ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಟಿ20 ಸರಣಿ ಆಡುತ್ತಿದೆ. ಇದಾದ ಬಳಿಕ ಡಿಸೆಂಬರ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಒಡಿಐ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ದಾರಿ ಕೆಎಲ್ ರಾಹುಲ್ (KL Rahul) ಅವರ ಮೇಲಿದೆ. ODI ತಂಡದ ಕೆಲವು ಆಟಗಾರರು ಇನ್ನೂ ಭಾರತದಲ್ಲಿದ್ದು, ಹರಿಣಗಳ ನಾಡಿಗೆ ತೆರಳಬೇಕಷ್ಟೆ. ಈ ಪೈಕಿ ಕೆಎಲ್ ರಾಹುಲ್ ಕೂಡ ಒಬ್ಬರು. ಭಾರತದಲ್ಲಿರುವ ರಾಹುಲ್ ಮೈದಾನದಲ್ಲಿ ಬೆವರು ಹರಿಸಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಇದೀಗ ರಾಹುಲ್ ಅಭ್ಯಾಸದ ವೇಳೆ ವಾಂತಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೆಎಲ್ ರಾಹುಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ರಾಹುಲ್ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವುದು ಕಾಣುತ್ತಿದೆ. ಮೊದಲು ಓಡಿ ನಂತರ ಸ್ಟ್ರೆಚ್ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಮೈದಾನದ ಪಕ್ಕಕ್ಕೆ ತೆರಳಿ ವಾಂತಿ ಮಾಡಿಕೊಂಡಿದ್ದಾರೆ. ನಂತರ ರಾಹುಲ್ ಸ್ವಲ್ಪ ನಿರಾಳರಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆತಂಕಗೊಂಡಿದ್ದಾರೆ.
Suryakumar Yadav: ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
ಕೆಎಲ್ ರಾಹುಲ್ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ವಿಡಿಯೋದಲ್ಲಿ ಅವರು ಗುಣಮುಖರಾದಂತೆ ಕಾಣುತ್ತಿದೆ. ಈ ಅಭ್ಯಾಸದ ಸಮಯದಲ್ಲಿ, ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸಹ ಅವರೊಂದಿಗೆ ಇದ್ದರು. ಈ ವಿಡಿಯೋದಲ್ಲಿ ಬುಮ್ರಾ- ರಾಹುಲ್ ಸಂಭಾಷಣೆ ಕೂಡ ಇದೆ. ಸದ್ಯದಲ್ಲೇ ಭಾರತ ಏಕದಿನ ತಂಡ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಲಿದೆ.
ಕೆಎಲ್ ರಾಹುಲ್ ಇದುವರೆಗೆ ಒಟ್ಟು ಒಂಬತ್ತು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದು, ಈ ಪೈಕಿ ಭಾರತ ಆರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. 2022ರಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾಗ ಅಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ರಾಹುಲ್ ತಂಡದ ನಾಯಕರಾಗಿದ್ದರು. ಆದರೆ ಇದರಲ್ಲಿ ಭಾರತ ಸೋಲನುಭವಿಸಿತ್ತು. ಈ ಬಾರಿಯೂ ರಾಹುಲ್ ನಾಯಕರಾಗಿದ್ದು, ಸೇಡು ತೀರಿಸಿಕೊಳ್ಳುತ್ತಾರ ನೋಡಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ