77 ಸ್ಥಾನ, 350 ಆಟಗಾರರು, 237.55 ಕೋಟಿ ಬಜೆಟ್; ಐಪಿಎಲ್ ಮಿನಿ ಹರಾಜಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
IPL 2026 Mini Auction: ಐಪಿಎಲ್ 2026 ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯುವ ಈ ಹರಾಜಿನಲ್ಲಿ 77 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು 350 ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರು ಸ್ಪರ್ಧಿಸಲಿದ್ದಾರೆ. ಒಟ್ಟು 237.55 ಕೋಟಿ ರೂ. ಬಜೆಟ್‌ನಲ್ಲಿ ತಂಡಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಆಟಗಾರರನ್ನು ಖರೀದಿಸಲಿವೆ.

ಐಪಿಎಲ್ 2026 ರ ಮಿನಿ ಹರಾಜಿಗೆ (IPL 2026 Mini Auction) ಕ್ಷಣಗಣನೆ ಆರಂಭವಾಗಿದೆ. ಇದು ಮಿನಿ ಹರಾಜಾಗಿರುವ ಕಾರಣ, ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿವೆ. ಎಲ್ಲಾ ಫ್ರಾಂಚೈಸಿಗಳಿಂದ ಒಟ್ಟಾರೆ 77 ಸ್ಥಾನಗಳು ಖಾಲಿ ಇದ್ದು, ಅಂದರೆ ಈ ಮಿನಿ ಹರಾಜಿನಲ್ಲಿ ಗರಿಷ್ಠ 77 ಆಟಗಾರರು ಹರಾಜಾಗಲಿದ್ದಾರೆ. ಈ 77 ಆಟಗಾರರಲ್ಲಿ ಒಬ್ಬರಾಗಲು 350 ಆಟಗಾರರು ಸ್ಪರ್ಧಿಸಲಿದ್ದಾರೆ. ಈ ಮಿನಿ ಹರಾಜಿನ ಬಜೆಟ್ ಒಟ್ಟು 237.55 ಕೋಟಿ ರೂಗಳಾಗಿದ್ದು, ಇಷ್ಟು ಮೊತ್ತದೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಉಳಿದಂತೆ ಈ ಮಿನಿ ಹರಾಜಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೆಗಾ ಹರಾಜು ಮತ್ತು ಮಿನಿ ಹರಾಜಿನ ನಡುವೆ ಇರುವ ವ್ಯತ್ಯಾಸವೇನು?
ಐಪಿಎಲ್‌ನ ಮೆಗಾ ಹರಾಜು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಮೆಗಾ ಹರಾಜಿನ ನಡುವಿನ ಎರಡು ವರ್ಷಗಳಲ್ಲಿ ಮಿನಿ ಹರಾಜುಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ, 2025 ರಲ್ಲಿ ಮೆಗಾ ಹರಾಜು ನಡೆದಿದ್ದರೆ, 2026 ಮತ್ತು 2027 ರಲ್ಲಿ ಮಿನಿ ಹರಾಜು ನಡೆಯುತ್ತದೆ. ಮೆಗಾ ಹರಾಜಿನಲ್ಲಿ, ತಂಡಗಳು ಕೇವಲ ಆರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು ಮತ್ತು ಉಳಿದವರನ್ನು ಖರೀದಿಸಬೇಕು. ಮಿನಿ ಹರಾಜಿನಲ್ಲಿ ಇದು ಹಾಗಲ್ಲ. ಇಲ್ಲಿ, ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ ಮತ್ತು ಅಗತ್ಯದ ಆಧಾರದ ಮೇಲೆ ಕಡಿಮೆ ಆಟಗಾರರನ್ನು ಖರೀದಿಸಲಾಗುತ್ತದೆ.
ಈ ಮಿನಿ ಹರಾಜಿನಲ್ಲಿ ಎಷ್ಟು ಆಟಗಾರರು ಭಾಗವಹಿಸಲಿದ್ದಾರೆ?
ಐಪಿಎಲ್ 2026 ಮಿನಿ ಹರಾಜಿಗೆ 1,390 ಆಟಗಾರರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಬಿಸಿಸಿಐ 350 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಶಾರ್ಟ್‌ಲಿಸ್ಟ್ ಮಾಡಿದವರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಸೇರಿದ್ದಾರೆ.
ಯಾವ ತಂಡದ ಬಳಿ ಎಷ್ಟು ಹಣವಿದೆ?
- ಕೆಕೆಆರ್ 64.30 ಕೋಟಿ
- ಸಿಎಸ್ಕೆ 43.40 ಕೋಟಿ
- ಎಸ್ಆರ್ಹೆಚ್ 25.50 ಕೋಟಿ
- ಲಕ್ನೋ 22.95 ಕೋಟಿ
- ಆರ್ಸಿಬಿ 16.40 ಕೋಟಿ
- ರಾಜಸ್ಥಾನ್ 16.05 ಕೋಟಿ
- ಪಂಜಾಬ್ 11.50 ಕೋಟಿ
- ಗುಜರಾತ್ ಟೈಟನ್ಸ್ 12.90 ಕೋಟಿ
- ಮುಂಬೈ 2.75 ಕೋಟಿ
ಐಪಿಎಲ್ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಂಡಿವೆ ಮತ್ತು ಎಷ್ಟು ಸ್ಥಾನಗಳು ಖಾಲಿ ಇವೆ?
10 ಐಪಿಎಲ್ ತಂಡಗಳು 173 ಆಟಗಾರರನ್ನು ಉಳಿಸಿಕೊಂಡಿದ್ದು, ಅವರಲ್ಲಿ 45 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಸಾಮಾನ್ಯವಾಗಿ, 10 ತಂಡಗಳು 80 ವಿದೇಶಿ ಆಟಗಾರರು ಸೇರಿದಂತೆ 250 ಆಟಗಾರರನ್ನು ಹೊಂದಬಹುದು. ಪರಿಣಾಮವಾಗಿ, 77 ಸ್ಥಾನಗಳು ಖಾಲಿ ಇವೆ. ಅದರಲ್ಲಿ 52 ಭಾರತೀಯ ಆಟಗಾರರು ಮತ್ತು 25 ವಿದೇಶಿ ಆಟಗಾರರ ಸ್ಥಾನಗಳು ಖಾಲಿ ಇವೆ.
ಟ್ರೆಡ್ ವಿಂಡೋ ಮೂಲಕ ಖರೀದಿಯಾದ ಆಟಗಾರರು ಯಾರು?
ಐಪಿಎಲ್ 2026 ರ ಹರಾಜಿಗೂ ಮೊದಲು ಒಟ್ಟು ಎಂಟು ಆಟಗಾರರನ್ನು ಟ್ರೆಡ್ ವಿಂಡೋ ಮೂಲಕ ಖರೀದಿ ಮಾಡಲಾಗಿದೆ. ಇದರಲ್ಲಿ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಮೊಹಮ್ಮದ್ ಶಮಿ ಮತ್ತು ಅರ್ಜುನ್ ತೆಂಡೂಲ್ಕರ್ ಹೆಸರುಗಳು ಸೇರಿವೆ.
ಐಪಿಎಲ್ 2026 ರ ಮಿನಿ ಹರಾಜು ಯಾವ ಕ್ರಮದಲ್ಲಿ ನಡೆಯುತ್ತದೆ?
ಈ ಮಿನಿ ಹರಾಜು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಆಟಗಾರರ ಗುಂಪಿನೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಬ್ಯಾಟ್ಸ್‌ಮನ್‌ಗಳು, ಆಲ್‌ರೌಂಡರ್‌ಗಳು, ವಿಕೆಟ್‌ಕೀಪರ್‌ಗಳು, ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳ ವಿಭಾಗವಿರಲಿದೆ. ಆ ಬಳಿಕ ಅನ್‌ಕ್ಯಾಪ್ಡ್ ಆಟಗಾರರ ಸರದಿ ಬರಲಿದೆ. ಆರಂಭಿಕ ಐದು ಸೆಟ್‌ಗಳಲ್ಲಿ ಸೇರಿಸಲಾದ 34 ಆಟಗಾರರ ಹೆಸರುಗಳನ್ನು ಕ್ರಮೇಣವಾಗಿ ಆಯ್ಕೆ ಮಾಡಲಾಗುತ್ತದೆ. ಅಂದರೆ ತಂಡಗಳು ಅವರನ್ನು ಖರೀದಿಸಲು ಹೆಚ್ಚಿನ ಸಮಯವನ್ನು ಹೊಂದಿರುತ್ತವೆ. ಆದಾಗ್ಯೂ, ಅನ್‌ಕ್ಯಾಪ್ಡ್ ಆಟಗಾರರ ಸೆಟ್ ಬಂದ ತಕ್ಷಣ ಬಿಡ್ಡಿಂಗ್ ವೇಗ ಹೆಚ್ಚಾಗುತ್ತದೆ.
ಎಲ್ಲಾ 350 ಆಟಗಾರರ ಹೆಸರುಗಳನ್ನು ಹರಾಜಿನಲ್ಲಿ ಕರೆಯಲಾಗುತ್ತದೆಯೇ?
ಇಲ್ಲ. ಹರಾಜಿನಲ್ಲಿ 50 ಕ್ಕೂ ಹೆಚ್ಚು ಆಟಗಾರರು ಮಾರಾಟವಾದ ನಂತರ, ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಎಲ್ಲಾ ತಂಡಗಳು ಹೆಸರಿಸುವ ಆಟಗಾರರನ್ನು ನಂತರ ಹರಾಜು ಮಾಡಲಾಗುತ್ತದೆ.
ಐಪಿಎಲ್ 2026 ರ ಮಿನಿ ಹರಾಜು ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಐಪಿಎಲ್ 2026 ರ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತದೆ.
ಐಪಿಎಲ್ 2026 ಹರಾಜನ್ನು ಎಲ್ಲಿ ವೀಕ್ಷಿಸಬಹುದು?
ಐಪಿಎಲ್ 2026 ಮಿನಿ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Mon, 15 December 25
