ಆಸೀಸ್ ಪ್ರವಾಸಕ್ಕೂ ಮುನ್ನ ಮದುವೆ, ಮಗು; ರಾಹುಲ್ ವೈಯಕ್ತಿಕ ಬದುಕಿನಲ್ಲಿ ಮನೆ ಮಾಡಿದ ಸಂತಸ
Athiya Shetty, KL Rahul announce pregnancy: ಕನ್ನಡಿಗ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ದಂಪತಿಗಳು 2025ರಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಅಚ್ಚರಿಯೆಂದರೆ, ಇದೇ ಆಸೀಸ್ ಪ್ರವಾಸಕ್ಕೂ ಮುನ್ನ ರಾಹುಲ್ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಆಸೀಸ್ ಪ್ರವಾಸಕ್ಕೂ ಮುನ್ನ ತಂದೆಯಾದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ತಮ್ಮ ವೃತ್ತಿಬದುಕಿನಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಎಡವುತ್ತಿರುವ ರಾಹುಲ್ ಮೇಲೆ ನಿರಂತರವಾಗಿ ಪ್ರಶ್ನೆಗಳು ಏಳುತ್ತಿವೆ. ಹೀಗಾಗಿ ರಾಹುಲ್ ಮೇಲು ಪಂದ್ಯದಿಂದ ಪಂದ್ಯಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಇಷ್ಟೆಲ್ಲಾ ಟೀಕೆಗಳು ಹಾಗೂ ಒತ್ತಡದ ನಡುವೆ ಕೆಎಲ್ ರಾಹುಲ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, 2025ರಲ್ಲಿ ಮನೆಗೆ ಪುಟ್ಟ ಅತಿಥಿಯ ಆಗಮನವಾಗಲಿದೆ.
ಶುಭ ಸುದ್ದಿ ನೀಡಿದ ಅಥಿಯಾ
ನವೆಂಬರ್ 8 ರ ಶುಕ್ರವಾರದಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ಅಥಿಯಾ ಶೆಟ್ಟಿ ಈ ಶುಭ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಥಿಯಾ ತಮ್ಮ ಪೋಸ್ಟ್‌ನಲ್ಲಿ, ‘ಇಷ್ಟರಲ್ಲೇ ನಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ವಾಸ್ತವವಾಗಿ ರಾಹುಲ್ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ 23 ಜನವರಿ 2023 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಪ್ರಾಸಂಗಿಕವಾಗಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಾಹುಲ್ ಮದುವೆಯೂ ನಡೆದಿತ್ತು. ಇದೀಗ ಆಸ್ಟ್ರೇಲಿಯಾ ಸರಣಿಗೂ ಮುನ್ನ ತಮ್ಮ ಮೊದಲ ಮಗುವಿನ ಆಗಮನದ ವಿಚಾರವನ್ನು ರಾಹುಲ್ ತಮ್ಮ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ.
ಆರಂಭಿಕನಾಗಿ ರಾಹುಲ್ ಕಣಕ್ಕೆ?
ರಾಹುಲ್ ಸದ್ಯ ಆಸ್ಟ್ರೇಲಿಯಾದಲ್ಲಿದ್ದು, ಅಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾರೆ. ಆದರೆ ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲೂ ರಾಹುಲ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ 4 ರನ್ಗಳಿಗೆ ಸುಸ್ತಾಗಿದ್ದ ರಾಹುಲ್, ಎರಡನೇ ಇನ್ನಿಂಗ್ಸ್ನಲ್ಲಿ 10 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಆದಾಗ್ಯೂ ರಾಹುಲ್ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ರಾಹುಲ್ ಅವರನ್ನು ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲಾಗಿದೆ. ಅಲ್ಲದೆ ನವೆಂಬರ್ 22 ರಿಂದ ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಅವರು ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಏಕೆಂದರೆ ಮೊದಲ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ಆಡುವುದು ಅನುಮಾನವಾಗಿದೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ರಾಹುಲ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಪ್ರಾಸಂಗಿಕವಾಗಿ, ವೈಯಕ್ತಿಕ ಕಾರಣಗಳಿಂದಾಗಿ ನಾಯಕ ರೋಹಿತ್ ಕೂಡ ಈ ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಅಂದರೆ ರೋಹಿತ್ ಕೂಡ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಸಮಯದಲ್ಲಿ ಅವರು ತಮ್ಮ ಪತ್ನಿ ರಿತಿಕಾ ಜೊತೆ ಇರಲು ನಿರ್ಧರಿಸಿದ್ದು, ಮೊದಲ ಟೆಸ್ಟ್ನಿಂದ ಹೊರಗುಳಿಯಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Fri, 8 November 24