ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ (Team India) ಸಜ್ಜಾಗಿದೆ. ಸೆಂಚುರಿಯನ್ನಲ್ಲಿನ ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ. ಈ ಮೂವರು ದಿಗ್ಗಜರು ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಯಾವುದೇ ಪಂದ್ಯವಾಡಿಲ್ಲ. ಇದೀಗ ಮೂವರು ಆಟಗಾರರು ಹರಿಣರ ನಾಡಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ವಿಶೇಷ ಎಂದರೆ ಈ ಮೂವರು ಆಟಗಾರರು ಸೌತ್ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಇದಾಗ್ಯೂ ತವರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೌತ್ ಆಫ್ರಿಕಾ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಫಲಿತಾಂಶದಲ್ಲಿ ಬದಲಾವಣೆ ನಿರೀಕ್ಷಿಸಬಹುದು.
ಏಕೆಂದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳ ಕಿಂಗ್ ಎಂದೇ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮರಳಿದ್ದಾರೆ. ಬುಮ್ರಾ ಇದುವರೆಗೆ 3 ಬಾಕ್ಸಿಂಗ್ ಡೇ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 20 ವಿಕೆಟ್ಗಳನ್ನು ಕಬಳಿಸಿರುವುದು ವಿಶೇಷ.
ಅದರಲ್ಲೂ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.
ಹಾಗೆಯೇ ಸೌತ್ ಆಫ್ರಿಕಾ ವಿರುದ್ಧ ಆಡಿದ 6 ಟೆಸ್ಟ್ ಪಂದ್ಯಗಳಿಂದ ಬುಮ್ರಾ ಒಟ್ಟು 26 ವಿಕೆಟ್ ಉರುಳಿಸಿದ್ದಾರೆ. ಈ ಎಲ್ಲಾ ಕಾರಣಹಳಿಂದಾಗಿ ಇದೀಗ ಸೌತ್ ಆಫ್ರಿಕಾ ತಂಡಕ್ಕೆ ಬೂಮ್ ಬೂಮ್ ಬುಮ್ರಾ ಚಿಂತೆ ಶುರುವಾಗಿದೆ.
ಭಾರತ ತಂಡವು ಇದುವರೆಗೆ 17 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಇನ್ನುಳಿದ 10 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, 3 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿತ್ತು.
ಇದಾಗ್ಯೂ 2021 ರಲ್ಲಿ ಸೆಂಚುರಿಯನ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿ ಕೂಡ ಇತಿಹಾಸ ಪುನರಾವರ್ತನೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Rohit Sharma: ಧೋನಿಯ ದಾಖಲೆ ಮುರಿಯುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ