PAK vs BAN: ಭಾರತದ 2 ಶತ್ರು ರಾಷ್ಟ್ರಗಳ ನಡುವೆ ಟಿ20 ಸರಣಿ; ಒಪ್ಪಿಗೆ ಸೂಚಿಸಿದ ಸರ್ಕಾರ
Bangladesh Cricket Tour of Pakistan: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕಡಿಮೆಯಾದ ನಂತರ, ಬಾಂಗ್ಲಾದೇಶ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಸರ್ಕಾರದ ಅನುಮತಿಯನ್ನು ಪಡೆದ ನಂತರ ಈ ಪ್ರವಾಸ ಸಾಧ್ಯವಾಗಿದೆ. ಮೇ 17 ರಿಂದ ಐಪಿಎಲ್ ಮತ್ತು ಪಿಎಸ್ಎಲ್ ಮತ್ತೆ ಪ್ರಾರಂಭವಾಗಿದ್ದು, ಕ್ರಿಕೆಟ್ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಬಾಂಗ್ಲಾದೇಶ ತಂಡ ಮೊದಲು ಯುಎಇ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಲಿದೆ.

ಆಪರೇಷನ್ ಸಿಂಧೂರ್ (Operation Sindoor) ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಕ್ರಿಕೆಟ್ ಮೇಲೂ ನೇರ ಪರಿಣಾಮ ಬೀರಿತು. ಎರಡೂ ದೇಶಗಳಲ್ಲಿ ನಡೆಯುತ್ತಿದ್ದ ಐಪಿಎಲ್ (IPL 2025) ಮತ್ತು ಪಿಎಸ್ಎಲ್ ಅನ್ನು ಸ್ಥಗಿತಗೊಳಿಸಬೇಕಾಯಿತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ್ದು, ಮೇ 17 ರಿಂದ ಐಪಿಎಲ್ ಮತ್ತು ಪಿಎಸ್ಎಲ್ ಮತ್ತೆ ಪ್ರಾರಂಭವಾಗಲಿವೆ. ಏತನ್ಮಧ್ಯೆ, ಮತ್ತೊಂದು ಸರಣಿ ತೊಂದರೆಯಲ್ಲಿರುವಂತೆ ತೋರುತ್ತಿತ್ತು ಆದರೆ ಈಗ ಆ ಸರಣಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಬಾಂಗ್ಲಾದೇಶ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ.
ಪಾಕಿಸ್ತಾನ-ಬಾಂಗ್ಲಾದೇಶ ಟಿ20 ಸರಣಿ
ಬಾಂಗ್ಲಾದೇಶ ಕ್ರಿಕೆಟ್ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ತೆರಳಲಿದೆ. ಇದಕ್ಕೆ ಸರ್ಕಾರ ಅನುಮತಿ ನೀಡಿದೆ. ಪಾಕಿಸ್ತಾನ ಪ್ರವಾಸ ಮಾಡಲು ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ (ಮೇ 15) ತಿಳಿಸಿದೆ. ತಂಡವು ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಬಿಸಿಬಿ ಅಧಿಕಾರಿಯೊಬ್ಬರು ಇದನ್ನು ಕ್ರಿಕ್‌ಬಜ್‌ಗೆ ದೃಢಪಡಿಸಿ,‘ನಮಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ, ಆದರೂ ನಮಗೆ ಇನ್ನೂ ಅಧಿಕೃತ ಪತ್ರ ಬಂದಿಲ್ಲ, ಆದರೆ ನನಗೆ ತಿಳಿದಿರುವಂತೆ, ಸರ್ಕಾರವು ತಾತ್ವಿಕವಾಗಿ ನಮಗೆ ಪಾಕಿಸ್ತಾನ ಪ್ರವಾಸ ಮಾಡಲು ಅವಕಾಶ ನೀಡುತ್ತದೆ ಎಂದು ನಿರ್ಧರಿಸಿದೆ’ ಎಂದು ಹೇಳಿದರು.
ಆದಾಗ್ಯೂ, ಬಿಸಿಬಿ ಅಧಿಕಾರಿಯೊಬ್ಬರು, ‘ಸರ್ಕಾರದಿಂದ ಅನುಮತಿ ಪತ್ರ ಪಡೆದ ನಂತರ, ನಾವು ನಮ್ಮ ಆಟಗಾರರೊಂದಿಗೆ ಮಾತನಾಡುತ್ತೇವೆ ಏಕೆಂದರೆ ಕೆಲವು ಆಟಗಾರರು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸ ಮಾಡಲು ಬಯಸುವುದಿಲ್ಲ ಎಂದು ನಮಗೆ ತಿಳಿದುಬಂದಿದೆ. ನಾವು ಯಾವುದೇ ಆಟಗಾರನ ಮೇಲೆ ಒತ್ತಡ ಹೇರುವುದಿಲ್ಲ’ ಎಂದಿದ್ದಾರೆ.
14 ರಂದು ಯುಎಇ ಪ್ರವಾಸ
ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ಬಾಂಗ್ಲಾದೇಶ ತಂಡ ಯುಎಇ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಕ್ಕಾಗಿ ಬಾಂಗ್ಲಾದೇಶ ತಂಡ ಮೇ 14 ರಂದು ಯುಎಇಗೆ ತೆರಳಿದೆ. ಬಾಂಗ್ಲಾದೇಶ ತಂಡವು ಮೇ 17 ಮತ್ತು 19 ರಂದು ಶಾರ್ಜಾದಲ್ಲಿ ಯುಎಇ ವಿರುದ್ಧ ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ನಂತರ ತಂಡ ಪಾಕಿಸ್ತಾನಕ್ಕೆ ತೆರಳಲಿದೆ. ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿಯಲ್ಲಿ ತಿದ್ದುಪಡಿ ಮಾಡಿದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂಬರುವ ಪ್ರವಾಸದ ಪರಿಷ್ಕೃತ ವೇಳಾಪಟ್ಟಿಯನ್ನು ಮೇ 13 ರಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಕಳುಹಿಸಿತ್ತು.
ಮೇ 27 ರಂದು ಮೊದಲ ಟಿ20 ಪಂದ್ಯ
ಉಭಯ ತಂಡಗಳ ನಡುವಿನ ಸರಣಿಯನ್ನು ಭಾರತದಲ್ಲಿ ಐಪಿಎಲ್ 2025 ರ ಪ್ಲೇಆಫ್ ಸುತ್ತಿನ ಪಂದ್ಯಗಳು ನಡೆಯುತ್ತಿರುವ ಸಮಯದಲ್ಲಿ ಆಡಲಾಗುತ್ತದೆ. ಬಿಸಿಬಿಗೆ ಕಳುಹಿಸಲಾದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ಮೇ 27 ರಂದು ನಡೆಯಲಿದೆ. ಈ ಮೊದಲು ಈ ಟಿ20 ಸರಣಿಯನ್ನು ಮೇ 25 ರಿಂದ ಜೂನ್ 3 ರವರೆಗೆ ಆಡಬೇಕಿತ್ತು, ಆದರೆ ಪಿಎಸ್‌ಎಲ್ ಅಮಾನತುಗೊಂಡ ನಂತರ, ಅದನ್ನು ಎರಡು ದಿನಗಳವರೆಗೆ ವಿಸ್ತರಿಸಲಾಯಿತು. ಸರಣಿಯ ಕೊನೆಯ ಪಂದ್ಯ ಜೂನ್ 5 ರಂದು ನಡೆಯಲಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಮೊದಲ ಮೂರು ಪಂದ್ಯಗಳು ಮೇ 27, 29 ಮತ್ತು ಜೂನ್ 1 ರಂದು ಫೈಸಲಾಬಾದ್‌ನಲ್ಲಿ ನಡೆಯಲಿದ್ದು, ಕೊನೆಯ ಎರಡು ಟಿ20 ಪಂದ್ಯಗಳು ಜೂನ್ 3 ಮತ್ತು 5 ರಂದು ಲಾಹೋರ್‌ನಲ್ಲಿ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
