ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ (Ranji Trophy) ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಕರ್ನಾಟಕ (Karnataka vs Services) ತಂಡ ಬೊಂಬಾಟ್ ಆಟ ಪ್ರದರ್ಶಿಸುತ್ತಿದೆ. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ ಮೊದಲ ಇನ್ನಿಂಗ್ಸ್ನಲ್ಲಿ ನಿಕಿನ್ ಜೋಸ್ ಹಾಗೂ ಶರತ್ ಬಿಆರ್ (Sharath BR) ಅವರ ಅರ್ಧಶತಕದ ನೆರವಿನಿಂದ 304 ರನ್ ಕಲೆಹಾಕಿತು. ಇದೀಗ ಸರ್ವಿಸಸ್ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದು 100 ರನ್ ಆಗುವ ಹೊತ್ತಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಓಪನರ್ಗಳಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಆರ್ ತಲಾ 8 ರನ್ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿಶಾಲ್ ಓನತ್ ಮತ್ತು ನಿಕಿನ್ ಜೋಸ್ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ 84 ರನ್ಗಳ ಕಾಣಿಕೆ ನೀಡಿತು. ವಿಶಾಲ್ 79 ಎಸೆತಗಳಲ್ಲಿ 33 ರನ್ ಗಳಿಸಿದರು. ಅನುಭವಿ ಮನೀಶ್ ಪಾಂಡೆ 10 ರನ್ ಹಾಗೂ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆ ಆಯಿತು.
ಐಪಿಎಲ್ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?
ನಿಕಿನ್ ಜೋಶ್ ಕೂಡ 83 ಎಸೆತಗಳಲ್ಲಿ 62 ರನ್ ಬಾರಿಸಿ ಔಟಾದರು. ಹೀಗೆ 133 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಧಾರವಾಗಿದ್ದು ಶರತ್ ಬಿಆರ್ ಹಾಗೂ ಕೃಷ್ಣಪ್ಪ ಗೌತಮ್. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. ಶರತ್ 115 ಎಸೆತಗಳಲ್ಲಿ 77 ರನ್ ಸಿಡಿಸಿದರೆ, ಗೌತಮ್ 52 ಎಸೆತಗಳಲ್ಲಿ 48 ರನ್ಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ರೋನಿತ್ ಮೋರೆ 41 ಬಾಲ್ಗಳಲ್ಲಿ 26 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ 74.4 ಓವರ್ಗಳಲ್ಲಿ 304 ರನ್ಗೆ ಆಲೌಟ್ ಆಯಿತು. ಸರ್ನಿಸಸ್ ಪರ ದಿವೇಶ್ ಪಥಾನಿಯ 5 ಹಾಗೂ ಪುಲ್ಕಿತ್ ನರಂಗ್ 3 ವಿಕೆಟ್ ಪಡೆದು ಮಿಂಚಿದರು.
ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಸರ್ವಿಸಸ್ ತಂಡ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಶುಭಂ ರೋಹಿಲ 8 ರನ್ಗೆ ಹಾಗೂ ಗೌಲತ್ ರಾಹುಲ್ ಸಿಂಗ್ ಸೊನ್ನೆ ಸುತ್ತಿದರು. ಅನ್ಶುಲ್ ಗುಪ್ತಾ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ದೇವೆಂದರ್ 6 ರನ್ಗೆ ನಿರ್ಗಮಿಸಿದರು. ಈ ಮೂಲಕ 100 ರನ್ಗೂ ಮೊದಲೇ ಸರ್ವಿಸಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡಕ್ಕೆ ಇದೀಗ ರವಿ ಚೌಹಾಣ್ ಹಾಗೂ ನಾಯಕ ರಜತ್ ಪಲಿವಾಲ್ ಆಸರೆಯಾಗಿ ನಿಂತಿದ್ದಾರೆ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 3 ವಿಕೆಟ್ ಪಡೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 15 December 22