Irani Cup 2022: 98 ರನ್ಗೆ ಚಾಂಪಿಯನ್ ತಂಡ ಆಲೌಟ್: ಸರ್ಫರಾಜ್ ಖಾನ್ ಭರ್ಜರಿ ಶತಕ
Irani Cup 2022: 98 ರನ್ಗಳ ಟಾರ್ಗೆಟ್ನೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭೀಕರಾದ ಅಭಿಮನ್ಯು ಈಶ್ವರನ್ ಶೂನ್ಯಕ್ಕೆ ಔಟಾದರೆ, ಮಯಾಂಕ್ ಅಗರ್ವಾಲ್ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರು.

Irani Cup 2022: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಡೆಯುತ್ತಿರುವ ಇರಾನಿ ಕಪ್ನ ಮೊದಲ ದಿನದಾಟದಲ್ಲಿ ಶೇಷ ಭಾರತ ತಂಡ ರಣಜಿ ಚಾಂಪಿಯನ್ ಸೌರಾಷ್ಟ್ರ (Saurashtra vs Rest of India) ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ಹನುಮ ವಿಹಾರಿ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ರೆಸ್ಟ್ ಆಫ್ ಇಂಡಿಯಾ ತಂಡದ ಬೌಲರ್ಗಳು ಎದುರಾಳಿಗಳನ್ನು ಕಟ್ಟಿಹಾಕಿದರು. ವೇಗಿ ಮುಖೇಶ್ ಕುಮಾರ್ ಮೊದಲ ಮೂರು ವಿಕೆಟ್ ಕಬಳಿಸಿ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಕುಲ್ದೀಪ್ ಸೇನ್ 2 ವಿಕೆಟ್ ಉರುಳಿಸಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಉಮ್ರಾನ್ ಮಲಿಕ್ ಸೌರಾಷ್ಟ್ರ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಅದರಲ್ಲೂ ಸೌರಾಷ್ಟ್ರ ತಂಡದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ಅವರನ್ನು ಕೇವಲ 1 ರನ್ಗೆ ಕುಲ್ದೀಪ್ ಸೇನ್ ಔಟ್ ಮಾಡಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಧರ್ಮೇಂದ್ರ ಜಡೇಜಾ 28 ರನ್ಗಳಿಸಿದ್ದು ಸೌರಾಷ್ಟ್ರ ಪಾಲಿಗೆ ಗರಿಷ್ಠ ಮೊತ್ತವಾಯಿತು. ಅದರಂತೆ ಮೊದಲ ಇನಿಂಗ್ಸ್ನಲ್ಲಿ ಕೇವಲ 98 ರನ್ಗಳಿಗೆ ಸೌರಾಷ್ಟ್ರ ತಂಡ ಸರ್ವಪತನ ಕಂಡಿದೆ. ಶೇಷ ಭಾರತ ತಂಡದ ಪರ ಮುಖೇಶ್ ಕುಮಾರ್ 10 ಓವರ್ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಹಾಗೂ ಕುಲ್ದೀಪ್ ಸೇನ್ ತಲಾ 3 ವಿಕೆಟ್ ಪಡೆದು ಮಿಂಚಿದರು.
98 ರನ್ಗಳ ಟಾರ್ಗೆಟ್ನೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭೀಕರಾದ ಅಭಿಮನ್ಯು ಈಶ್ವರನ್ ಶೂನ್ಯಕ್ಕೆ ಔಟಾದರೆ, ಮಯಾಂಕ್ ಅಗರ್ವಾಲ್ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಯಶ್ ಧುಲ್ (5) ಕೂಡ ವಿಕೆಟ್ ಕೈಚೆಲ್ಲಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಹನುಮ ವಿಹಾರಿ ಹಾಗೂ ಯುವ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಉತ್ತಮ ಜೊತೆಯಾಟವಾಡಿದರು.
ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸರ್ಫರಾಜ್ ಖಾನ್ ಸೌರಾಷ್ಟ್ರ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 92 ಎಸೆತಗಳಲ್ಲಿ ಸರ್ಫಾರಾಜ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂತು. ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ಹನುಮ ವಿಹಾರಿ ಅರ್ಧಶತಕ ಬಾರಿಸಿದರು. ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆ ಶೇಷ ಭಾರತ ತಂಡವು 3 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿದೆ. ಈ ಮೂಲಕ 107 ರನ್ಗಳ ಮುನ್ನಡೆ ಪಡೆದುಕೊಂಡಿದೆ.
126 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 19 ಫೋರ್ನೊಂದಿಗೆ ಅಜೇಯ 125 ರನ್ ಬಾರಿಸಿರುವ ಸರ್ಫರಾಜ್ ಖಾನ್ ಹಾಗೂ 145 ಎಸೆತಗಳಲ್ಲಿ 62 ರನ್ ಕಲೆಹಾಕಿರುವ ಹನುಮ ವಿಹಾರಿ ಕ್ರೀಸ್ನಲ್ಲಿದ್ದಾರೆ.
Sarfaraz Khan, the monster in Domestic cricket. pic.twitter.com/Q5umH4P2en
— Johns. (@CricCrazyJohns) October 1, 2022
ಏನಿದು ಇರಾನಿ ಕಪ್?
Z.R ಇರಾನಿ ಅಥವಾ ಝಲ್ ಇರಾನಿ ಎಂಬುದು ಬಿಸಿಸಿಐನ ಮಾಜಿ ಅಧ್ಯಕ್ಷರ ಹೆಸರು. ಲಂಡನ್‌ನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿದ್ದ ಇರಾನಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೆಹಲಿಯ ರೋಶನಾರಾ ಕ್ಲಬ್ ಮತ್ತು ಮುಂಬೈನ ಪಾರ್ಸಿ ಜಿಮ್ಖಾನಾ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ 1928-29 ರಿಂದ 1945-46 ಮತ್ತು 1948-49 ರಿಂದ 1961-62 ಅವರು ಭಾರತ ಕ್ರಿಕೆಟ್ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ 1966ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಪ್ರಗತಿಪಥದತ್ತ ಸಾಗಿಸಿದ್ದರು. ಈ ಮೂಲಕ ಸ್ವಾತಂತ್ರ ಭಾರತದಲ್ಲಿ ಕ್ರಿಕೆಟ್ ಅನ್ನು ಬೆಳೆಸುವಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ಸ್ಮರಾರ್ಥ ಇರಾನಿ ಕಪ್ ಅನ್ನು ಆಯೋಜಿಸಲಾಗುತ್ತದೆ.
ಈ ವಿಶೇಷ ಕಪ್ಗಾಗಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೆಣಸುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ಅದರಂತೆ ಈ ಬಾರಿಯ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಶೇಷ ಭಾರತ ತಂಡ ಸೆಣಸುತ್ತಿದೆ.
ಸೌರಾಷ್ಟ್ರ ಪ್ಲೇಯಿಂಗ್ ಇಲೆವೆನ್: ಹಾರ್ವಿಕ್ ದೇಸಾಯಿ , ಸ್ನೆಲ್ ಪಟೇಲ್, ಚೇತೇಶ್ವರ ಪೂಜಾರ , ಶೆಲ್ಡನ್ ಜಾಕ್ಸನ್ , ಅರ್ಪಿತ್ ವಾಸವಾದ , ಪ್ರೇರಕ್ ಮಂಕಡ್ , ಚಿರಾಗ್ ಜಾನಿ , ಜಯದೇವ್ ಉನದ್ಕತ್ (ನಾಯಕ) , ಧರ್ಮೇಂದ್ರಸಿನ್ಹ್ ಜಡೇಜಾ , ಪಾರ್ಥ್ ಭುತ್ , ಚೇತನ್ ಸಕರಿಯಾ
ಶೇಷ ಭಾರತ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್ , ಅಭಿಮನ್ಯು ಈಶ್ವರನ್ , ಯಶ್ ಧುಲ್ , ಹನುಮ ವಿಹಾರಿ (ನಾಯಕ) , ಸರ್ಫರಾಜ್ ಖಾನ್ , ಶ್ರೀಕರ್ ಭರತ್, ಜಯಂತ್ ಯಾದವ್ , ಸೌರಭ್ ಕುಮಾರ್ , ಮುಖೇಶ್ ಕುಮಾರ್ , ಕುಲದೀಪ್ ಸೇನ್ , ಉಮ್ರಾನ್ ಮಲಿಕ್
Published On - 6:55 pm, Sat, 1 October 22




