ENG vs IND: ಗಿಲ್, ಬುಮ್ರಾಗೆ ಬೇಡ; ಟೆಸ್ಟ್ ನಾಯಕತ್ವವನ್ನು ಈ ಅನುಭವಿಗೆ ನೀಡಿ ಎಂದ ಅಶ್ವಿನ್
India Test Captain: ರೋಹಿತ್ ಮತ್ತು ಕೊಹ್ಲಿ ಅವರ ನಿವೃತ್ತಿಯ ನಂತರ, ಭಾರತದ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಶುಭ್‌ಮನ್ ಗಿಲ್ ಮತ್ತು ಜಸ್ಪ್ರೀತ್ ಬುಮ್ರಾ ನಾಯಕತ್ವಕ್ಕಾಗಿ ಪೈಪೋಟಿಯಲ್ಲಿದ್ದಾರೆ. ಆದರೆ, ಮಾಜಿ ಕ್ರಿಕೆಟರ್ ಆರ್. ಅಶ್ವಿನ್ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ನೇಮಿಸುವಂತೆ ಸಲಹೆ ನೀಡಿದ್ದಾರೆ. ಅವರ ಅನುಭವ ಮತ್ತು ಐಪಿಎಲ್ ನಾಯಕತ್ವದ ಅನುಭವವನ್ನು ಅವರು ಉಲ್ಲೇಖಿಸಿದ್ದಾರೆ. ಗಿಲ್ ಯುವ ಆಟಗಾರನಾಗಿದ್ದು, ಅವನ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವುದು ಸೂಕ್ತವಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ನಲ್ಲಿ ಭಾರತ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ (India tour of England 2025) ಕೈಗೊಳ್ಳಲಿದೆ. ಈ ಸರಣಿಗೆ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ಟೆಸ್ಟ್ ತಂಡಕ್ಕೆ ನಾಯಕತ್ವದ ಸಮಸ್ಯೆ ಎದುರಾಗಿದೆ. ಏಕೆಂದರೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗಿನಿಂದ ನಾಯಕನಿಗಾಗಿ ಹುಡುಕಾಟ ಆರಂಭವಾಗಿದೆ. ಟೆಸ್ಟ್ ನಾಯಕತ್ವದ ರೇಸ್‌ನಲ್ಲಿ ಶುಭ್‌ಮನ್ ಗಿಲ್ (Shubman Gill) ಮತ್ತು ಜಸ್ಪ್ರೀತ್ ಬುಮ್ರಾ ಇದ್ದಾರೆ. ಆದರೆ ಸದಾ ಇಂಜುರಿಗೆ ತುತ್ತಾಗುವ ಬುಮ್ರಾ ಬದಲು ಶುಭ್‌ಮನ್ ಗಿಲ್‌ಗೆ ನಾಯಕತ್ವ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಜಡೇಜಾಗೆ ನಾಯಕತ್ವ ನೀಡಿ
ಆದರೆ ಭಾರತದ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ನಾಯಕತ್ವಕ್ಕೆ ಅನುಭವಿ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಿವೃತ್ತಿಯ ನಂತರ, ತಂಡದ ಅತ್ಯಂತ ಅನುಭವಿ ಆಟಗಾರನಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಬೇಕೆಂದು ಆರ್ ಅಶ್ವಿನ್ ಒತ್ತಾಯಿಸಿದ್ದಾರೆ. 25 ವರ್ಷದ ಗಿಲ್ ಮೇಲೆ ಇಷ್ಟೊಂದು ಒತ್ತಡ ಹೇರುವುದು ಸರಿಯಲ್ಲ. ಹೀಗಾಗಿ ರವೀಂದ್ರ ಜಡೇಜಾ ತಂಡದಲ್ಲಿ ಅನುಭವಿ ಆಟಗಾರರಾಗಿದ್ದು, ಅವರಿಗೆ ಜವಾಬ್ದಾರಿ ನೀಡಬೇಕು ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.
ಗಿಲ್‌ಗೆ ಉಪನಾಯಕತ್ವ
ಈ ಬಗ್ಗೆ ಆರ್ ಅಶ್ವಿನ್ ಮಾತನಾಡಿ, ‘ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರ ರವೀಂದ್ರ ಜಡೇಜಾ. ನೀವು ಹೊಸ ಆಟಗಾರನಿಗೆ ತರಬೇತಿ ನೀಡಲು ಬಯಸಿದರೆ, ಎರಡು ವರ್ಷಗಳ ಕಾಲ ರವೀಂದ್ರ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿ. ಜಡೇಜಾ ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸಬಹುದು. ಅಲ್ಲದೆ, ಶುಭ್‌ಮನ್ ಗಿಲ್‌ಗೆ ಉಪನಾಯಕತ್ವದ ಜವಾಬ್ದಾರಿಯನ್ನು ನೀಡಿ. ಪ್ರತಿಯೊಬ್ಬ ಆಟಗಾರನಿಗೂ ಭಾರತ ತಂಡದ ನಾಯಕತ್ವದ ಕನಸು ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರವೀಂದ್ರ ಜಡೇಜಾ ಈ ಪಾತ್ರವನ್ನು ಸಂತೋಷದಿಂದ ಒಪ್ಪಿಕೊಳ್ಳಬಹುದು. ಜಡೇಜಾಗೆ ನಾಯಕತ್ವ ವಹಿಸಿಕೊಳ್ಳುವ ಯಾವುದೇ ಆಸೆ ಇಲ್ಲ. ಆದರೆ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.
ENG vs IND: ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಯಾರಿಗೆಲ್ಲ ಅವಕಾಶ?
ಜಡೇಜಾಗೆ ಸಾಕಷ್ಟು ಅನುಭವ
ಐಸಿಸಿ ಇತ್ತೀಚೆಗೆ ಪ್ರಕಟಿಸಿದ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ ಜಡೇಜಾ 2012 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ. ಅವರ 13 ವರ್ಷಗಳ ವೃತ್ತಿಜೀವನದಲ್ಲಿ, ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಮತ್ತೊಂದೆಡೆ, ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಹೀಗಾಗಿ ಅನುಭವದ ಆಧಾರದ ಮೇಲೆ ಜಡೇಜಾಗೆ ಭಾರತ ಟೆಸ್ಟ್ ತಂಡದ ನಾಯಕತ್ವ ನೀಡಬೇಕು ಎಂಬುದು ಅಶ್ವಿನ್ ಅಭಿಪ್ರಾಯವಾಗಿದೆ. ಆದರೆ ಬಿಸಿಸಿಐ, ಜಡೇಜಾರನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಯುವ ಆಟಗಾರನಿಗೆ ನಾಯಕತ್ವ ನೀಡುವ ಇರಾದೆಯಲ್ಲಿ ಬಿಸಿಸಿಐ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
