ICC U-19 World Cup: ಬೀದಿಯಲ್ಲಿ ಕ್ರೆಡಿಟ್ ಕಾರ್ಡ್​ ಮಾರಿ ವಿಶ್ವಕಪ್ ಆಡುತ್ತಿರುವ ಕ್ರಿಕೆಟಿಗನ ಕಥೆಯಿದು

ICC U-19 World Cup: ಬೀದಿಯಲ್ಲಿ ಕ್ರೆಡಿಟ್ ಕಾರ್ಡ್​ ಮಾರಿ ವಿಶ್ವಕಪ್ ಆಡುತ್ತಿರುವ ಕ್ರಿಕೆಟಿಗನ ಕಥೆಯಿದು
Khyber Wali

Khyber Wali: ಅಫ್ಘಾನಿಸ್ತಾನ್ ತಂಡದ ಸೆಮಿಫೈನಲ್ ತಲುಪಿದೆ. ತಂಡದಲ್ಲಿ ಆಲ್​ರೌಂಡರ್ ಆಗಿ ಖೈಬರ್ ವಾಲಿ ಕೂಡ ಇದ್ದಾನೆ. ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಆಟಗಾರ ಲೆಗ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ.

TV9kannada Web Team

| Edited By: Zahir PY

Jan 30, 2022 | 3:23 PM

ಕನಸು ಯಾರಿಗೆ ಬೇಕಾದರೂ ಕಾಣಬಹುದು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭಲ್ಲ. ಅದಕ್ಕಾಗಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಛಲದಿಂದ ಮುನ್ನುಗ್ಗಬೇಕಾಗುತ್ತದೆ…ಹೀಗೆ ಕನಸೆಂಬ ಕುದುರೆಯನ್ನೇರಿ ಇದೀಗ ಅಫ್ಘಾನಿಸ್ತಾನ್ ಬೀದಿಯಿಂದ ಅಂಡರ್​ 19 ವಿಶ್ವಕಪ್​ ತನಕ ಆಟಗಾರನೊಬ್ಬ ಬಂದು ನಿಂತಿದ್ದಾನೆ. ಆತನ ಹೆಸರು ಖೈಬರ್ ವಾಲಿ (Khyber Wali). ಅಂಡರ್ 19 ವಿಶ್ವಕಪ್ ಆರಂಭಕ್ಕೂ ಮುನ್ನ ಈತ ನಂಗರ್‌ಹಾರ್ ಪ್ರಾಂತ್ಯದ ಜನರಿಗೆ ಚಿರಪರಿಚಿತ. ಅದರಲ್ಲೂ ಬಹುತೇಕ ಜನರಿಗೆ ಈತ ಕ್ರಿಕೆಟಿಗ ಎಂಬುದೇ ಗೊತ್ತಿರಲಿಲ್ಲ. ಏಕೆಂದರೆ ಆತನನ್ನು ಪ್ರತಿಯೊಬ್ಬರು ನೋಡುತ್ತಿದಿದ್ದೇ ಕ್ರೆಡಿಟ್ ಕಾರ್ಡ್ ಮಾರಾಟಗಾರನಾಗಿ ಅಷ್ಟೇ. ಇದೀಗ ಖೈಬಲ್ ವಾಲಿ ಹೆಸರು ಅಫ್ಘಾನಿಸ್ತಾನದಲ್ಲಿ ರಾರಾಜಿಸುತ್ತಿದೆ. ಏಕೆಂದರೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್ -19 ವಿಶ್ವಕಪ್‌ನಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ಅಂಡರ್-19 ತಂಡದಲ್ಲಿ 18 ವರ್ಷದ ಖೈಬರ್ ವಾಲಿ ಕೂಡ ಇದ್ದಾನೆ.

ಆದರೆ ಅಫ್ಘಾನ್ ಬೀದಿಯಿಂದ ವೆಸ್ಟ್ ಇಂಡೀಸ್ ಅಂಡರ್ 19 ತನಕದ ಖೈಬರ್ ಪ್ರಯಾಣ ಅಂದುಕೊಂಡಷ್ಟು ಸುಲಭವಲ್ಲ. ಈತನ ಕಥೆಯು ಪ್ರತಿಯೊಬ್ಬ ಆಟಗಾರ ಅಥವಾ ವ್ಯಕ್ತಿಗೆ ಸ್ಫೂರ್ತಿಯಾಗಬಹುದು. ಏಕೆಂದರೆ ಈತ ಕೂಡ ಬಡತನದಲ್ಲಿ ಅರಳಿದ ಪ್ರತಿಭೆ. ಹೀಗೆ ತನ್ನನ್ನು ತಾನೇ ಅರಳಿಸಿಕೊಂಡಿದ್ದು ಎಂದರೆ ತಪ್ಪಾಗಲಾರದರು.

ಅಫ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿ ಜನಿಸಿದ ಖೈಬರ್ ಎಲ್ಲರಂತೆ ಬಾಲ್ಯದಿಂದಲೂ ಕ್ರಿಕೆಟ್ ಪ್ರೇಮಿ. ಹೀಗಾಗಿ ಗಲ್ಲಿ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದ. ಇದನ್ನು ಗಮನಿಸಿದ ಯಾರೋ ಒಬ್ಬರು ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವಂತೆ ಸಲಹೆ ನೀಡಿದರು. ಇದರಿಂದ ಮುಂದೆ ರಾಷ್ಟ್ರೀಯ ತಂಡದಲ್ಲಿ ಆಡಬಹುದು ಎಂದರು. ಒಬ್ಬ ಹುಡುಗನಿಗೆ ಕನಸೆಂಬ ಕುದರೆಯನ್ನೇರಲು ಇಂತಹ ಒಂದು ಮಾತು ಸಾಕು. ಖೈಬರ್ ಕೂಡ ಕ್ರಿಕೆಟ್ ಅಕಾಡೆಮಿ ಸೇರಲು ನಿರ್ಧರಿಸಿದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅಕಾಡೆಮಿಯಲ್ಲಿ ಸೇರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಖೈಬರ್ ಕೂಡ ತನ್ನ ಕನಸೆಂಬ ಕುದುರೆಯಿಂದ ಕೆಳಗಿಯಲು ನಿರ್ಧರಿಸಿದ್ದರು. ಆದರೆ ಖೈಬರ್ ವಾಲಿಯ ತಾಕತ್ತೇನು, ಹೇಗೆ ಆಡುತ್ತಾನೆ ಎಂಬುದನ್ನು ಹತ್ತಿರದಿಂದ ನೋಡಿದ್ದ ಸ್ನೇಹಿತರಿಗೆ ಗೊತ್ತಿತ್ತು. ಹೀಗಾಗಿ ಫ್ರೆಂಡ್ಸ್​ ಒತ್ತಾಯ ಮಾಡಿ ಅಕಾಡೆಮಿಗೆ ಸೇರಿಸಿದರು.

ಸೇರುವುದೇನು ಸೇರಿಯಾಗಿತ್ತು, ಆದರೆ ತಿಂಗಳ ತರಬೇತಿಯ ವೆಚ್ಚ ಭರಿಸಲು ದಾರಿಯಿರಲಿಲ್ಲ. ಆಗ ಸಿಕ್ಕಿದ್ದೆ ಕ್ರೆಡಿಟ್ ಕಾರ್ಡ್​ ಮಾರಾಟದ ಕೆಲಸ. ಬೆಳಿಗ್ಗೆಯಿಂದ ಸಂಜೆ ತನಕ ನಂಗರ್‌ಹಾರ್‌ನ ಬೀದಿಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಸಂಜೆಯಾಗುತ್ತಿದ್ದಂತೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ. ಹೀಗೆ ಕ್ರೆಡಿಟ್ ಕಾರ್ಡ್ ಮಾರಾಟದ ಜೊತೆ ಕ್ರಿಕೆಟ್ ತರಬೇತಿಗಾಗಿ ಓಡಾಟ ಒಂದೆರಡು ವರ್ಷಗಳಲ್ಲ. ಬದಲಾಗಿ ಖೈಬರ್ ವಾಲಿ ಕಳೆದ 5-6 ವರ್ಷಗಳಿಂದ ಇದನ್ನೇ ಮಾಡಿ ತನ್ನ ಕ್ರಿಕೆಟ್ ಕನಸನ್ನು ನನಸು ಮಾಡುವ ಪ್ರಯತ್ನದಲ್ಲಿದ್ದರು.

ಈ ನಡುವೆ ಕಳೆದ ವರ್ಷ ಖೈಬರ್ ಅಂಡರ್-19 ಗಾಗಿ ಟ್ರಯಲ್ಸ್ ನೀಡಿದ್ದರು. ಇಲ್ಲಿ ಅವರ ಬ್ಯಾಟಿಂಗ್‌ ನೋಡಿ ಕೋಚ್‌ ಪ್ರಭಾವಿತರಾಗಿದ್ದರು. ಇದರ ನಂತರ, ಅವರು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮೇಲ್ವಿಚಾರಣೆಯಲ್ಲಿ ಒಂದು ತಿಂಗಳ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದರು. ಈ ಶಿಬಿರದಿಂದಲೇ ಅವರ ಅದೃಷ್ಟವು ಬದಲಾಯಿತು. ಇದಾದ ಬಳಿಕ ಅಂಡರ್ -19 ಏಷ್ಯಾ ಕಪ್ ಮತ್ತು ನಂತರ ಅಂಡರ್ -19 ವಿಶ್ವಕಪ್ ತಂಡಕ್ಕೆ ಟ್ರಯಲ್ಸ್ ನೀಡಿದ್ದರು. ಆದರೆ ಇದರ ಫಲಿತಾಂಶಕ್ಕಾಗಿ ಖೈಬರ್ ಕಾದು ಕುಳಿತಿದ್ದರು.

ಆದರೆ ವಿಚಿತ್ರ ಎಂದರೆ ಈ ಫಲಿತಾಂಶ ಹೊರಬೀಳುವಾಗಲೂ ಖೈಬಲ್ ವಾಲಿ ಬೀದಿಯಲ್ಲಿ ನಿಂತು ಕ್ರೆಡಿಟ್ ಕಾರ್ಡ್ ಮಾರಾಟ ಮಾಡುತ್ತಿದ್ದರು. ಮಾಮೂಲಿ ದಿನಗಳಂತೆ ಖೈಬರ್ ನಂಗರಹಾರ್​ನ ಬೀದಿಗಳಲ್ಲಿ ಕಾರ್ಡ್ ಮಾರುತ್ತಿದ್ದರು. ಆಗ ಪರಿಚಯಸ್ಥರೊಬ್ಬರು ಬಂದು ಅಂಡರ್ 19 ​ ಅಫ್ಘಾನಿಸ್ತಾನ ತಂಡಕ್ಕೆ ಆಯ್ಕೆಯಾಗಿದ್ದೀರಿ ಎಂದು ತಿಳಿಸಿದರು. ಈ ಸುದ್ದಿಯನ್ನು ಕೇಳಿದ ಖೈಬರ್‌ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇದನ್ನು ನೋಡಿದ ಅಕ್ಕಪಕ್ಕದ ಅಂಗಡಿಯವರು ಕೂಡ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಏಕೆಂದರೆ ಕಳೆದ ಐದಾರು ವರ್ಷಗಳಿಂದ ಅವರೆಲ್ಲರೂ ಖೈಬರ್​ನ ಕಷ್ಟಗಳನ್ನು ಕಣ್ಣಾರೆ ನೋಡಿದ್ದರು. ಬೀದಿಯಲ್ಲಿ ನಿಂತು ಕ್ರೆಡಿಟ್ ಕಾರ್ಡ್ ಮಾರಾಟ ಮಾಡಿ ಸಂಜೆಯಾಗುತ್ತಿದ್ದಂತೆ ಕ್ರಿಕೆಟ್​ ಆಡಲು ಓಡುತ್ತಿದ್ದ ಹುಡುಗನ ಕನಸಗಳನ್ನು ಕಣ್ಣಾರೆ ಕಂಡಿದ್ದರು. ಹೀಗಾಗಿಯೇ ಖೈಬರ್ ವಾಲಿ ಆಯ್ಕೆಯಾಗುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಕೂಡ ಸಿಹಿ ಹಂಚಿ ಸಂಭ್ರಮಿಸಿದ್ದರು.

ನಾನು ತಂಡಕ್ಕೆ ಆಯ್ಕೆಯ ಸುದ್ದಿ ತಿಳಿದ ತಾಯಿಗೆ ಅಚ್ಚರಿಗೊಳಗಾಗಿದ್ದರು. ಇಡೀ ದಿನ ರಾತ್ರಿ ಕುಟುಂಬದಲ್ಲಿ ಯಾರೂ ಮಲಗಿರಲಿಲ್ಲ. ಅಮ್ಮ ಅಳುತ್ತಾ ಕೂತಿದ್ದರು. ಆಟೋ ಓಡಿಸುವ ಸಹೋದರನದ್ದೂ ಕೂಡ ಅದೇ ಕಥೆ. ಎಲ್ಲರೂ ಭಾವನಾತ್ಮಕ ಲೋಕದಲ್ಲಿದ್ದರು. ಎಲ್ಲರಲ್ಲೂ ಖುಷಿಯಿತ್ತು. ಆದರೂ ಆ ಸಂತೋಷದ ಜೊತೆಗೆ ನಮ್ಮ ಕಷ್ಟಗಳನ್ನು ನೆನೆದು ಎಲ್ಲರೂ ಅಳುತ್ತಿದ್ದರು ಎಂದು ಖೈಬರ್ ವಾಲಿ ಹೇಳಿಕೊಂಡಿದ್ದಾರೆ.

ಇದೀಗ ಖೈಬರ್ ವಾಲಿ ಅಫ್ಘಾನಿಸ್ತಾನ್​ ಅಂಡರ್ 19 ತಂಡದ ಆಟಗಾರ. ಅದರಲ್ಲೂ ಅಫ್ಘಾನ್​ನ ಉದಯೋನ್ಮುಖ ಆಟಗಾರರಲ್ಲಿ ಒಬ್ಬ. ಪ್ರಸ್ತುತ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನಲ್ಲಿ ಪಪುವಾ ನ್ಯೂಗಿನಿಯಾ ಮತ್ತು ಪಾಕಿಸ್ತಾನದ ವಿರುದ್ಧ ಆಡುವ ಅವಕಾಶವನ್ನು ಪಡೆದರು. ಪಪುವಾ ನ್ಯೂಗಿನಿ ವಿರುದ್ಧ 30 ರನ್ ಬಾರಿಸಿದ್ದರು. ಇನ್ನು ಭಾರತ ವಿರುದ್ಧದ ಪಂದ್ಯದಲ್ಲಿಅಜೇಯ 20 ರನ್ ಗಳಿಸಿದ್ದರು. ಆದರೆ, ಈ ಪಂದ್ಯದಲ್ಲಿ ಅಫ್ಘಾನ್ ತಂಡ ಸೋತಿತ್ತು. ಸದ್ಯ ಅಫ್ಘಾನಿಸ್ತಾನ್ ತಂಡದ ಸೆಮಿಫೈನಲ್ ತಲುಪಿದೆ. ತಂಡದಲ್ಲಿ ಆಲ್​ರೌಂಡರ್ ಆಗಿ ಖೈಬರ್ ವಾಲಿ ಕೂಡ ಇದ್ದಾನೆ. ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಆಟಗಾರ ಲೆಗ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಹೀಗಾಗಿಯೇ ಇಂಗ್ಲೆಂಡ್ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಪ್ಲೇಯಿಂಗ್ 11 ನಲ್ಲಿ ಚಾನ್ಸ್​ ಸಿಗುವ ವಿಶ್ವಾಸದಲ್ಲಿದ್ದಾರೆ ಖೈಬರ್ ವಾಲಿ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(From Selling Credits Cards To ICC U-19 World Cup – Dream Come True for Afghanistan’s Khyber Wali)

Follow us on

Related Stories

Most Read Stories

Click on your DTH Provider to Add TV9 Kannada