ಅನ್ನ ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರೊಳಗೆ ಲಾಕ್ ಆಗಿದ್ದ ಶ್ವಾನವನ್ನು ರಕ್ಷಿಸಿದ ಜನ
ಗುವಾಹಟಿಯಲ್ಲಿ ಬಿಸಿಲಿಗೆ ಕಾದ ಕಾರಿನಲ್ಲಿ ಅನ್ನ-ನೀರಿಲ್ಲದೆ ಸಿಲುಕಿದ್ದ ಶ್ವಾನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ತೀವ್ರ ತಾಪಮಾನ ಏರಿಕೆಯಿಂದ ತೊಂದರೆಗೊಳಗಾದ ನಾಯಿಯನ್ನು ಕಂಡ ಜನ, ಕಾರಿನ ಬೀಗ ತೆಗೆದು ಹೊರತೆಗೆದರು. ಪ್ರಥಮ ಚಿಕಿತ್ಸೆ ನೀಡಿ ಪ್ರಾಣಿ ಕಲ್ಯಾಣ ಸಂಸ್ಥೆಗೆ ಹಸ್ತಾಂತರಿಸಿದರು. ಈ ಘಟನೆ, ವಾಹನಗಳಲ್ಲಿ ಸಾಕುಪ್ರಾಣಿಗಳನ್ನು ಬಿಡಬಾರದು ಎಂಬ ಮಹತ್ವದ ಸಂದೇಶ ಸಾರಿದೆ, ಪ್ರಾಣಿ ಸಂರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದೆ.

ಗುವಾಹಟಿ, ಜೂನ್ 03: ನಾಯಿ(Dog)ಯೊಂದು ಅನ್ನ, ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಾಕ್ ಮಾಡಿದ್ದ ಕಾರಿನೊಳಗೆ ಕುಳಿತು ಕಷ್ಟ ಎದುರಿಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನೊಳಗೆ ನಾಯಿಯನ್ನು ಇರಿಸಿ ಮಾಲೀಕ ಲಾಕ್ ಮಾಡಿಕೊಂಡು ಮಾಡಿಕೊಂಡು ಹೋಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅದು ಕಾರಿನಲ್ಲಿಯೇ ಇತ್ತು. ತಾಪಮಾನ ಏರಿಕೆಯಾಗುತ್ತಿದ್ದಂತೆ ಉಸಿರುಗಟ್ಟುವ ಸ್ಥಿತಿ ಉದ್ಭವವಾಗಿತ್ತು. ಕೂಡಲೇ ಸ್ಥಳೀಯರು ನಾಯಿಯನ್ನು ರಕ್ಷಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಬೆಳಗ್ಗೆಯಿಂದಲೇ ನಾಯಿ ಕಾರೊಳಗೆ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗಿ ಕಾರಿನೊಳಗಿನ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪಿತ್ತು. ನಾಯಿಯು ಗಾಳಿ ಇಲ್ಲದೆ ದಣಿದು, ತೀವ್ರ ತೊಂದರೆಯಲ್ಲಿರುವುದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಎಚ್ಚೆತ್ತುಕೊಂಡರು. ನಾಯಿಯ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾದಂತೆ, ಇಡೀ ನೆರೆಹೊರೆಯ ಜನರು ಕಾರಿನ ಸುತ್ತಲೂ ಒಟ್ಟುಗೂಡಿ ಅದನ್ನು ಹೊರತರುವ ಪ್ಲ್ಯಾನ್ ಮಾಡಿದ್ದಾರೆ.
ಯಶಸ್ವಿ ರಕ್ಷಣಾ ಕಾರ್ಯಾಚರಣೆ ಮತ್ತು ಆರೈಕೆ ನಿವಾಸಿಗಳು ಮತ್ತು ಪ್ರಾಣಿ ಪ್ರೇಮಿಗಳು ಒಟ್ಟಾಗಿ ಸೇರಿ ಮಧ್ಯಾಹ್ನ 1.30 ರ ಸುಮಾರಿಗೆ ಕಾರಿನ ಲಾಕ್ ತೆಗೆದು ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಪ್ರಾಣಿ ಕಲ್ಯಾಣ ಸಂಸ್ಥೆಯ ಆಸರೆ: ರಕ್ಷಣೆ ಮಾಡಿದ ತಕ್ಷಣವೇ ನಾಯಿಗೆ ನೀರು ಮತ್ತು ಪ್ರಥಮ ಚಿಕಿತ್ಸೆ ನೀಡಿ, ಅತ್ಯಂತ ಜವಾಬ್ದಾರಿಯುತವಾಗಿ ಸ್ವಯಂಸೇವಾ ಪ್ರಾಣಿ ಕಲ್ಯಾಣ ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಮತ್ತಷ್ಟು ಓದಿ: Video: ಹೈದರಾಬಾದ್ ಏರ್ಪೋರ್ಟ್ನ ವಿಐಪಿ ಲಾಂಜ್ಗೆ ನುಗ್ಗಿದ ಬೀದಿ ನಾಯಿ
ಪ್ರಸ್ತುತ ಪ್ರಾಣಿ ಕಲ್ಯಾಣ ಸಂಸ್ಥೆಯು ನಾಯಿಯನ್ನು ಆರೈಕೆ ಮಾಡುತ್ತಿದ್ದು, ನುರಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಅದಕ್ಕೆ ಅಗತ್ಯವಿರುವ ಪೋಷಣೆ ಮತ್ತು ಚೇತರಿಕೆ ಬೆಂಬಲವನ್ನು ನೀಡಲಾಗುತ್ತಿದೆ. ನಾಯಿ ಈಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ.
ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನೊಳಗಿನ ತಾಪಮಾನ ಕೆಲವೇ ನಿಮಿಷಗಳಲ್ಲಿ ದುಪ್ಪಟ್ಟಾಗುತ್ತದೆ. ಇದು ಸಾಕುಪ್ರಾಣಿಗಳಿಗೆ ಉಸಿರುಗಟ್ಟುವಿಕೆ ಮತ್ತು ಶಾಖದ ಹೊಡೆತವನ್ನು ಉಂಟುಮಾಡಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಮೂಕಪ್ರಾಣಿಗಳನ್ನು ಕಾರಿನೊಳಗೆ ಒಂಟಿಯಾಗಿ ಬಿಡಬೇಡಿ ಎಂದು ಪ್ರಾಣಿ ಕಲ್ಯಾಣ ವಕೀಲರು ಜಾಗೃತಿ ಮೂಡಿಸುತ್ತಿದ್ದಾರೆ. ದಿಸ್ಪುರ್ ಜನರ ಈ ಶ್ಲಾಘನೀಯ ಕಾರುಣ್ಯದ ಕೃತ್ಯವು ಕೇವಲ ಒಂದು ಅಮೂಲ್ಯ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೆ, ಪ್ರಾಣಿಗಳ ಸುರಕ್ಷತೆಯ ಕುರಿತು ಸಮಾಜದಲ್ಲಿ ಒಂದು ಉತ್ತಮ ಸಂದೇಶವನ್ನು ಸಾರಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




