ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ 23ನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಹುಬ್ಬಳ್ಳಿ ಟೈಗರ್ಸ್ ತಂಡ 42 ರನ್ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಹುಬ್ಬಳ್ಳಿ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರೆ, ಇತ್ತ ಮಂಗಳೂರು ಡ್ರ್ಯಾಗನ್ಸ್ ಮೊದಲ ತಂಡವಾಗಿ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಇದರೊಂದಿಗೆ ಸತತ ಮೂರನೇ ಆವೃತ್ತಿಯಲ್ಲೂ ಮಂಗಳೂರು ತಂಡ ಲೀಗ್ ಸುತ್ತಿನಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡ ಬರೋಬ್ಬರಿ 209 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡ 19.2 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಮೊಹಮ್ಮದ್ ತಾಹ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ಕಾರ್ತಿಕೇಯ 9 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಆ ಬಳಿಕ ಜೊತೆಯಾದ ಶ್ರೀಜಿತ್ ಮತ್ತು ಅನೀಶ್ವರ್ ಗೌತಮ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಈ ಇಬ್ಬರು ಮೂರನೇ ವಿಕೆಟ್ಗೆ 150 ರನ್ಗಳ ಜೊತೆಯಾಟ ನಡೆಸಿದರು. ಈ ವೇಳೆ ಶ್ರೀಜಿತ್ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 77 ರನ್ ಬಾರಿಸಿ ಔಟಾದರೆ, ಅನೀಶ್ವರ್ ಗೌತಮ್ 58 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ 95 ರನ್ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆದರೆ ಕೇವಲ 5 ರನ್ಗಳಿಂದ ಶತಕ ವಂಚಿತರಾದರು. ನಾಯಕ ಮನೀಶ್ ಪಾಂಡೆ ಕೂಡ ಅಜೇಯ 24 ರನ್ಗಳ ಕಾಣಿಕೆ ನೀಡಿದರು. ಹೀಗಾಗಿ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡಕ್ಕೆ ಮತ್ತೊಮ್ಮೆ ಆರಂಭಿಕರು ಕೈಕೊಟ್ಟರು. ಇಡೀ ಆವೃತ್ತಿಯಲ್ಲಿ ಆರಂಭಿಕರಿಂದ ಒಂದೇ ಒಂದು ಹೇಳಿಕೊಳ್ಳುವಂತಹ ಜೊತೆಯಾಟ ಬರಲಿಲ್ಲ. ತಂಡದ ಕಳಪೆ ಪ್ರದರ್ಶನಕ್ಕೆ ಇದು ಒಂದು ಕಾರಣ. ಈ ಪಂದ್ಯದಲ್ಲಿ 16 ರನ್ಗಳಿಗೆ ಮೊದಲ ವಿಕೆಟ್ ಪತನವಾದರೆ, 33 ರನ್ಗಳಿಗೆ 2ನೇ ವಿಕೆಟ್ ಪತನವಾಯಿತು. ತಂಡದ ಪರ ಆರಂಭಿಕ ರೋಹನ್ 25 ರನ್ ಬಾರಿಸಿ ರನೌಟ್ಗೆ ಬಲಿಯಾದರು.
ಮಧ್ಯಮ ಕ್ರಮಾಂಕದಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ 30 ರನ್, ಲೋಚನ್ ಗೌಡ 35 ರನ್ ಹಾಗೂ ಶ್ರೇಯಸ್ ಗೋಪಾಲ್ 38 ರನ್ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ಈ ಮೂವರು ಆಡುವವರೆಗೂ ತಂಡ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಈ ಮೂರು ವಿಕೆಟ್ ಪತನದ ಬಳಿಕ ಮತ್ತೆ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ತಂಡದ ಬಾಲಂಗೋಚಿಗಳು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ತಂಡ 19.2 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Mon, 26 August 24