ಶಶಿ ತರೂರ್ ಪತ್ನಿಗೆ ಪುಕ್ಸಟ್ಟೆ ಐಪಿಎಲ್ ತಂಡದ ಷೇರು, ಪ್ರಶ್ನಿಸಿದ ನನ್ನನ್ನು ಬೆದರಿಸಿದ್ದರು: ಲಲಿತ್ ಮೋದಿ
ಐಪಿಎಲ್ 2011 ರಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದಿದ್ದವು. ಇದರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಕೂಡ ಒಂದು. ಆದರೆ ಐಪಿಎಲ್ 4ನೇ ಸೀಸನ್ ಬಳಿಕ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ವಿಸರ್ಜಿಸಲಾಯಿತು. ಇದಕ್ಕೆ ಮುಖ್ಯ ಕಾರಣ ಲಲಿತ್ ಮೋದಿ ಎಂದು ಫ್ರಾಂಚೈಸಿ ಆರೋಪಿಸಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕಾಂಗ್ರೆಸ್ ನಾಯಕ/ಹಾಲಿ ಸಂಸದ ಶಶಿ ತರೂರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳದಲ್ಲಿ ಶೇ. 25 ರಷ್ಟು ಷೇರುಗಳನ್ನು ಅಕ್ರಮವಾಗಿ ಪಡೆದಿದುಕೊಂಡಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಶ್ನಿಸಿದ ನನಗೆ ಇಡಿ ಕಡೆಯಿಂದ ದಾಳಿ ಮಾಡಿಸುವುದಾಗಿ ಶಶಿ ತರೂರ್ ಬೆದರಿಕೆಯೊಡ್ಡಿದ್ದರು ಎಂದು ಲಲಿತ್ ಮೋದಿ ಎಂದು ಆರೋಪಿಸಿದ್ದಾರೆ.
ಪೋಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಲಲಿತ್ ಮೋದಿ ಐಪಿಎಲ್ ಕುರಿತಾದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಕೊಚ್ಚಿ ಟಸ್ಕರ್ಸ್ ತಂಡದ ಷೇರಿನಲ್ಲಿ ಶೇ.25 ರಷ್ಟು ಪಾಲನ್ನು ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರಿಗೆ ನೀಡಲಾಗಿತ್ತು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೊಚ್ಚಿ ಟಸ್ಕರ್ಸ್ ತಂಡದ 50 ಮಿಲಿಯನ್ ಡಾಲರ್ ಒಪ್ಪಂದದಲ್ಲಿ ಸುನಂದಾ ಪುಷ್ಕರ್ ಕೊಡುಗೆ ಶೂನ್ಯ. ಆದರೂ ಅವರಿಗೆ ತಂಡದಲ್ಲಿ 25 ರಷ್ಟು ಷೇರುಗಳನ್ನು ಉಚಿತವಾಗಿ ನೀಡಲಾಗಿತ್ತು. ಮತ್ತೊಂದು ಆಘಾತಕಾರಿ ವಿಷಯವೆಂದರೆ ತಂಡದ ಆದಾಯದಲ್ಲೂ ಅವರಿಗೆ ಶೇ.15 ರಷ್ಟು ಪಾಲಿತ್ತು.
ಇದನ್ನು ಗಮನಿಸಿದ ನಾನು ಕೊಚ್ಚಿನ ಟಸ್ಕರ್ಸ್ ಫ್ರಾಂಚೈಸಿಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ತಿಳಿಸಿದ್ದೆ. ಈ ವೇಳೆ ಶಶಿ ತರೂರ್ ಕಡೆಯಿಂದ ನನಗೆ ಕರೆ ಬಂತು. ನೀವು ಸಹಿ ಹಾಕದಿರುವಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಹಾಗೆ ಮಾಡಿದರೆ, ನಾಳೆ ನಿಮ್ಮ ಮೇಲೆ ಇಡಿ ದಾಳಿ ನಡೆಸುತ್ತೇನೆ. ನಿಮ್ಮನ್ನು ಆದಾಯ ತೆರಿಗೆ ಇಲಾಖೆ ಬಂಧಿಸುತ್ತದೆ. ಅಲ್ಲದೆ ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಶಶಿ ತರೂರ್ ನನಗೆ ಬೆದರಿಕೆಯೊಡ್ಡಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಇದಾಗ್ಯೂ ನಾನು ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಯ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ. ಈ ವೇಳೆ ಅಂದಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರಿಂದ ಕರೆ ಬಂದಿದ್ದು, 10 ಜನಪಥ್‌ನಿಂದ ಕರೆಗಳು ಬರುತ್ತಿದ್ದರಿಂದ ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳಿಕೊಂಡರು. ಹಾಗಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದೀಗ ಲಲಿತ್ ಮೋದಿಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಹಾಲಿ ಸಂಸದ ತಶಿ ತರೂರ್ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕೊಚ್ಚಿ ಟಸ್ಕರ್ಸ್ ಟೀಮ್:
2010 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಐಪಿಎಲ್ಗೆ ಪರಿಚಯಿಸಲಾಗಿತ್ತು. ಆದರೆ ಮರುವರ್ಷವೇ ಅದನ್ನು ವಿಸರ್ಜಿಸಲಾಯಿತು. ಇದಕ್ಕೆ ಮುಖ್ಯ ಕಾರಣ ಲಲಿತ್ ಮೋದಿ ಎಂದು ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಆರೋಪಿಸಿತ್ತು.
ಲಲಿತ್ ಮೋದಿ ಕಿರುಕುಳ ನೀಡುತ್ತಿದ್ದಾರೆ ಕೊಚ್ಚಿ ಟಸ್ಕರ್ಸ್ ಆಡಳಿತ ಮಂಡಳಿ ಬಿಸಿಸಿಐಗೆ ದೂರು ನೀಡಿದ್ದರು. ಹೀಗಾಗಿ ಟೂರ್ನಿಯಿಂದ ತಂಡವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿತ್ತು.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್ಗೆ ಭಾರೀ ಬೆಲೆ ತೆತ್ತ ‘ಮ್ಯಾಂಗೊ’ ನವೀನ
ಕೊಚ್ಚಿ ತಂಡದ ಈ ದೂರಿನ ನಂತರ, ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ಸೇರಿದಂತೆ 22 ಆರೋಪಗಳ ಮೇಲೆ ಅವರನ್ನು ಲಲಿತ್ ಮೋದಿ ಅವರನ್ನು ಬಿಸಿಸಿಐ ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಯಿತು. ಈ ಆರೋಪದ ಬೆನ್ನಲ್ಲೇ ಭಾರತದಿಂದ ಪಾಲಾಯನಗೈದ ಲಲಿತ್ ಮೋದಿ ಇದೀಗ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ.
Published On - 11:08 am, Thu, 28 November 24