
ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಪಂದ್ಯದೊಂದಿಗೆ ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದಾಗ್ಯೂ, ಈ ಪಂದ್ಯಕ್ಕೂ ಸ್ವಲ್ಪ ಮೊದಲು ಕನ್ನಡಿಗ ಕರುಣ್ ನಾಯರ್ (Karun Nair) ಗಾಯಕ್ಕೆ ತುತ್ತಾದ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಕರುಣ್ ಮೊದಲ ಪಂದ್ಯಕ್ಕೆ ಫಿಟ್ ಆಗುತ್ತಾರಾ? ಇಲ್ಲವಾ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದೀಗ ಕರುಣ್ ಫಿಟ್‌ನೆಸ್ ಬಗ್ಗೆ ಮಾಹಿತಿ ಹೊರಬಿದಿದ್ದು, ಎರಡು ದಿನಗಳ ಹಿಂದೆ ತಂಡದ ಅಭ್ಯಾಸ ಸಮಯದಲ್ಲಿ ಗಾಯಗೊಂಡಿದ್ದ ಕರುಣ್ ಸಂಪೂರ್ಣವಾಗಿ ಫಿಟ್ ಆಗಿದ್ದು, ತಂಡದ ಪ್ಲೇಯಿಂಗ್ 11 ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.
8 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಕರುಣ್ ನಾಯರ್, ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಜೂನ್ 18ರ ಬುಧವಾರದಂದು ಟೀಮ್ ಇಂಡಿಯಾ ಹೆಡಿಂಗ್ಲೆ ಮೈದಾನದಲ್ಲಿ ಮೊದಲ ಬಾರಿಗೆ ಅಭ್ಯಾಸ ಮಾಡುತ್ತಿದ್ದಾಗ, ಬ್ಯಾಟಿಂಗ್ ಅಭ್ಯಾಸದ ವೇಳೆ ನಾಯರ್ ಗಾಯಗೊಂಡಿದ್ದರು. ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಸೆದ ಬೆಂಕಿ ಚೆಂಡು, ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಕರುಣ್ ಅವರ ಪಕ್ಕೆಲುಬಿಗೆ ಬಡಿದಿತ್ತು. ಇದರಿಂದಾಗಿ ಕರುಣ್ ಅಭ್ಯಾಸದಿಂದ ಹೊರಹೋಗಬೇಕಾಯಿತು.
ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಕರುಣ್ ಗಾಯಗೊಂಡಿದ್ದು ತಂಡಕ್ಕೆ ಕೊಂಚ ಹಿನ್ನಡಯನ್ನುಂಟು ಮಾಡಿತ್ತು. ಆದರೆ ಪಂದ್ಯ ಆರಂಭಕ್ಕೂ ಮೊದಲು ಕರುಣ್ ಚೇತರಿಸಿಕೊಂಡಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ನಾಯರ್ ಮತ್ತೊಮ್ಮೆ ಟೀಂ ಇಂಡಿಯಾದೊಂದಿಗೆ ಅಭ್ಯಾಸ ಆರಂಭಿಸಿದ್ದು, ಯಾವುದೇ ರೀತಿಯ ತೊಂದರೆ ಇಲ್ಲದೆ ಬ್ಯಾಟ್ ಬೀಸಿದ್ದಾರೆ. ಇದು ಅವರ ಫಿಟ್ನೆಸ್ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರ ನೀಡಿರುವುದಲ್ಲದೆ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿದೆ.
IND vs ENG: ‘ಬಾಗಿಲು ತಟ್ಟಬೇಡಿ, ಒದೆಯಿರಿ’..; ಕರುಣ್ ನಾಯರ್ಗೆ ರವಿಶಾಸ್ತ್ರಿ ನೀಡಿದ ಸಂದೇಶವೇನು?
ಇಂಗ್ಲೆಂಡ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಕರುಣ್ ನಾಯರ್ ಅವರ ಫಿಟ್‌ನೆಸ್ ಟೀಂ ಇಂಡಿಯಾಕ್ಕೂ ಮುಖ್ಯವಾಗಿದೆ. ಅಲ್ಲದೆ, ಕಳೆದ ಒಂದು ವರ್ಷದಿಂದ ಅವರು ಸ್ಥಿರ ಫಾರ್ಮ್‌ನಲ್ಲಿದ್ದಾರೆ. ಕಳೆದ ದೇಶೀಯ ಸೀಸನ್‌ನಲ್ಲಿ ರನ್ಗಳ ಮಳೆಗರೆದಿದ್ದ ಕರುಣ್, ಈ ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ನಡೆದಿದ್ದ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅನನುಭವಿ ಬ್ಯಾಟ್ಸ್‌ಮನ್‌ಗಳಲ್ಲಿ ಅವರ ಉಪಸ್ಥಿತಿಯು ಟೀಂ ಇಂಡಿಯಾಕ್ಕೆ ಪ್ರಯೋಜನಕಾರಿಯಾಗಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Thu, 19 June 25