ಜೈ ಶಾ ಯೋಜನೆಗೆ ಐಸಿಸಿ ಗ್ರೀನ್ ಸಿಗ್ನಲ್; ಇನ್ಮುಂದೆ ಎರಡೂವರೆ ತಿಂಗಳು ನಡೆಯಲಿದೆ ಐಪಿಎಲ್! ಜೊತೆಗೆ?
IPL: 2023 ಮತ್ತು 24ರಲ್ಲಿ 74 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿತ್ತು. ಅದೇ ಸಮಯದಲ್ಲಿ 2025ರಲ್ಲಿ 84 ಪಂದ್ಯಗಳು ಹಾಗೂ 2026ರ ಐಪಿಎಲ್‌ನಲ್ಲಿ 94 ಪಂದ್ಯಗಳು ನಡೆಯಲಿವೆ ಎಂಬುದನ್ನು ಉಲ್ಲೇಖಿಸಿತ್ತು.
ಐಪಿಎಲ್ (IPL) ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೆನೆಂದರೆ, ಈ ವರ್ಷದಿಂದ ಐಪಿಎಲ್ ನಡೆಯುವ ದಿನಗಳ ಅವದಿಯನ್ನು ವಿಸ್ತರಿಸಲಾಗಿದೆ. ಈ ವರ್ಷದಿಂದ ಐಪಿಎಲ್‌ನಲ್ಲಿ ಎಂಟು ತಂಡಗಳ ಬದಲಿಗೆ 10 ತಂಡಗಳು ಭಾಗವಹಿಸುತ್ತಿವೆ. ಜೊತೆಗೆ 15ನೇ ಸೀಸನ್ನಲ್ಲಿ ಹೊಸ ತಂಡ ಗುಜರಾತ್ ಟೈಟಾನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 10 ತಂಡಗಳ ಆಗಮನದಿಂದಾಗಿ ಈಗ ಐಪಿಎಲ್ ಪಂದ್ಯಗಳು ಸಹ ಹೆಚ್ಚಾಗಲಿವೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜೈ ಶಾ (Jay Shah) ಪಂದ್ಯಗಳು ಹೆಚ್ಚಾಗುವ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದರು. ಜೊತೆಗೆ ಇನ್ಮುಂದೆ ಎರಡೂವರೆ ತಿಂಗಳ ಅವಧಿಯನ್ನು ಐಪಿಎಲ್ಗೆ ಮುಡಿಪಿಡುವುದಾಗಿ ತಿಳಿಸಿದ್ದರು. ಜೊತೆಗೆ ಈ ಬಗ್ಗೆ ನಾವು ಐಸಿಸಿಯಲ್ಲಿ ಮನವಿ ಮಾಡಲಿದ್ದೇವೆ ಎಂಬುದನ್ನು ಸಹ ಹೇಳಿದ್ದರು. ಈಗ ಜೈ ಶಾ ಅವರ ಮನವಿಗೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದ್ದು, ಐಪಿಎಲ್‌ಗಾಗಿ ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆಯನ್ನು ಆ ಸಮಯದಲ್ಲಿ ಕಡಿಮೆಗೊಳಿಸುವುದಕ್ಕೆ ಐಸಿಸಿ ಒಪ್ಪಿಕೊಂಡಿದೆ. ಇದರಿಂದ ಇತರೆ ದೇಶಗಳ ಸ್ಟಾರ್ ಕ್ರಿಕೆಟಿಗರು ಐಪಿಎಲ್ ಪಂದ್ಯಾವಳಿಗೆ ಲಭ್ಯರಿರಲಿದ್ದಾರೆ.
ಹೀಗಾಗಿ ಮುಂದಿನ ಸೀಸನ್ನಿಂದ ಐಪಿಎಲ್ ಎರಡೂವರೆ ತಿಂಗಳ ಲೀಗ್ ಆಗಲಿದೆ. ಇದಕ್ಕೆ ಮಂಜೂರಾತಿ ಕೂಡ ನೀಡಲಾಗಿದೆ. ಐಪಿಎಲ್ ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರ ಮತ್ತು ಏಪ್ರಿಲ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಮತ್ತು ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದವರೆಗೆ ಮುಂದುವರಿಯುತ್ತದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕರಡು ಪ್ರಕಾರ, ಈಗ ಕಳೆದ ವಾರ ಮಾರ್ಚ್‌ನಿಂದ ಮೇ ವರೆಗೆ ವಿಂಡೋವನ್ನು ಹೊಂದಿರುವ ಐಪಿಎಲ್ ಈಗ ಎರಡು ವಾರಗಳ ವಿಸ್ತರಣೆಯೊಂದಿಗೆ ಜೂನ್‌ವರೆಗೆ ಹರಡಲಿದೆ ಎಂದು ESPNCricinfo ನಲ್ಲಿ ವರದಿ ಮಾಡಿದೆ.
ಇದು ಯೋಜನೆಯಾಗಿದೆ
ICC ಹೊಸ FTP ರಚಿಸಿದ್ದು, ಇದು ಬಹುತೇಕ ಅಂತಿಮವಾಗಿದೆ. ಈ ಫ್ಯೂಚರ್ಸ್ ಟೂರ್ಸ್ ಮತ್ತು ಪ್ರೋಗ್ರಾಂ (FTP) ಕ್ಯಾಲೆಂಡರ್‌ನಲ್ಲಿ ಹೊಸ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. FTP ಯ ಈ ಸ್ವರೂಪವು ESPNcricinfo ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ಈ ವೆಬ್‌ಸೈಟ್ ತನ್ನ ವರದಿಯಲ್ಲಿ ಹೇಳಿರುವ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಅಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಸೀಮಿತ ಓವರ್‌ಗಳ ದ್ವಿಪಕ್ಷೀಯ ಸರಣಿ ಮೇ 2023 ಮತ್ತು ಏಪ್ರಿಲ್ 2027 ರ ನಡುವೆ ನಡೆಯುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಎರಡು ಪಂದ್ಯಾವಳಿಗಳು ನಡೆಯುವ ನಡುವಿನ ಅಂತರವು ನಿಜವಾದ ಕಥೆಯನ್ನು ಹೇಳುತ್ತದೆ. ಏಕೆಂದರೆ ಪ್ರತಿ ವರ್ಷ ಮಾರ್ಚ್ ಕೊನೆಯ ವಾರ ಮತ್ತು ಜೂನ್ ಮೊದಲ ವಾರದವರೆಗೆ ಐಪಿಎಲ್ ನಡೆಯಲಿದೆ. ಹೀಗಾಗಿ ಆ ಸಮಯದಲ್ಲಿ ಎಲ್ಲಾ ದೇಶಗಳ ಖ್ಯಾತ ಕ್ರಿಕೆಟಿಗರು ಐಪಿಎಲ್‌ನಲ್ಲಿ ಭಾಗವಹಿಸಲು ಐಸಿಸಿ ಅನುವು ಮಾಡಿಕೊಟ್ಟಿದೆ. ಜೊತೆಗೆ ಈ ಬಾರಿಯ ಐಸಿಸಿ ಕರಡು ಜೈ ಶಾ ಅವರ ಎರಡು ವಾರಗಳ ವಿಸ್ತರಣೆಯನ್ನು ದೃಢಪಡಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ, ಈ ಅವಧಿಯಲ್ಲಿ ಬಹಳ ಕಡಿಮೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿದೆ.
ಪಂದ್ಯಗಳು ಹೆಚ್ಚಾಗುತ್ತವೆ
ಇದುವರೆಗೆ ಐಪಿಎಲ್‌ನಲ್ಲಿ ಎಂಟು ತಂಡಗಳು ಆಡುತ್ತಿದ್ದು, ಈ ಬಾರಿಯಿಂದ 10 ತಂಡಗಳು ಆಡಲಿವೆ. 10 ತಂಡಗಳ ಕಾರಣದಿಂದಾಗಿ ಐಪಿಎಲ್ 2022 ರಲ್ಲಿ ಒಟ್ಟು 74 ಪಂದ್ಯಗಳನ್ನು ಆಡಲಾಗಿದೆ. ಮುಂದಿನ ಐದು ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಬಿಸಿಸಿಐ ಹರಾಜು ಹಾಕಿದೆ. ಈ ವೇಳೆ ಬಿಸಿಸಿಐ ಪಂದ್ಯಗಳ ಸಂಖ್ಯೆಯನ್ನು ತಿಳಿಸಿತ್ತು. 2023 ಮತ್ತು 24ರಲ್ಲಿ 74 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿತ್ತು. ಅದೇ ಸಮಯದಲ್ಲಿ 2025ರಲ್ಲಿ 84 ಪಂದ್ಯಗಳು ಹಾಗೂ 2026ರ ಐಪಿಎಲ್‌ನಲ್ಲಿ 94 ಪಂದ್ಯಗಳು ನಡೆಯಲಿವೆ ಎಂಬುದನ್ನು ಉಲ್ಲೇಖಿಸಿತ್ತು.
Published On - 5:53 pm, Sat, 16 July 22