AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ

ನಾರ್ವೆ ಚೆಸ್ 2026ರ ಪ್ರಶಸ್ತಿ ರೇಸ್ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಚಾಂಪಿಯನ್ ಪಟ್ಟಕ್ಕೇರಲು ಕೊನೆಯ ಎರಡು ಸುತ್ತುಗಳು ನಿರ್ಣಾಯಕವಾಗಿವೆ. ಸದ್ಯ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅವರು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕೇವಲ ತಮ್ಮ ಇನ್ನುಳಿದ ಪಂದ್ಯಗಳನ್ನು ಗೆಲ್ಲಲೇಬೇಕು.

ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
R. PraggnanandhaaImage Credit source: Rediff
ಝಾಹಿರ್ ಯೂಸುಫ್
|

Updated on:Jun 03, 2026 | 1:30 PM

Share

ನಾರ್ವೆ ಚೆಸ್ 2026 ಟೂರ್ನಮೆಂಟ್‌ನಲ್ಲಿ ಭಾರತದ ಯುವ ಚೆಸ್ ತಾರೆ, 20 ವರ್ಷದ ಆರ್. ಪ್ರಜ್ಞಾನಂದ (R Praggnanandhaa) ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಸರಿಗಟ್ಟಿದ್ದಾರೆ.

ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

  • ಮೇ 27, 2026 ರಂದು ಪ್ರಜ್ಞಾನಂದ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು.
  • ಜೂನ್ 2, 2026 ರಂದು ಕಪ್ಪು ದಾಳಗಳೊಂದಿಗೆ  ಅದ್ಭುತ ಪ್ರದರ್ಶನ ನೀಡಿ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದ್ದಾರೆ.
  • ಈ ಮೂಲಕ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್​ಗೆ ಒಂದೇ ಕ್ಲಾಸಿಕಲ್ ಟೂರ್ನಮೆಂಟ್​ನಲ್ಲಿ ಎರಡು ಸೋಲುಣಿಸಿದ ಸಾಧನೆ ಮಾಡಿದ್ದಾರೆ.

 ವಿಶಿ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ:

ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು.

ಆ ಬಳಿಕ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.

ಈ ಗೆಲುವಿನೊಂದಿಗೆ, ಕ್ಲಾಸಿಕಲ್ ಚೆಸ್‌ನಲ್ಲಿ ಕಾರ್ಲ್‌ಸನ್ ಅವರನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೋಲಿಸಿದ ವಿಶ್ವದ ಅತ್ಯಂತ ಪ್ರಮುಖ ಗ್ರ್ಯಾಂಡ್‌ಮಾಸ್ಟರ್‌ಗಳ ಗಣ್ಯರ ಪಟ್ಟಿಗೆ ಪ್ರಜ್ಞಾನಂದ ಸೇರಿದ್ದಾರೆ.

ಹಾಗೆಯೇ ಜಯದೊಂದಿಗೆ ನಾರ್ವೆ ಚೆಸ್ 2026 ರ ಪ್ರಶಸ್ತಿ ರೇಸ್ ಮತ್ತಷ್ಟು ರೋಚಕ ಹಂತ ತಲುಪಿದೆ. ಪ್ರಜ್ಞಾನಂದ ಅವರ ಅಂಕಗಳ ಪಟ್ಟಿ ಮೇಲೇರಿದ್ದರೆ, ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದೆ.

ಪ್ರಜ್ಞಾನಂದ ಮುಂದಿನ ಸವಾಲು:

ನಾರ್ವೆ ಚೆಸ್ 2026 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಪ್ರಜ್ಞಾನಂದ ಪಾಲಿಗೆ ಇನ್ನುಳಿದ ಕೊನೆಯ 2 ಸುತ್ತುಗಳು (Round 9 & Round 10) ಅತ್ಯಂತ ನಿರ್ಣಾಯಕವಾಗಿವೆ. ಸದ್ಯದ ಅಂಕಗಳ ಪಟ್ಟಿಯಲ್ಲಿ ಅವರು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅಮೆರಿಕದ ವೆಸ್ಲಿ ಸೋ (14 ಅಂಕ) ಹಾಗೂ  ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಅವರನ್ನು ಹಿಂದಿಕ್ಕಬೇಕು.

ಇದನ್ನೂ ಓದಿ: 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ!

ಇದಕ್ಕಾಗಿ ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಡಿ. ಗುಕೇಶ್ ವಿರುದ್ಧ ಗೆಲ್ಲಬೇಕಾಗಿದೆ. ಈ ಗೆಲುವುಗಳ ಮೂಲಕ ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಅವರ ಕೈಸೇರಲು ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.

Published On - 1:25 pm, Wed, 3 June 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More