Maharaja Trophy 2024: ಗುಲ್ಬರ್ಗಾ ತಂಡವನ್ನು ಮಣಿಸಿ ಫೈನಲ್​ಗೇರಿದ ಬೆಂಗಳೂರು

Maharaja Trophy 2024: ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಲ್ಬರ್ಗಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಬೆಂಗಳೂರು ತಂಡ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ.

Maharaja Trophy 2024: ಗುಲ್ಬರ್ಗಾ ತಂಡವನ್ನು ಮಣಿಸಿ ಫೈನಲ್​ಗೇರಿದ ಬೆಂಗಳೂರು
ಬೆಂಗಳೂರು ಬ್ಲಾಸ್ಟರ್ಸ್
Follow us
|

Updated on:Aug 30, 2024 | 10:47 PM

ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಲ್ಬರ್ಗಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಬೆಂಗಳೂರು ತಂಡ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಲ್ಬರ್ಗಾ ತಂಡ ಪೂರ್ಣ 20 ಓವರ್​ಗಳನ್ನು ಆಡಲಾಗದೆ 19.5 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಮತ್ತೆ ಬ್ಯಾಟಿಂಗ್ ವೈಫಲ್ಯ

ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ತಂಡಕ್ಕೆ ಆರಂಭಿಕ ಲವ್ನಿತ್ ಸಿಸೋಡಿಯರನ್ನು ಬಿಟ್ಟರೆ ಉಳಿದವರಿಂದ ಯಾವುದೇ ಪರಿಣಾಮಕಾರಿ ಇನ್ನಿಂಗ್ಸ್ ಕಂಡುಬರಲಿಲ್ಲ. ಮತ್ತೊಬ್ಬ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ದೇವದತ್ ಪಡಿಕ್ಕಲ್ ಕೇವಲ 13 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಮೊದಲ ವಿಕೆಟ್​ಗೆ ಈ ಇಬ್ಬರ ನಡುವೆ 33 ರನ್​ಗಳ ಜೊತೆಯಾಟವಿತ್ತು. ಆದರೆ ಈ ಜೋಡಿ ಬೇರ್ಪಟ್ಟ ನಂತರ ಗುಲ್ಬರ್ಗಾ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು.

ಬ್ಯಾಟರ್​ಗಳ ಪೆವಿಲಿಯನ್ ಪರೇಡ್

ಮೂರನೇ ಕ್ರಮಾಂದಲ್ಲಿ ಬಂದ ಬಿಆರ್​ ಶರತ್ 6 ರನ್​ಗಳಿಗೆ ಸುಸ್ತಾದರೆ, ನಂಬಿಕಸ್ತ ಬ್ಯಾಟರ್ ಸ್ಮರಣ್ ಕೂಡ 10 ರನ್ ದಾಟಿ ಮುಂದಕ್ಕೆ ಹೋಗಲಿಲ್ಲ. ಅನೀಶ್ ಅವರ ಇನ್ನಿಂಗ್ಸ್ ಕೂಡ 7 ರನ್​ಗಳಿಗೆ ಕೊನೆಗೊಂಡಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ವೇಗಿ ವೈಶಾಕ್ ವಿಜಯ್ ಕುಮಾರ್ ಕೇವಲ 2 ರನ್ ಬಾರಿಸಲಷ್ಟೇ ಶಕ್ತರಾದರು. ಉಳಿದಂತೆ ಪೃಥ್ವಿರಾಜ್ 12 ರನ್, ರಿತೇಶ್ 17 ರನ್, ಪ್ರವೀಣ್ 26 ರನ್ ಹಾಗೂ ವಹೀದ್ 13 ರನ್ ಬಾರಿಸಿ ತಂಡವನ್ನು 155 ರನ್​ಗಳಿಗೆ ಕೊಂಡೊಯ್ದರು.

ಇನ್ನು ಬೆಂಗಳೂರು ಪರ ಬೌಲಿಂಗ್​ನಲ್ಲಿ ಮಿಂಚಿದ ಮೊಹ್ಸಿನ್ ಖಾನ್, ಲವೀಶ್ ಕೌಶಲ್, ಕ್ರಾಂತಿ ಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಪಡೆದರೆ, ಸಂತೋಖ್ ಸಿಂಗ್ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಅಬ್ಬರದ ಆರಂಭ

ಗುಲ್ಬರ್ಗಾ ನೀಡಿದ 155 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಿಬ್ಬರು ಮುರಿಯದ ವಿಕೆಟ್​ಗೆ ಶತಕದ ಜೊತೆಯಾಟ ನೀಡಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಎಲ್​ಆರ್​ ಚೇತನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಜೋಡಿ ಪವರ ಪ್ಲೇನಲ್ಲೇ ಬರೋಬ್ಬರಿ 78 ರನ್ ಕಲೆಹಾಕಿತು. 10 ಓವರ್​ಗಳ ಮುಕ್ತಾಯದೊಳಗೆ ತಂಡ ಶತಕದ ಗಡಿ ದಾಟಿ 104 ರನ್ ಕಲೆಹಾಕಿತು. ಈ ವೇಳೆ ಚೇತನ್ ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕ ಕೂಡ ಪೂರೈಸಿದರು.

ಶತಕದ ಜೊತೆಯಾಟ

ಚೇತನ್​ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ ಮಯಾಂಕ್ ಕೂಡ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆ ಬಳಿಕವೂ ತಮ್ಮ ಅಬ್ಬರ ನಿಲ್ಲಿಸದ ಈ ಇಬ್ಬರು ಗುಲ್ಬರ್ಗಾ ಬಾಯಿಯಿಂದ ಗೆಲುವಿನ ಸಿಹಿಯನ್ನು ಸುಲಭವಾಗಿ ಕಿತ್ತುಕೊಂಡರು. ಅಂತಿಮವಾಗಿ ಮಯಾಂಕ್ 37 ಎಸೆತಗಳಲ್ಲಿ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಅಷ್ಟರೊಳಗೆ ಈ ಆರಂಭಿಕ ಜೋಡಿ ಮೊದಲ ವಿಕೆಟ್​ಗೆ 124 ರನ್ ಜೊತೆಯಾಟ ಅಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತ್ತು.

ಮಯಾಂಕ್ ಔಟಾದ ಬಳಿಕವೂ ತನ್ನ ಜವಬ್ದಾರಿ ಮರೆಯದ ಚೇತನ್ 51 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್​ಗಳ ಸಹಿತ ಅಜೇಯ 89 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಚೇತನ್​ಗೆ ಸಾಥ್ ನೀಡಿದ ಭುವನ್ ರಾಜ್ 15 ಎಸೆತಗಳಲ್ಲಿ 1 ಬೌಂಡರಿ ಸಹಿತ ಅಜೇಯ 13 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Fri, 30 August 24