ವಿಶ್ವ ಚಾಂಪಿಯನ್ ಗುಕೇಶ್ಗೆ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ
Tata Steel Masters 2025: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಚಾಲೆಂಜರ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆದ್ದು ಡಿ. ಗುಕೇಶ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್‌ನಲ್ಲಿ ಡಿ. ಗುಕೇಶ್ಗೆ ಸೋಲುಣಿಸಿ ಆರ್ ಪ್ರಜ್ಞಾನಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನೆದರ್‌ಲ್ಯಾಂಡ್‌ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಭಾನುವಾರ (ಫೆ.2) ನಡೆದ ಅಂತಿಮ ಸುತ್ತಿನಲ್ಲಿ ಭಾರತೀಯ ಚೆಸ್ ಚತುರರಾದ ಪ್ರಜ್ಞಾನಂದ ಹಾಗೂ ವಿಶ್ವ ಚಾಂಪಿಯನ್ ಡಿ ಗುಕೇಶ್ ಮುಖಾಮುಖಿಯಾಗಿದ್ದರು.
ಇದಕ್ಕೂ ಮುನ್ನ ನಡೆದ ನಿರ್ಣಾಯಕ ಸುತ್ತಿನಲ್ಲಿ ಆರ್. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರೆ, ಡಿ ಗುಕೇಶ್ ಅವರು ಅರ್ಜುನ್ ಎರಿಗೈಸಿ ವಿರುದ್ಧ ಸೋಲನುಭವಿಸಿದರು.
ಆ ಬಳಿಕ ನಡೆದ ಬ್ಲಿಟ್ಜ್ ಪ್ಲೇಆಫ್‌ಗಳಲ್ಲಿ, ಪ್ರಜ್ಞಾನಂದ ಅವರು ಗುಕೇಶ್ ವಿರುದ್ಧ ಮೊದಲ ಗೇಮ್‌ನಲ್ಲಿ ಸೋತರು. ಆ ಬಳಿಕ ಕಂಬ್ಯಾಕ್ ಮಾಡಿದ ಪ್ರಜ್ಞಾನಂದ ಸತತ ಎರಡು ಗೇಮ್ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಟ್ರೈಬ್ರೇಕರ್ನಲ್ಲಿ ಪ್ರಜ್ಞಾನಂದ ಚಾಂಪಿಯನ್:
ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿಯ ಫೈನಲ್ ಸುತ್ತಿನ ಮುಕ್ತಾಯದ ವೇಳೆಗೆ ಡಿ ಗುಕೇಶ್ ಅಗ್ರಸ್ಥಾನ ಅಲಂಕರಿಸಿದರೆ, ಆರ್. ಪ್ರಜ್ಞಾನಂದ ದ್ವಿತೀಯ ಸ್ಥಾನ ಪಡೆದಿದ್ದರು. ಇಬ್ಬರು 8.5 ಅಂಕಗಳನ್ನು ಹೊಂದಿದ್ದರಿಂದ ಚಾಂಪಿಯನ್ ನಿರ್ಣಾಯಕಕ್ಕಾಗಿ ಟ್ರೈಬ್ರೇಕರ್ ಮೊರೆ ಹೋಗಲಾಯಿತು.
ಈ ನಿರ್ಣಾಯಕ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಆರ್. ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
Pragg wins the tiebreak and is our new Tata Steel Masters Champ!! 🏆🔥 pic.twitter.com/o8FtpcB9fD
— Tata Steel Chess Tournament (@tatasteelchess) February 2, 2025
ಇದಾಗ್ಯೂ ಈ ಟೂರ್ನಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆದಿರುವುದು ಡಿ. ಗುಕೇಶ್ ಎಂಬುದು ವಿಶೇಷ. ಗುಕೇಶ್ 2777 ರೇಟಿಂಗ್ ಹೊಂದಿದ್ದರೆ, ಆರ್. ಪ್ರಜ್ಞಾನಂದ 2741 ರೇಟಿಂಗ್ ಪಡೆದುಕೊಂಡಿದ್ದಾರೆ.
ಇನ್ನು ಉಜ್ಬೇಕಿಸ್ತಾನ್ನ ಚೆಸ್ ಚತುರ ನದಿರ್ಬೆಕ್ ಅಬ್ದುಸತ್ತೊರೊವ್ 2766 ರೇಟಿಂಗ್ ಪಡೆದರೆ, ಸ್ಲೋವೆನಿಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಫೆಡೋಸೀವ್ 2724 ರೇಟಿಂಗ್ ಪಡೆದುಕೊಂಡಿದ್ದಾರೆ.
Published On - 11:19 am, Mon, 3 February 25