WBBL 2025: ಆರ್ಸಿಬಿಯಂತೆಯೇ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ ಹೋಬಾರ್ಟ್ ಹರಿಕೇನ್ಸ್
RCB IPL 2025 and Hobart Hurricanes WBBL Champions: 2025ರ ಕ್ರಿಕೆಟ್ ಲೋಕ ಎರಡು ಐತಿಹಾಸಿಕ ಪ್ರಶಸ್ತಿಗಳಿಗೆ ಸಾಕ್ಷಿಯಾಗಿದೆ. 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದರೆ, ಹೋಬಾರ್ಟ್ ಹರಿಕೇನ್ಸ್ 10 ವರ್ಷಗಳ ಕಾಯುವಿಕೆಯ ನಂತರ ತನ್ನ ಚೊಚ್ಚಲ ಮಹಿಳಾ ಬಿಗ್ ಬ್ಯಾಷ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

2025.. ಕ್ರಿಕೆಟ್ ಲೋಕದಲ್ಲಿ ಎರಡು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಮೊದಲನೆಯದ್ದು, ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದರೆ, ಇದೀಗ 10 ವರ್ಷಗಳ ಕಾಯುವಿಕೆಯ ನಂತರ, ಹೋಬಾರ್ಟ್ ಹರಿಕೇನ್ಸ್ ತಂಡವು ಮಹಿಳಾ ಬಿಗ್ ಬ್ಯಾಷ್ ಲೀಗ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. WBBL 2025 ರ ಫೈನಲ್‌ನಲ್ಲಿ, ಹೋಬಾರ್ಟ್ ಹರಿಕೇನ್ಸ್ ತಂಡವು ಪರ್ತ್ ಸ್ಕಾರ್ಚರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ 11 ನೇ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್ಸಿಬಿಯಂತೆಯೇ ಹರಿಕೇನ್ಸ್ ತಂಡಕ್ಕೂ ಇದು ಚೊಚ್ಚಲ ಪ್ರಶಸ್ತಿಯಾಗಿದೆ.
ಏಕಪಕ್ಷೀಯ ಗೆಲುವು
ಈ ಬಾರಿಯ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿ ಫೈನಲ್ ತಲುಪಿದ್ದ ಹೋಬಾರ್ಟ್ ಹರಿಕೇನ್ಸ್ ತಂಡವು ಪ್ರಶಸ್ತಿ ಪಂದ್ಯದಲ್ಲಿಯೂ ಅದೇ ಪ್ರದರ್ಶನವನ್ನು ಮುಂದುವರಿಸಿತು. ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡವು ಹೋಬಾರ್ಟ್ ತಂಡದ ಬಿಗಿಯಾದ ಬೌಲಿಂಗ್ ಎದುರು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಬೆತ್ ಮೂನಿ 33 ರನ್ ಬಾರಿಸಿದರೆ, ನಾಯಕಿ ಸೋಫಿ ಡಿವೈನ್ 34 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಇನ್ನಿಂಗ್ಸ್ನಿಂದಾಗಿ ಪರ್ತ್ ತಂಡವು ಕೇವಲ 137 ರನ್ ಕಲೆಹಾಕಿತು. ಇತ್ತ ಹೋಬಾರ್ಟ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಲಿನ್ಸೆ ಸ್ಮಿತ್ ಮತ್ತು ಹೀದರ್ ಗ್ರಹಾಂ ತಲಾ ಎರಡು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಹೋಬಾರ್ಟ್ ತಂಡದ ಪರ ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ ಕೇವಲ 44 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಲಿಜೆಲ್ಲೆ ತನ್ನ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಈ ಆವೃತ್ತಿಯ ಮೂರನೇ ಅರ್ಧಶತಕವನ್ನು ಪೂರೈಸಿದರು. ಇವರ ಜೊತೆಗೆ ನ್ಯಾಟ್ ಸಿವರ್-ಬ್ರಂಟ್ ಕೂಡ 35 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಹೋಬಾರ್ಟ್ ಹರಿಕೇನ್ಸ್ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿ ಬೆನ್ನಟ್ಟಿತು.
After 11 seasons…
The Hobart Hurricanes are finally WBBL CHAMPIONS 🏆 #WBBL11 pic.twitter.com/3vKMp6Yvae
— Weber Women’s Big Bash League (@WBBL) December 13, 2025
ಹೋಬಾರ್ಟ್ ಮತ್ತು ಆರ್‌ಸಿಬಿ ಗೆಲುವಿನಲ್ಲಿ ಸಾಮ್ಯತೆ
ಇದು ಮಹಿಳಾ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡದ ಮೊದಲ ಜಯವಾಗಿದೆ. ಈ ಮೂಲಕ ಹೋಬಾರ್ಟ್ ತಂಡವು WBBL ಮತ್ತು BBL ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ. ವಾಸ್ತವವಾಗಿ ಕಳೆದ ಆವೃತ್ತಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಹೋಬಾರ್ಟ್ ಹರಿಕೇನ್ಸ್ ಪುರುಷರ ತಂಡವು ಮೊದಲ ಬಾರಿಗೆ BBL ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ತಂಡದಂತೆಯೇ ಆರ್‌ಸಿಬಿ ಕೂಡ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ. 2024 ರಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್‌ಸಿಬಿ ಮಹಿಳಾ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರೆ, 2025 ರಲ್ಲಿ ಆರ್‌ಸಿಬಿ ಪುರುಷರ ತಂಡ ಕೂಡ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 pm, Sat, 13 December 25
