ಏಕದಿನದಲ್ಲಿ ತ್ರಿಶತಕ ಸಿಡಿಸಿದ 14 ವರ್ಷದ ಯುವ ಬ್ಯಾಟರ್; ಎದುರಾಳಿಗೆ 563 ರನ್ ಟಾರ್ಗೆಟ್..!

14-Year-Old Ira Jadhav's Triple Century: ಮುಂಬೈನ 14 ವರ್ಷದ ಇರಾ ಜಾಧವ್ ಅವರು ಭಾರತದ ಅಂಡರ್-19 ಮಹಿಳಾ ಏಕದಿನ ಟ್ರೋಫಿಯಲ್ಲಿ ದಾಖಲೆಯ 346 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇರಾ ಕೇವಲ 157 ಎಸೆತಗಳಲ್ಲಿ 42 ಬೌಂಡರಿ ಮತ್ತು 16 ಸಿಕ್ಸರ್‌ಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಸ್ಮೃತಿ ಮಂಧಾನ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಏಕದಿನದಲ್ಲಿ ತ್ರಿಶತಕ ಸಿಡಿಸಿದ 14 ವರ್ಷದ ಯುವ ಬ್ಯಾಟರ್; ಎದುರಾಳಿಗೆ 563 ರನ್ ಟಾರ್ಗೆಟ್..!
ಇರಾ ಜಾಧವ್
Follow us
ಪೃಥ್ವಿಶಂಕರ
|

Updated on: Jan 12, 2025 | 4:17 PM

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಗಳಿಸುವುದು ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ನ ಕನಸು. ಇಲ್ಲಿಯವರೆಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕ್ರಿಕೆಟಿಗರು ಬಹಳ ಕಡಿಮೆ. ಆದರೆ ಭಾರತದ ಯುವ ಆಟಗಾರ್ತಿಯೊಬ್ಬರು ಇದೀಗ 50 ಓವರ್‌ಗಳ ಪಂದ್ಯಗಳಲ್ಲಿ ತ್ರಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿಯಲ್ಲಿ ಈ ಐತಿಹಾಸಿಕ ಇನ್ನಿಂಗ್ಸ್ ಮೂಡಿಬಂದಿದ್ದು, ಮುಂಬೈನ ಯುವ ಬ್ಯಾಟರ್ 14 ವರ್ಷದ ಇರಾ ಜಾಧವ್ ಈ ಸಾಧನೆ ಮಾಡಿದ್ದಾರೆ.

ತ್ರಿಶತಕ ಬಾರಿಸಿದ ಇರಾ ಜಾಧವ್

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಮುಂಬೈ ಹಾಗೂ ಮೇಘಾಲಯ ನಡುವಿನ ಪಂದ್ಯದಲ್ಲಿ ಇರಾ ಜಾಧವ್ ಈ ದಾಖಲೆಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಅವರು 157 ಎಸೆತಗಳಲ್ಲಿ 346 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಈ ವೇಳೆ ಅವರ ಬ್ಯಾಟ್​ನಿಂದ 42 ಬೌಂಡರಿ ಹಾಗೂ 16 ಸಿಕ್ಸರ್‌ ಕೂಡ ಸಿಡಿದವು. 220 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು 138 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. ಇದರೊಂದಿಗೆ ಇರಾ ಜಾಧವ್ 19 ವರ್ಷದೊಳಗಿನವರ ಏಕದಿನ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಸ್ಮೃತಿ ದಾಖಲೆ ಉಡೀಸ್

ಇರಾ ಜಾಧವ್ ಅವರಿಗಿಂತ ಮೊದಲು 19 ವರ್ಷದೊಳಗಿನವರ ಏಕದಿನ ಟ್ರೋಫಿಯಲ್ಲಿ ಭಾರತದ ಪರ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿತ್ತು. ಸ್ಮೃತಿ ಮಂಧಾನ 224 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದ್ದರು. ಇದೀಗ ತ್ರಿಶತಕ ಬಾರಿಸಿರುವ ಇರಾ ಜಾಧವ್ ಮಂಧಾನ ಅವರ ದಾಖಲೆಯನ್ನು ಮುರಿದಿದ್ದಾರೆ. ಇವರಲ್ಲದೆ ರಾಘವಿ ಬಿಶ್ತ್, ಜೆಮಿಮಾ ರೋಡ್ರಿಗಸ್ ಮತ್ತು ಸಾನಿಕಾ ಚಲ್ಕೆ ಅವರು ಕೂಡ ಅಂಡರ್-19 ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

563 ರನ್ ಟಾರ್ಗೆಟ್

ಇರಾ ಜಾಧವ್ ಅವರ ಈ ಐತಿಹಾಸಿಕ ಇನ್ನಿಂಗ್ಸ್‌ನಿಂದಾಗಿ ಮುಂಬೈ ತಂಡ ಈ ಪಂದ್ಯದಲ್ಲಿ ಮೇಘಾಲಯ ವಿರುದ್ಧ ದೊಡ್ಡ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಗಿದೆ. ಮುಂಬೈ 50 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 563 ರನ್ ಗಳಿಸಿದೆ. ಈ ವೇಳೆ ಮುಂಬೈ ತಂಡದ ನಾಯಕಿ ಹರ್ಲಿ ಗಾಲಾ ಕೂಡ ಶತಕ ಬಾರಿಸಿದರು. ಹರ್ಲಿ ಗಾಲಾ 79 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 116 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ