IPL 2026 Auction: 6 ಭಾರತೀಯರು ಸೇರಿದಂತೆ 9 ಆಟಗಾರರು ಐಪಿಎಲ್ ಹರಾಜಿನಿಂದ ಔಟ್
IPL 2026 Auction: ಐಪಿಎಲ್ ಮಿನಿ ಹರಾಜು 2026 ಆಟಗಾರರ ಪಟ್ಟಿಯಲ್ಲಿ ಬಿಸಿಸಿಐ ಪ್ರಮುಖ ಬದಲಾವಣೆ ಮಾಡಿದೆ. ಮೊದಲು 350 ಆಟಗಾರರನ್ನು ಸೇರಿಸಿ, ನಂತರ 9 ಮಂದಿಯನ್ನು ಸೇರಿಸಲಾಗಿತ್ತು. ಆದರೆ ಹರಾಜಿಗೂ ಮುನ್ನ ಈ 9 ಆಟಗಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಸ್ವಸ್ತಿಕ್ ಚಿಕಾರ, ವಿರಾಟ್ ಸಿಂಗ್ ಸೇರಿದಂತೆ ಹಲವು ಭಾರತೀಯ-ವಿದೇಶಿ ಆಟಗಾರರು ಹೊರಬಿದ್ದಿದ್ದು, ಇದಕ್ಕೆ ಕಾರಣ ಅಸ್ಪಷ್ಟವಾಗಿದೆ.

ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ (IPL) ಮಿನಿ ಹರಾಜಿಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿರುವಾಗ ಕೆಲವು ಆಟಗಾರರನ್ನು ಹರಾಜಿನ ಪಟ್ಟಿಯಿಂದ ಕೈಬಿಡಲಾಗಿದೆ. ವಾಸ್ತವವಾಗಿ ಡಿಸೆಂಬರ್ 9 ರಂದು ಬಿಸಿಸಿಐ (BCCI), ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 350 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ ಆ ನಂತರ ಇನ್ನು ಕೆಲವು ಆಟಗಾರರನ್ನು ಈ ಪಟ್ಟಿಗೆ ಸೇರಿಸಿತು. ಆದರೀಗ ಆ ಆಟಗಾರರನ್ನು ಮತ್ತೊಮ್ಮೆ ಹರಾಜು ಪಟ್ಟಿಯಿಂದ ಹೊರಗಿಡಲಾಗಿದೆ. ಕಳೆದ ವರ್ಷದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಸ್ವಸ್ತಿಕ್ ಚಿಕಾರ ಸೇರಿದಂತೆ, ಜಾರ್ಖಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಸಿಂಗ್ ಮತ್ತು ತ್ರಿಪುರಾದ ಪ್ರಭಾವಿ ಆಲ್‌ರೌಂಡರ್ ಮಣಿಶಂಕರ್ ಮುರಾಸಿಂಗ್ ಕೂಡ ಹರಾಜಿನಿಂದ ಹೊರಬಿದ್ದಿದ್ದಾರೆ.
ಐಪಿಎಲ್ ಹರಾಜಿನಿಂದ 9 ಆಟಗಾರರು ಔಟ್
ಕ್ರಿಕೆಟ್ ನೆಕ್ಸ್ಟ್ ವರದಿಯ ಪ್ರಕಾರ , ಹರಾಜಿಗೆ 350 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಬಿಸಿಸಿಐ, ಈ ಪಟ್ಟಿಗೆ ಒಂಬತ್ತು ಆಟಗಾರರ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಿತ್ತು. ಆದಾಗ್ಯೂ, ಹರಾಜಿಗೆ ಕೇವಲ ಮೂರು ದಿನಗಳ ಮೊದಲು, ಈ ಒಂಬತ್ತು ಆಟಗಾರರ ಹೆಸರುಗಳು ಐಪಿಎಲ್ ವೆಬ್‌ಸೈಟ್‌ನಲ್ಲಿ ಮತ್ತೊಮ್ಮೆ ಕಣ್ಮರೆಯಾಗಿವೆ. ಹರಾಜು ಪಟ್ಟಿಯಿಂದ ಹೊರಗುಳಿದ ಆಟಗಾರರಲ್ಲಿ ಆರು ಮಂದಿ ಭಾರತೀಯ ಕ್ರಿಕೆಟಿಗರು, ಮೂವರು ವಿದೇಶಿ ಆಟಗಾರರು ಸೇರಿದ್ದಾರೆ. ವಿರಾಟ್ ಸಿಂಗ್, ಸ್ವಸ್ತಿಕ್ ಚಿಕಾರ, ಮಣಿಶಂಕರ್ ಮುರಾಸಿಂಗ್, ಚಾಮಾ ಮಿಲಿಂದ್, ಕೆಎಲ್ ಶ್ರೀಜಿತ್ ಮತ್ತು ರಾಹುಲ್ ರಾಜ್ ನಾಮ್ಲಾ ಸೇರಿದಂತೆ ಒಟ್ಟು ಆರು ಮಂದಿ ಭಾರತೀಯ ಆಟಗಾರರು ಹರಾಜಿನಿಂದ ಹೊರಬಿದಿದ್ದರೆ, ವೀರಂದೀಪ್ ಸಿಂಗ್ (ಮಲೇಷ್ಯಾ), ಕ್ರಿಸ್ ಗ್ರೀನ್ (ಆಸ್ಟ್ರೇಲಿಯಾ) ಮತ್ತು ಎಥಾನ್ ಬಾಷ್ (ದಕ್ಷಿಣ ಆಫ್ರಿಕಾ) ಎಂಬ ಮೂವರು ವಿದೇಶಿ ಆಟಗಾರರು ಹೊರಗುಳಿದಿದ್ದಾರೆ. ಆದರೆ ಈ ಆಟಗಾರರನ್ನು ಹರಾಜಿನಿಂದ ಹೊರಗಿಡಲು ಕಾರಣ ಏನು ಎಂಬುದು ಇದುವರೆಗು ತಿಳಿದುಬಂದಿಲ್ಲ.
ಐಪಿಎಲ್ ಮಿನಿ ಹರಾಜು ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ಎಲ್ಲಿ ವೀಕ್ಷಿಸಬಹುದು?
ಎಷ್ಟು ಆಟಗಾರರಿಗೆ ಅವಕಾಶ ಸಿಗಲಿದೆ?
ಐಪಿಎಲ್ ಹರಾಜಿನ ವಿಷಯಕ್ಕೆ ಬಂದರೆ, ಡಿಸೆಂಬರ್ 16 ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಹರಾಜು ನಡೆಯಲಿದೆ. ಮಂಗಳವಾರ ಮಧ್ಯಾಹ್ನ 2:30 ಕ್ಕೆ (IST) ಆರಂಭವಾಗಲಿದ್ದು, ಒಟ್ಟು 350 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಆದಾಗ್ಯೂ, ಎಲ್ಲಾ ಆಟಗಾರರು ಹರಾಜಾಗುವುದಿಲ್ಲ. ಬದಲಿಗೆ ಖಾಲಿ ಇರುವ ಒಟ್ಟು 77 ಸ್ಥಾನಗಳಿಗೆ ಆಟಗಾರರ ಭರ್ತಿ ಕಾರ್ಯ ನಡೆಯಲಿದೆ. ಆದಾಗ್ಯೂ, ಪ್ರತಿ ಬಾರಿಯಂತೆ ಈ ಬಾರಿಯೂ ಎಲ್ಲಾ ಸ್ಥಾನಗಳು ಭರ್ತಿಯಾಗುವ ಸಾಧ್ಯತೆ ಕಡಿಮೆ.
ಬಿಸಿಸಿಐ ನಿಯಮಗಳ ಪ್ರಕಾರ ತಂಡಗಳಲ್ಲಿ ಗರಿಷ್ಠ 25 ಆಟಗಾರರು ಇರಬಹುದು. ಹಾಗೆಯೇ ಪ್ರತಿ ತಂಡದಲ್ಲಿ ಕನಿಷ್ಠ 18 ಆಟಗಾರರಿರಬಹುದು. ಇದರ ಪರಿಣಾಮವಾಗಿ, ಅನೇಕ ಫ್ರಾಂಚೈಸಿಗಳು ತಮ್ಮ ಸಂಪೂರ್ಣ ಬಜೆಟ್ ಅನ್ನು ಕೇವಲ 20 ಅಥವಾ 21 ಆಟಗಾರರಿಗೆ ಖರ್ಚು ಮಾಡುತ್ತವೆ, ಇದರಿಂದಾಗಿ ಸ್ಥಾನಗಳು ಎಂದಿಗೂ ಭರ್ತಿಯಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
