Jitesh Sharma: ನಂಬೋಕೆ ಆಗ್ತಿಲ್ಲ: ಮಾಂತ್ರಿಕ ಇನ್ನಿಂಗ್ಸ್ ಬಳಿಕ ಜಿತೇಶ್ ಶರ್ಮಾ ಭಾವನಾತ್ಮಕ ಹೇಳಿಕೆ
LSG vs RCB, IPL 2025: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ, ನಾನು ಇಂತಹ ಇನ್ನಿಂಗ್ಸ್ ಆಡಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಆ ಕ್ಷಣದಲ್ಲಿಯೇ ಇರಲು ಪ್ರಯತ್ನಿಸುತ್ತಿದ್ದೆ ಎಂದು ಹೇಳಿದ್ದಾರೆ.

ಬೆಂಗಳೂರು (ಮೇ. 28): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಜಿತೇಶ್ ಶರ್ಮಾ, ಲಕ್ನೋ ಸೂಪರ್ ಜೈಂಟ್ಸ್ (LSG vs RCB IPL 2025) ವಿರುದ್ಧ 33 ಎಸೆತಗಳಲ್ಲಿ ನಿರ್ಭೀತ 85 ರನ್ ಗಳಿಸಿ ತಂಡ ಸ್ಮರಣೀಯ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಜಿತೇಶ್ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದರು. 23 ಎಸೆತಗಳ ಅಜೇಯ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಮಯಾಂಕ್ ಅವರಿಂದ ಅವರಿಗೆ ಉತ್ತಮ ಬೆಂಬಲ ದೊರೆಯಿತು. ಇಬ್ಬರೂ ಐದನೇ ವಿಕೆಟ್‌ಗೆ 45 ಎಸೆತಗಳಲ್ಲಿ 107 ರನ್‌ಗಳ ಅಜೇಯ ಜೊತೆಯಾಟ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಾಯಕ ರಿಷಭ್ ಪಂತ್ ಅವರ ಅಜೇಯ 118 ರನ್‌ಗಳ ಇನ್ನಿಂಗ್ಸ್‌ನಿಂದ ಸೂಪರ್ ಜೈಂಟ್ಸ್ ಮೂರು ವಿಕೆಟ್‌ಗಳಿಗೆ 227 ರನ್ ಗಳಿಸಿತು. ಆರ್‌ಸಿಬಿ 18.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.
ಪೋಸ್ಟ್ ಮ್ಯಾಚ್ ವೇಳೆ ಜಿತೇಶ್ ಶರ್ಮಾ ಏನು ಹೇಳಿದರು?
ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ‘‘ನಾನು ಇಂತಹ ಇನ್ನಿಂಗ್ಸ್ ಆಡಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಆ ಕ್ಷಣದಲ್ಲಿಯೇ ಇರಲು ಪ್ರಯತ್ನಿಸುತ್ತಿದ್ದೆ, ಹಿಂದೆ-ಮುಂದೆ ಯೋಚಿಸುತ್ತಿರಲಿಲ್ಲ.. ಕ್ರೀಸ್‌ನಲ್ಲಿಯೇ ಇರಲು ಪ್ರಯತ್ನಿಸುತ್ತಿದ್ದೆ. ನನ್ನ ಭಾವನೆಗಳನ್ನು ಈಗ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’’ ಎಂದು ಹೇಳಿದರು.
ಪಂದ್ಯದ 12 ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ (54) ಔಟಾದ ನಂತರ ಕ್ರೀಸ್‌ಗೆ ಬಂದ ಜಿತೇಶ್, ಪ್ರತಿ ಬೌಲರ್‌ನ ವಿರುದ್ಧವೂ ಸುಲಭವಾಗಿ ದೊಡ್ಡ ಹೊಡೆತಗಳನ್ನು ಹೊಡೆದರು. ಆರ್ಸಿಬಿಯ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ತನ್ನ ಮೇಲೆ ನಾಯಕತ್ವದ ಒತ್ತಡವಿತ್ತು ಆದರೆ ತಂಡದ ಅನುಭವಿ ಆಟಗಾರರಿಂದ ನನಗೆ ಸಂಪೂರ್ಣ ಬೆಂಬಲ ಸಿಕ್ಕಿತು ಎಂದು ಹೇಳಿದರು. ‘‘ವಿರಾಟ್ ಭಾಯ್ ಔಟಾದ ನಂತರ ನಾನು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆ ಮತ್ತು ನಾನು ಅದರಲ್ಲಿ ಯಶಸ್ವಿಯಾಗಿದೆ. ಇವತ್ತು ನನ್ನ ಮೇಲೆ ತುಂಬಾ ಒತ್ತಡ ಇತ್ತು ಆದರೆ ನಾನು ಅದನ್ನು ಆನಂದಿಸುತ್ತಿದ್ದೆ. ವಿರಾಟ್ ಭಾಯ್, ಕೃನಾಲ್ (ಪಾಂಡ್ಯ) ಭಾಯ್ ಮತ್ತು ಭುವನೇಶ್ವರ್ (ಕುಮಾರ್) ಭಾಯ್ ಅವರನ್ನು ನೋಡಿದಾಗ ನನಗೆ ತುಂಬಾ ಆತ್ಮವಿಶ್ವಾಸ ಬರುತ್ತದೆ’’ ಎಂದರು.
Rishabh Pant: ಫಿಟ್ನೆಸ್ ಬಗ್ಗೆ ಟ್ರೋಲ್ ಮಾಡುವವರೇ ಇದನ್ನ ನೋಡಿ: ಪಲ್ಟಿ ಹೊಡೆದು ಶತಕ ಆಚರಿಸಿದ ರಿಷಭ್ ಪಂತ್
ಒಂದು ದಿನದ ನಂತರ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದ ಬಗ್ಗೆ ಕೇಳಿದಾಗ, ಅವರು, ‘‘ನಾನು ಈ ಕ್ಷಣವನ್ನು (ಗೆಲುವನ್ನು) ಈಗಲೇ ಆನಂದಿಸಲು ಪ್ರಯತ್ನಿಸುತ್ತೇನೆ. ಈಗ ನಾನು ಆಯಾಸದಿಂದ ಚೇತರಿಸಿಕೊಳ್ಳ ಬೇಕು. ನನ್ನ ಗುರು ದಿನೇಶ್ ಕಾರ್ತಿಕ್, ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋದರೆ, ತಂಡವನ್ನು ಗೆಲ್ಲಿಸುವ ಕೌಶಲ್ಯ ನನ್ನಲ್ಲಿದೆ’’ ಎಂಬುದು ಜಿತೇಶ್ ಮಾತು.
ನೋ ಬಾಲ್ ನಿಂದಾಗಿ ಲೈಫ್‌ಲೈನ್ ಪಡೆದ ಜಿತೇಶ್:
ಆರ್‌ಸಿಬಿ ಇನ್ನಿಂಗ್ಸ್‌ನ 17 ನೇ ಓವರ್ ಅನ್ನು ಲೆಗ್ ಸ್ಪಿನ್ನರ್ ದಿಗ್ವೇಶ್ ರಥಿ ಎಸೆದರು. ರಥಿ ಓವರ್‌ನ ಮೊದಲ ಎಸೆತದಲ್ಲಿ ರಿವರ್ಸ್ ಸ್ವೀಪ್ ಆಡುವಾಗ ಜಿತೇಶ್ ಶರ್ಮಾ ಔಟಾದರು. ಅವರ ಕ್ಯಾಚ್ ಅನ್ನು ಆಯುಷ್ ಬಡೋನಿ ಪಡೆದರು. ಅದು ಪಂದ್ಯದ ಅತ್ಯಂತ ಮಹತ್ವದ ಕ್ಷಣವಾಗಿತ್ತು. ಜಿತೇಶ್ ಔಟ್ ಆಗಿದ್ದರೆ ಲಕ್ನೋ ಕಡೆಗೆ ಪಂದ್ಯ ವಾಲುತ್ತಿತ್ತು ಮತ್ತು ಆರ್‌ಸಿಬಿ ಪಂದ್ಯವನ್ನು ಸೋಲುತ್ತಿತ್ತು. ಆದರೆ, ಜಿತೇಶ್ ಶರ್ಮಾ ಅವರ ಅದೃಷ್ಟವೆಂದರೆ ಅವರು ಔಟ್ ಆದ ಚೆಂಡು ನೋ ಬಾಲ್ ಆಗಿತ್ತು. ಅದು ಬ್ಯಾಕ್ ಫೂಟ್ ನೋ ಬಾಲ್. ಇದಾದ ನಂತರ, ಜಿತೇಶ್ ಶರ್ಮಾ ಫ್ರೀ ಹಿಟ್ ಪಡೆದು ಅದರಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕವನ್ನು ಪೂರೈಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




