ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ (IPL 2021) 14ಗೆ ಇಂದು ತೆರೆ ಬೀಳಲಿದೆ. ಫೈನಲ್ ಹಣಾಹಣಿಯಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ (CSK vs KKR) ಮುಖಾಮುಖಿಯಾಗಲಿದೆ. ಈ ಪಂದ್ಯವು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ದುಕೊಳ್ಳಲಿದ್ದಾರೆ. ಏಕೆಂದರೆ ಇದೇ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಚೇಸ್ ಮಾಡಿ ಗೆದ್ದುಕೊಂಡಿತು. ಹೀಗಾಗಿ ಸಿಎಸ್ಕೆ ನಾಯಕ ಧೋನಿ ಟಾಸ್ ಗೆದ್ದರೆ ಇಂದು ಕೂಡ ಬೌಲಿಂಗ್ ಆಯ್ದುಕೊಳ್ಳಲಿದ್ದಾರೆ.
ಇನ್ನು ದುಬೈ ಮೈದಾನದಲ್ಲಿ ಆಡಿದ ಕಳೆದ ಎಂಟು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡವು ಗೆದ್ದಿದೆ. ಅದರಲ್ಲೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ನೀಡಿದ 173 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಸಿಎಸ್ಕೆ ಅಂತಿಮ ಓವರ್ನಲ್ಲಿ ಚೇಸ್ ಮಾಡಿ ವಿಜಯ ಸಾಧಿಸಿತ್ತು. ಹೀಗಾಗಿ ಈ ಮೈದಾನದಲ್ಲಿ ಚೇಸ್ ಮೂಲಕ ಬೃಹತ್ ಗುರಿಯನ್ನು ಬೆನ್ನಟ್ಟಬಹುದು.
ಹಾಗೆಯೇ ಚೆನ್ನೈ ತಂಡವು ಪ್ರತಿ ಬಾರಿಯ ಐಪಿಎಲ್ ಸೀಸನ್ನಲ್ಲಿ ಯಶಸ್ವಿಯಾಗಿ ಗುರಿಯನ್ನು ಬೆನ್ನಟ್ಟಿದೆ. ಈ ಬಾರಿ ಕೂಡ 6 ಬಾರಿ ಚೇಸಿಂಗ್ ಮಾಡಿ ಗೆಲುವು ಸಾಧಿಸಿದೆ. ಹೀಗಾಗಿ ಫೈನಲ್ನಲ್ಲೂ ಸಿಎಸ್ಕೆ ಚೇಸ್ ಮಾಡೋದು ಬಹುತೇಕ ಖಚಿತ.
ಕೆಕೆಆರ್ ವಿರುದ್ಧ ಚೆನ್ನೈ ಮೇಲುಗೈ:
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಇದುವರೆಗೆ 24 ಪಂದ್ಯಗಳನ್ನು ಆಡಿದೆ. ಇದರಲ್ಲಿ ಸಿಎಸ್ಕೆ ತಂಡ 16 ಬಾರಿ ಗೆದ್ದಿದೆ. 2019 ರ ಸೀಸನ್ನಿಂದ ಚೆನ್ನೈ ತಂಡವು ಕೆಕೆಆರ್ ಅನ್ನು ಐದು ಬಾರಿ ಸೋಲಿಸಿದೆ. ಅಂದರೆ ಕಳೆದ 3 ಸೀಸನ್ನಲ್ಲಿ ಕೋಲ್ಕತ್ತಾ ಒಮ್ಮೆ ಮಾತ್ರ ಸಿಎಸ್ಕೆ ವಿರುದ್ದ ಗೆದ್ದಿದೆ.
ಆರೆಂಜ್ ಕ್ಯಾಪ್ ಮೇಲೆ ಗಾಯಕ್ವಾಡ್ ಕಣ್ಣು:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ರುತುರಾಜ್ ಗಾಯಕ್ವಾಡ್ 15 ಪಂದ್ಯಗಳಲ್ಲಿ 603 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗಾಯಕ್ವಾಡ್ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈ ಸೀಸನ್ ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ 13 ಪಂದ್ಯಗಳಲ್ಲಿ 626 ರನ್ ಗಳಿಸಿದ್ದಾರೆ. ಹೀಗಾಗಿ ಫೈನಲ್ನಲ್ಲಿ 24 ರನ್ಗಳಿಸಿದರೆ ಆರೆಂಜ್ ಕ್ಯಾಪ್ ರುತುರಾಜ್ ಪಾಲಾಗಲಿದೆ.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
(IPL Final 2021: Dhoni’s CSK will have the upper hand in Dubai)