KL Rahul: ಏನಾಯ್ತು ರಾಹುಲ್..? ಕನ್ನಡಿಗನ ಹೆಗಲೇರಿದ ಕಳಪೆ ಫಾರ್ಮ್ ಭೂತ
IND A vs AUS A: ಸತತ ವೈಫಲ್ಯಗಳಿಂದ ಬಳಲಿರುವ ಕನ್ನಡಿಗ ಕೆಎಲ್ ರಾಹುಲ್ ಇದೀಗ ಆಸ್ಟ್ರೇಲಿಯಾ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಮುಗ್ಗರಿಸಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ರಾಹುಲ್ ಎಡವಿದ್ದಾರೆ. ಎರಡನೇ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ರಾಹುಲ್ ಕೇವಲ 14 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ.
ಕೆಲವೇ ಕೆಲವು ತಿಂಗಳುಗಳ ಹಿಂದೆ ಟೀಂ ಇಂಡಿಯಾದ ಭರವಸೆ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್, ಅದ್ಯಾಕೋ ಇತ್ತೀಚೆಗೆ ಬ್ಯಾಟಿಂಗ್ ಮರೆತವರಂತೆ ವರ್ತಿಸುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎಷ್ಟು ಸರ್ಕಸ್ ಮಾಡಬೇಕು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದಾಗ್ಯೂ ಅವಕಾಶಗಳ ಮೇಲೆ ಅವಕಾಶಗಳನ್ನು ನೀಡುತ್ತಿದ್ದರೂ ರಾಹುಲ್ಗೆ ಮಾತ್ರ ಆಯ್ಕೆ ಮಂಡಳಿ ಮೆಚ್ಚುವಂತಹ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಇನ್ನಿಂಗ್ಸ್ ಕಥೆ ಹಾಗಿರಲಿ, ರಾಹುಲ್ಗೆ ಚೆಂಡನ್ನು ಹೇಗೆ ಎದುರಿಸಬೇಕು ಎಂಬುದೇ ಮರೆತು ಹೋಗಿರುವಂತೆ ತೋರುತ್ತಿದೆ. ಇದಕ್ಕೆ ಉದಾಹರಣೆಯಾಗಿ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಾಹುಲ್ ಔಟಾದ ರೀತಿಯೇ ನಮ್ಮ ಕಣ್ಣ ಮುಂದಿದೆ.
ರಾಹುಲ್ಗೆ ಕ್ರಿಕೆಟ್ ಮರೆತು ಹೋಗಿದ್ಯಾ?
ಈ ಮುಂಚೆ ಸ್ಪಿನ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ರಾಹುಲ್ ಇದೀಗ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಅಲಭ್ಯರಾಗುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸುವ ಇರಾದೆಯೊಂದಿಗೆ ಬಿಸಿಸಿಐ, ರಾಹುಲ್ರನ್ನು ಆಸ್ಟ್ರೇಲಿಯಾ ಎ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲು ಆಸ್ಟ್ರೇಲಿಯಾಕ್ಕೆ ಕಳುಹಿಸಿತ್ತು. ಆದರೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ಎಡವಿದ ರಾಹುಲ್, ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್ಗಳಿಗೆ ಸುಸ್ತಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಬಾರಿಸಲಷ್ಟೇ ಶಕ್ತರಾದರು. ಆದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ವಿಕೆಟ್ ಕಳೆದುಕೊಂಡ ರೀತಿಗೆ ಟೀಂ ಇಂಡಿಯಾ ಫ್ಯಾನ್ಸ್ ಅಚ್ಚರಿಗೊಂಡಿರುವುದಲ್ಲದೆ, ರಾಹುಲ್ಗೆ ಕ್ರಿಕೆಟ್ ಮರೆತು ಹೋಗಿದ್ಯಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ರಾಹುಲ್ಗೆ ಏನಾಗಿದೆ?
ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಆಫ್ ಸ್ಪಿನ್ನರ್ ರೋಚಿಸಿಯೋಲಿ ಎಸೆತದಲ್ಲಿ ಬೌಲ್ಡ್ ಆದರು. ರೋಚಿಸಿಯೋಲಿ ಬೌಲ್ ಮಾಡಿದ ತೀರಾ ಸಾಮಾನ್ಯ ಚೆಂಡು ಮಧ್ಯದ ಸ್ಟಂಪ್‌ನಲ್ಲಿ ಬಿದ್ದು ರಾಹುಲ್ ಕಡೆಗೆ ಹೋಯಿತು. ಆದರೆ ರಾಹುಲ್ ಈ ಚೆಂಡನ್ನು ಬ್ಯಾಟ್‌ನಲ್ಲಿ ಆಡುವ ಬದಲು, ತನ್ನ ಕಾಲಿನಿಂದ ಆಡಿದರು. ಆ ಬಳಿಕ ಚೆಂಡು, ರಾಹುಲ್ ಅವರ ಕಾಲಿಗೆ ಬಡಿದು ಸ್ಟಂಪ್‌ಗೆ ಹೋಯಿತು. ಇಷ್ಟು ಸಾಮಾನ್ಯ ಎಸೆತದಲ್ಲಿ ರಾಹುಲ್ ಬೌಲ್ಡ್ ಆಗಿದ್ದು, ಆಸ್ಟ್ರೇಲಿಯಾದ ವೀಕ್ಷಕ ವಿವರಣೆಗಾರರಿಗೂ ಅಚ್ಚರಿ ಮೂಡಿಸಿತು. ರಾಹುಲ್ ಕೂಡ ತುಂಬಾ ನಿರಾಶೆಗೊಂಡಿದಲ್ಲದೆ, ನೋವಿನೊಂದಿಗೆ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
“Don’t know what he was thinking!”
Oops… that’s an astonishing leave by KL Rahul 😱 #AUSAvINDA pic.twitter.com/e4uDPH1dzz
— cricket.com.au (@cricketcomau) November 8, 2024
ರಕ್ಷಣಾತ್ಮಕ ಆಟವೇ ರಾಹುಲ್ಗೆ ಮುಳುವಾಯ್ತು
ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾದ ರೀತಿಯನ್ನು ನೋಡಿದರೆ ಅವರು ದಿನದಾಟವನ್ನು ಹೇಗಾದರೂ ಮಾಡಿ ಮುಗಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿತ್ತು. ಒಂದು ವೇಳೆ ರಾಹುಲ್ ಆಕ್ರಮಣಕಾರಿ ಧೋರಣೆ ಅನುಸರಿಸಿದ್ದರೆ ಹೆಚ್ಚು ರನ್ ಗಳಿಸಬಹುದಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 44 ಎಸೆತಗಳನ್ನು ಆಡಿದ ರಾಹುಲ್ ಅವರ ಬ್ಯಾಟ್‌ನಿಂದ ಬಂದಿದ್ದು ಕೇವಲ 10 ರನ್ ಮಾತ್ರ. ರಾಹುಲ್ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಂಡರಿ ಬಾರಿಸಲೂ ಸಾಧ್ಯವಾಗಲಿಲ್ಲ.
ಕೈಕೊಟ್ಟ ಅಗ್ರ ಕ್ರಮಾಂಕ
ರಾಹುಲ್ ಮಾತ್ರವಲ್ಲ, ಮೆಲ್ಬೋರ್ನ್ ಮೈದಾನದಲ್ಲಿ ಭಾರತ ಎ ತಂಡದ ಸಂಪೂರ್ಣ ಅಗ್ರ ಕ್ರಮಾಂಕ ವಿಫಲವಾಯಿತು. ಅಭಿಮನ್ಯು ಈಶ್ವರನ್ 17 ರನ್ ಗಳಿಸಿ ಔಟಾದರೆ, ಸಾಯಿ ಸುದರ್ಶನ್ ಕೇವಲ 3 ರನ್ ಗಳಿಸಿದರು. ಗಾಯಕ್ವಾಡ್ ಅವರ ಬ್ಯಾಟ್‌ನಿಂದ ಕೇವಲ 11 ರನ್ ಬಂದವು. ಪಡಿಕ್ಕಲ್ ಒಂದು ರನ್ಗಳಿಗೆ ಸುಸ್ತಾದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲುವ ಭೀತಿಯಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ