
ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಟೆಸ್ಟ್ ನಿವೃತ್ತಿಯಿಂದ ಭಾರತೀಯ ಕ್ರಿಕೆಟ್ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ಈ ದಂತಕಥೆಗಳ ನಿವೃತ್ತಿ ಘೋಷಣೆಯನ್ನು ಕ್ರಿಕೆಟ್ ಅಭಿಮಾನಿಗಳು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈಗ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಸ್ಫೋಟಕ ಹೇಳಿಕೆಯೊಂದಿಗೆ ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಹೊರಡುವ ಮುನ್ನ ಬುಮ್ರಾ ಹೇಳಿರುವ ಮಾತು ಅವರ ನಿವೃತ್ತಿಯ ಸೂಚನೆಗಳನ್ನು ನೀಡಿದೆ. ಬುಮ್ರಾ ಸಂದರ್ಶನವೊಂದರಲ್ಲಿ ತನಗೆ ವೃತ್ತಿಗಿಂತ ಕುಟುಂಬ ಮುಖ್ಯ ಎಂದು ಹೇಳಿಕೊಂಡಿರುವುದು, ಅವರು ಯಾವಾಗ ಬೇಕಾದರೂ ನಿವೃತ್ತಿ ಹೇಳಬಹುದು ಎಂಬುದನ್ನು ಪ್ರತಿಬಿಂಬಿಸುತ್ತದೆ.
ಜೂನ್ 20 ರಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಬುಮ್ರಾ ಟೀಂ ಇಂಡಿಯಾದ ಅತಿದೊಡ್ಡ ಶಕ್ತಿಯಾಗಲಿದ್ದಾರೆ. ಟೀಂ ಇಂಡಿಯಾ ಗೆಲ್ಲುತ್ತದೆಯೋ, ಸೋಲುತ್ತದೆಯೋ ಅಥವಾ ಸರಣಿಯನ್ನು ಡ್ರಾ ಮಾಡಿಕೊಳ್ಳುತ್ತದೆಯೋ ಎಂಬುದು ಬುಮ್ರಾ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಬುಮ್ರಾ ಅವರ ಫಿಟ್ನೆಸ್ ಕೂಡ ಈ ವಿಷಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ, ಇದರಿಂದಾಗಿ ಅವರು ಸರಣಿಯ ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದರೆ, ಇದೀಗ ಬುಮ್ರಾ ತಮ್ಮ ಹೇಳಿಕೆಯಿಂದ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರೊಂದಿಗಿನ ಸಂದರ್ಶನದಲ್ಲಿ ಬುಮ್ರಾ ಕೆಲಸದ ಹೊರೆ, ಕುಟುಂಬ ಇತ್ಯಾದಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಬುಮ್ರಾ ವೃತ್ತಿಗಿಂತ ಕುಟುಂಬ ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದರು. ‘ಬಿಯಾಂಡ್ 23′ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಬುಮ್ರಾ, ‘ನನಗೆ, ನನ್ನ ಕುಟುಂಬವು ನನ್ನ ವೃತ್ತಿಜೀವನಕ್ಕಿಂತ ಮುಖ್ಯವಾಗಿದೆ ,ಏಕೆಂದರೆ ಅದು ಶಾಶ್ವತವಾಗಿರುತ್ತದೆ. ನಾನು ತುಂಬಾ ಗಂಭೀರವಾಗಿ ಪರಿಗಣಿಸುವ ಎರಡು ವಿಷಯಗಳಿವೆ – ಒಂದು ನನ್ನ ಕುಟುಂಬ ಮತ್ತು ಇನ್ನೊಂದು ನನ್ನ ಆಟ. ಆದರೆ ಕುಟುಂಬವು ಮೊದಲು ಬರುತ್ತದೆ’ ಎಂದಿದ್ದಾರೆ.
ಸಧ್ಯಕ್ಕೆ ಬುಮ್ರಾ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಗಳಿಲ್ಲವಾದರೂ ಅವರು ಹೇಳಿದ ಮಾತುಗಳಿಂದ ಅವರು ನಿವೃತ್ತಿ ಘೋಷಿಸುವ ಸಮಯ ದೂರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮೂರು ಸ್ವರೂಪಗಳನ್ನು ಸತತವಾಗಿ ಆಡುವುದು ಕಷ್ಟ ಎಂದು ಬುಮ್ರಾ ಸಂದರ್ಶನದಲ್ಲಿ ಸೂಚಿಸಿದ್ದಾರೆ. ‘ಯಾರಾದರೂ ದೀರ್ಘಕಾಲ ಎಲ್ಲವನ್ನೂ ಆಡುತ್ತಲೇ ಇರುವುದು ಕಷ್ಟ ಎಂಬುದು ಸ್ಪಷ್ಟ. ನಾನು ಇದನ್ನು ಬಹಳ ಸಮಯದಿಂದ ಮಾಡುತ್ತಿದ್ದೇನೆ ಆದರೆ ಸ್ವಲ್ಪ ಸಮಯದ ನಂತರ ನೀವು ನಿಮ್ಮ ದೇಹವನ್ನು ನೋಡಬೇಕು, ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡಬೇಕು ಎಂದು ಬುಮ್ರಾ ಹೇಳಿದ್ದಾರೆ.
IPL 2025: ಸತತ 9 ಆವೃತ್ತಿ; ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ
ಬುಮ್ರಾ ಅವರ ಈ ಹೇಳಿಕೆಯಿಂದ, ಈ ಸ್ಟಾರ್ ವೇಗದ ಬೌಲರ್ ಮುಂಬರುವ ದಿನಗಳಲ್ಲಿ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಪ್ರಶ್ನೆ ಏನೆಂದರೆ ಅವರು ಯಾವ ಸ್ವರೂಪವನ್ನು ಮೊದಲು ಬಿಡುತ್ತಾರೆ? ಆದಾಗ್ಯೂ, ಬುಮ್ರಾ ಅವರ ಪ್ರಸ್ತುತ ಗಮನ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಮತ್ತು ನಂತರ ಮುಂದಿನ ವರ್ಷ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಮೇಲಿದೆ. ಅದಾದ ನಂತರ ಅವರು ಯಾವುದೇ ಒಂದು ಸ್ವರೂಪದಿಂದ ನಿವೃತ್ತರಾದರೆ ಅದು ಆಶ್ಚರ್ಯವೇನಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ