ಹೊಸ ಇತಿಹಾಸ… ಒಂದೇ ತಂಡದಲ್ಲಿ ಮೂವರು ಸಹೋದರರು..!
Men's U-19 World Cup 2026: ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಜನವರಿ 15 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಕಿರಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ.

ನಮೀಬಿಯಾ-ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ ಅಂಡರ್-19 ಏಕದಿನ ವಿಶ್ವಕಪ್‌ಗಾಗಿ ಒಂದೊಂದೇ ತಂಡಗಳನ್ನು ಘೋಷಿಸಲಾಗುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಬಲಿಷ್ಠ ಪಡೆಯನ್ನು ಹೆಸರಿಸಿದ್ದು, ಈ ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಜಪಾನ್ ಪ್ರಕಟಿಸಿರುವ ತಂಡದಲ್ಲಿ ಮೂವರು ಸಹೋದರರು ಕಾಣಿಸಿಕೊಂಡಿದ್ದಾರೆ.
ಅಂಡರ್-19 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ ಮೂವರು ಸ್ಥಾನ ಪಡೆದಿರುವುದು ಇದೇ ಮೊದಲು. ಈ ಮೂವರು ಜೊತೆಯಾಗಿ ಕಣಕ್ಕಿಳಿದರೆ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಅಂಡರ್-19 ವಿಶ್ವಕಪ್ನಲ್ಲಿ ಮೂವರು ಜೊತೆಯಾಗಿ ಕಣಕ್ಕಿಳಿದ ಚರಿತ್ರೆ ಇಲ್ಲ.
51 ವರ್ಷಗಳ ನಂತರ ಸಹೋದರರ ಸವಾಲ್:
ಕ್ರಿಕೆಟ್ ಇತಿಹಾಸದಲ್ಲಿ ಮೂವರು ಸಹೋದರರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ನ್ಯೂಝಿಲೆಂಡ್ನ ಮೂವರು ಸಹೋದರರನ್ನು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು.
1975 ರ ನ್ಯೂಝಿಲೆಂಡ್ ಏಕದಿನ ವಿಶ್ವಕಪ್ ತಂಡದಲ್ಲಿ, ರಿಚರ್ಡ್ ಹ್ಯಾಡ್ಲೀ, ಬ್ಯಾರಿ ಹ್ಯಾಡ್ಲೀ ಮತ್ತು ಡೇಲ್ ಹ್ಯಾಡ್ಲೀ ಕಾಣಿಸಿಕೊಂಡಿದ್ದರು. ಇದೀಗ ಬರೋಬ್ಬರಿ 51 ವರ್ಷಗಳ ಬಳಿಕ ಮೂವರು ಸಹೋದರರು ಒಂದೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅದರಂತೆ 2026 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಜಪಾನ್ ಪರ ಮಾಂಟ್ಗೊಮೆರಿ ಹರಾ ಹಿಂಝ್, ಗೇಬ್ರಿಯಲ್ ಹರಾ ಹಿಂಝ್ ಮತ್ತು ಚಾರ್ಲ್ಸ್ ಹರಾ ಹಿಂಝ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಹೈಂಜ್ ಸಹೋದರರು ಹೊಸ ಇತಿಹಾಸ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ.
ಜಪಾನ್ ಅಂಡರ್-19 ಏಕದಿನ ವಿಶ್ವಕಪ್ ತಂಡ: ಕಝುಮಾ ಕಟೊ-ಸ್ಟಾಫರ್ಡ್ (ನಾಯಕ), ಚಾರ್ಲ್ಸ್ ಹರಾ-ಹಿಂಝ್, ಗೇಬ್ರಿಯಲ್ ಹರಾ-ಹಿಂಝ್, ಮಾಂಟ್ಗೊಮೆರಿ ಹರಾ-ಹಿಂಝ್, ಕೈಸಿ ಕೊಬಯಾಶಿ-ಡಾಗೆಟ್, ತಿಮೋತಿ ಮೂರ್, ಸ್ಕೈಲರ್ ನಕಾಯಾಮಾ-ಕುಕ್, ರ್ಯುಕಿ ಓಜೆಕಿ, ನಿಹಾರ್ ಪರ್ಮಾರ್, ನಿಖಿಲ್ ಪೋಲ್, ಚಿಹಾಯ ಸಿಕಿನಿ, ಹುಗೊ ತನಿ ಕೆಲ್ಲಿ, ಸಂದೇವ್ ಆರ್ಯನ್, ಕೈ ವಾಲ್, ಟೇಲರ್ ವಾ.
ಇದನ್ನೂ ಓದಿ: IPL 2026: ಮೊದಲು ಹರಾಜಾಗಲಿರುವ 6 ಆಟಗಾರರು ಇವರೇ..!
A ಗ್ರೂಪ್ನಲ್ಲಿ ಜಪಾನ್:
2026 ರ ಅಂಡರ್-19 ವಿಶ್ವಕಪ್‌ಗಾಗಿ ಜಪಾನ್ ತಂಡವು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿರುವ ಇತರ ಮೂರು ತಂಡಗಳೆಂದರೆ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಐರ್ಲೆಂಡ್. ತಂಡವು ಜನವರಿ 5 ರಂದು ಆಫ್ರಿಕಾಕ್ಕೆ ತೆರಳಲಿದ್ದು, ಅಲ್ಲಿ ಜನವರಿ 10 ರಂದು ತಾಂಜಾನಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಜನವರಿ 12 ರಂದು ತಮ್ಮ ಎರಡನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
