AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: 7ರ ಸರದಾರನ 7 ದಾಖಲೆಗಳು!

Mahendra singh dhoni Birthday: ಇಂದು ಜುಲೈ 7, ವಿಶ್ವ ಕ್ರಿಕೆಟ್‌ನ ದಂತಕಥೆ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಮಹೇಂದ್ರ ಸಿಂಗ್ ಧೋನಿ (45) ಅವರ ಹುಟ್ಟುಹಬ್ಬ. ತಮ್ಮ ಬೆನ್ನ ಮೇಲಿನ ಐಕಾನಿಕ್ 'ನಂಬರ್ 7' ಜೆರ್ಸಿಯ ಮೂಲಕವೇ ಜಗತ್ತಿನಾದ್ಯಂತ ಹೊಸ ಕ್ರಾಂತಿ ಸೃಷ್ಟಿಸಿದ ಈ 'ಕ್ಯಾಪ್ಟನ್ ಕೂಲ್' ಬರೆದಿಟ್ಟಿರುವ 7 ಅಪ್ರತಿಮ ದಾಖಲೆಗಳ ಪಟ್ಟಿ ಇಲ್ಲಿದೆ.

MS Dhoni: 7ರ ಸರದಾರನ 7 ದಾಖಲೆಗಳು!
MS DhoniImage Credit source: rvcj
ಝಾಹಿರ್ ಯೂಸುಫ್
|

Updated on: Jul 07, 2026 | 12:33 PM

Share

ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿ, ಹೆಲಿಕಾಪ್ಟರ್ ಶಾಟ್‌ಗಳ ಸರದಾರ, ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕ… ಅವರೇ ಮಹೇಂದ್ರ ಸಿಂಗ್ ಧೋನಿ. ಮೈದಾನದಲ್ಲಿ ಬಿರುಗಾಳಿಯಂತಹ ಪರಿಸ್ಥಿತಿ ಇದ್ದರೂ ಹಿಮದಂತೆ ಶಾಂತವಾಗಿರುತ್ತಿದ್ದ ಧೋನಿ, ಬರೀ ಪಂದ್ಯಗಳನ್ನಷ್ಟೇ ಗೆಲ್ಲಲಿಲ್ಲ, ವಿಶ್ವದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಗೆದ್ದರು.

ರಾಂಚಿಯ ಸಣ್ಣ ಹಳ್ಳಿಯಿಂದ ಬಂದು ಜಾಗತಿಕ ಕ್ರಿಕೆಟ್ ಅನ್ನೇ ಆಳಿದ ಈ ‘ಕ್ಯಾಪ್ಟನ್ ಕೂಲ್’ ಬೆನ್ನ ಮೇಲಿದ್ದ ಆ ಮ್ಯಾಜಿಕಲ್ ನಂಬರ್ ‘7’ ಕೇವಲ ಜೆರ್ಸಿ ಸಂಖ್ಯೆಯಾಗಿ ಉಳಿಯಲಿಲ್ಲ. ಅದೊಂದು ಇತಿಹಾಸದ ಹೆಗ್ಗುರುತಾಯಿತು. ವಿಶ್ವ ಕ್ರಿಕೆಟ್ ಮೈದಾನದಲ್ಲಿ ಧೋನಿ ಬರೆದಿಟ್ಟಿರುವ, ಯಾರೂ ಅಳಿಸಲಾಗದ ಆ 7 ಅಪರೂಪದ ಮತ್ತು ರೋಮಾಂಚನಕಾರಿ ದಾಖಲೆಗಳ ಅನಾವರಣ ಇಲ್ಲಿದೆ.

ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ:

ಕ್ರಿಕೆಟ್ ಜಗತ್ತಿನಲ್ಲಿ ಐಸಿಸಿಯ ಎಲ್ಲಾ ಮೂರು ಪ್ರಮುಖ ಬಿಳಿ ಚೆಂಡಿನ ಟ್ರೋಫಿಗಳನ್ನು ಮುಡಿಗೇರಿಸಿಕೊಂಡ ಏಕೈಕ ನಾಯಕ ಧೋನಿ. ಇವರ ನೇತೃತ್ವದಲ್ಲಿ ಭಾರತ ತಂಡವು 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು.

ಅತಿ ಹೆಚ್ಚು ಪಂದ್ಯಗಳ ಕ್ಯಾಪ್ಟನ್:

ವಿಶ್ವ ಕ್ರಿಕೆಟ್‌ನಲ್ಲಿ ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತರಾದ ಧೋನಿ, ಭಾರತ ತಂಡವನ್ನು ಒಟ್ಟು 332 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ (200 ಒನ್‌ಡೇ, 60 ಟೆಸ್ಟ್, 72 ಟಿ20) ಮುನ್ನಡೆಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.

ಅತಿ ಹೆಚ್ಚು ಸ್ಟಂಪಿಂಗ್ಸ್:

ವಿಕೆಟ್ ಹಿಂಭಾಗದಲ್ಲಿ ಧೋನಿ ಹೊಂದಿದ್ದ ಚಿರತೆಯಂತಹ ವೇಗ ಎಲ್ಲರಿಗೂ ಗೊತ್ತು. ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 195 ಸ್ಟಂಪಿಂಗ್ಸ್ ಮಾಡುವ ಮೂಲಕ ಜಗತ್ತಿನಲ್ಲೇ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 0.08 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್ ಮಾಡಿದ ವಿಶ್ವದ ಅತ್ಯಂತ ವೇಗದ ದಾಖಲೆಯೂ ಇವರ ಹೆಸರಿನಲ್ಲಿದೆ.

ಗರಿಷ್ಠ ವೈಯುಕ್ತಿಕ ಸ್ಕೋರ್:

2005ರಲ್ಲಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಧೋನಿ ಅಬ್ಬರಿಸಿ ಬೊಬ್ಬೆರೆದು ಔಟಾಗದೆ 183 ರನ್* ಚಚ್ಚಿದ್ದರು. ಎರಡು ದಶಕಗಳು ಕಳೆದರೂ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ಈ ದಾಖಲೆ ಇಂದಿಗೂ ಅಚಲವಾಗಿದೆ.

ಅಜೇಯ ದಾಖಲೆ:

ಕ್ರಿಕೆಟ್ ಜಗತ್ತಿನ ‘ಅತ್ಯುತ್ತಮ ಫಿನಿಶರ್’ ಎನಿಸಿಕೊಂಡಿರುವ ಧೋನಿ, ತಾವು ಆಡಿದ 350 ಒನ್‌ಡೇ ಪಂದ್ಯಗಳಲ್ಲಿ ದಾಖಲೆಯ 84 ಬಾರಿ ಔಟಾಗದೆ (ನಾಟ್ ಔಟ್) ಉಳಿದಿದ್ದಾರೆ. ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದು ಗೆಲ್ಲಿಸುವ ಅವರ ಕಲೆಗೆ ಈ ಅಂಕಿ-ಅಂಶವೇ ಸಾಕ್ಷಿ.

ರನ್​ಗಳ ರಾಶಿ:

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಲೇ 5,000 ರನ್ ಪೂರೈಸಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ (226) ನಾಯಕತ್ವ ವಹಿಸಿದ ದಾಖಲೆಯೂ ಇವರದ್ದೇ ಆಗಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಅತಿ ಹೆಚ್ಚು ಶತಕ:

ತಮ್ಮ ಜೆರ್ಸಿ ಸಂಖ್ಯೆ 7 ಕ್ಕೆ ತಕ್ಕಂತೆ ಧೋನಿ ಹೊಂದಿರುವ ಮತ್ತೊಂದು ಅಪರೂಪದ ದಾಖಲೆ ಇದು. ಸಾಮಾನ್ಯವಾಗಿ 7ನೇ ಕ್ರಮಾಂಕದಲ್ಲಿ ಬರುವ ಬ್ಯಾಟರ್‌ಗಳಿಗೆ ಹೆಚ್ಚು ಎಸೆತಗಳು ಸಿಗುವುದಿಲ್ಲ. ಆದರೂ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಈ ಸ್ಥಾನದಲ್ಲಿ ಕಣಕ್ಕಿಳಿದು 2 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

Follow Us