

ಐಪಿಎಲ್ 2026ರಲ್ಲಿ ಹೆಚ್ಚಿದ ಶಿಸ್ತು ಉಲ್ಲಂಘನೆಯಿಂದ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ಆಟಗಾರರು, ಅಧಿಕಾರಿಗಳ ಕೊಠಡಿಗಳಿಗೆ ಅನಧಿಕೃತ ಭೇಟಿ, ಮೊಬೈಲ್ ಬಳಕೆ, ವೇಪಿಂಗ್, ಮಾಲೀಕರ ಹಸ್ತಕ್ಷೇಪದಂತಹ ಘಟನೆಗಳು ಬೆಳಕಿಗೆ ಬಂದಿವೆ. ನಿಯಮ ಮೀರಿದರೆ ಯಾರೇ ಆಗಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಎಚ್ಚರಿಕೆ ನೀಡಿದ್ದಾರೆ.

ಮಿತಿಮೀರಿದ ಆಟಗಾರರ ವರ್ತನೆ; ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟ ಬಿಸಿಸಿಐ
ಐಪಿಎಲ್

Updated on: May 08, 2026 | 10:34 AM

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆಟಗಾರರಿಂದ ಪದೇ ಪದೇ ಶಿಸ್ತು ಉಲ್ಲಂಘನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳ ಭೇಟಿ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ನಾವು ಸುಮ್ಮನೆ ಕುಳಿತಿಲ್ಲ, ನಿಯಮ ಮೀರಿದರೆ ಕಠಿಣ ಶಿಕ್ಷೆ ಖಚಿತ’ ಎಂದು ಎಚ್ಚರಿಸಿದ್ದಾರೆ.

ಕೆಲವು ತಂಡಗಳ ಆಟಗಾರರು ಮತ್ತು ಫ್ರಾಂಚೈಸಿಗಳು ಬಿಸಿಸಿಐ ನಿಗದಿಪಡಿಸಿದ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಮರೆತಿವೆ ಎಂಬ ಆರೋಪ ಕೇಳಿಬಂದಿದೆ. ‘ತಂಡದ ಬಸ್‌ಗಳಲ್ಲಿ ಸಂಬಂಧಪಡದವರು ಪ್ರಯಾಣಿಸುವುದು, ಹೋಟೆಲ್‌ಗಳಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನುಮತಿ ಇಲ್ಲದೆ ಹೊರಗಿನವರು ಭೇಟಿ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಗಂಭೀರ ಅಪರಾಧ’ ಎಂದು ಸೈಕಿಯಾ ಹೇಳಿದ್ದಾರೆ.

ಈ ಬಾರಿ ಐಪಿಎಲ್ ಮೈದಾನಕ್ಕಿಂತ ಹೊರಗಿನ ಘಟನೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್ ಅರ್ಷದೀಪ್ ಸಿಂಗ್, ಹೈದರಾಬಾದ್ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ವ್ಯಕ್ತವಾಗುತ್ತಿದೆ. ಇವರು ಆಟದ ಮೇಲೆ ಗಮನ ಹರಿಸೋದು ಬಿಟ್ಟು ಗರ್ಲ್​​ಫ್ರೆಂಡ್​ ಜೊತೆ ಸುತ್ತಾಡುತ್ತಿದ್ದಾರೆ.

ಮೊಬೈಲ್ ಬಳಕೆ: ಗುುವಾಹಟಿಯಲ್ಲಿ ನಡೆದ ಪಂದ್ಯದ ವೇಳೆ ತಂಡದ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ 1 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ವೇಪಿಂಗ್ ವಿವಾದ: ಆರ್​​ ಆರ್​ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (Vaping) ಬಳಸುತ್ತಿರುವ ದೃಶ್ಯ ವೈರಲ್ ಆಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಚಹಾಲ್ ಕೂಡ ಇದೇ ವಿವಾದ ಮಾಡಿಕೊಂಡಿದ್ದಾರೆ.

ಮಾಲೀಕರಿಗೂ ಬಿಟ್ಟಿಲ್ಲ ವಾರ್ನಿಂಗ್:

ಕೇವಲ ಆಟಗಾರರಷ್ಟೇ ಅಲ್ಲ, ತಂಡದ ಮಾಲೀಕರು ಕೂಡ ನಿಯಮ ಮೀರಿ ಆಟಗಾರರ ಜೊತೆ ಬೆರೆಯುತ್ತಿರುವುದು ಬಿಸಿಸಿಐ ಕಣ್ಣು ಕೆಂಪು ಮಾಡಿತ್ತು. ಎಲ್​​ಎಸ್​ಜಿ ಮಾಲೀಕ ಗೋಯೆಂಕಾ ಅವರು ಪಂತ್​​ಗೆ ಓಪನ್ ಆಗಿ ಎಚ್ಚರಿಕೆ ನೀಡಿದ್ದು ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ

ಇನ್ನು ಮುಂದೆ ಯಾವುದೇ ಸಣ್ಣ ತಪ್ಪು ನಡೆದರೂ ಸಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಅದನ್ನು ಉಲ್ಲಂಘಿಸುವವರು ಸ್ಟಾರ್ ಆಟಗಾರನಾಗಿರಲಿ ಅಥವಾ ತಂಡದ ಮಾಲೀಕನಾಗಿರಲಿ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:31 am, Fri, 8 May 26

Follow Us