9ನೇ ಕ್ರಮಾಂಕದಲ್ಲಿ ಭರ್ಜರಿ ಸೆಂಚುರಿ: ಹೊಸ ದಾಖಲೆ ಬರೆದ ಮನ್ವಂತ್ ಕುಮಾರ್!

ದೇಶೀಯ ಕ್ರಿಕೆಟ್​ನಲ್ಲಿ ಕರ್ನಾಟಕದ ಯುವ ಆಲ್​ರೌಂಡರ್ ಮನ್ವಂತ್ ಕುಮಾರ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಲೆಜೆಂಡ್ ಅನಿಲ್ ಕುಂಬ್ಳೆ ಬರೆದಿದ್ದ 32 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

9ನೇ ಕ್ರಮಾಂಕದಲ್ಲಿ ಭರ್ಜರಿ ಸೆಂಚುರಿ: ಹೊಸ ದಾಖಲೆ ಬರೆದ ಮನ್ವಂತ್ ಕುಮಾರ್!
Manvanth Kumar
Image Credit source: x.com

Updated on: Oct 19, 2026 | 2:36 PM

ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಯುವ ಆಟಗಾರ ಎಲ್. ಮನ್ವಂತ್ ಕುಮಾರ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಈ ಶತಕದೊಂದಿಗೆ ಮನ್ವಂತ್ ರಣಜಿ ಟೂರ್ನಿಯಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಕರ್ನಾಟಕ ಪರ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ರೋಹನ್ ಪಾಟೀಲ್ ಕೇವಲ 9 ರನ್​ ಗಳಿಸಿ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ವಿಜಯಕುಮಾರ್ ವೈಶಾಕ್ ಕೇವಲ 1 ರನ್​ ಗಳಿಸಿ ಔಟಾದರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ 42 ರನ್​​ಗಳ ಕೊಡುಗೆ ನೀಡಿದರು.

ಈ ಮೂರು ವಿಕೆಟ್​ಗಳ ಪತನದ ನಂತರ ಜೊತೆಯಾದ ಅನೀಶ್ ಕೆವಿ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 96 ಎಸೆತಗಳನ್ನು ಎದುರಿಸಿದ ಅನೀಶ್ 59 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ಕರುಣ್ ನಾಯರ್ 46 ರನ್​ ಗಳಿಸಿ ಔಟಾದರು.

ಈ ಇಬ್ಬರ ವಿಕೆಟ್​ ಬೀಳುತ್ತಿದ್ದಂತೆ ಮತ್ತೆ ಕುಸಿತಕ್ಕೊಳಗಾದ ಕರ್ನಾಟಕ ತಂಡವು ಅನೀಶ್ ಗೌತಮ್ (4), ಕೃಷ್ಣನ್ ಶ್ರೀಜಿತ್ (21), ಶ್ರೇಯಸ್ ಗೋಪಾಲ್ (3) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮನ್ವಂತ್ ಮಿಂಚಿಂಗ್:

187 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್​ಗೆ ಆಗಮಿಸಿದ ಮನ್ವಂತ್ ಕುಮಾರ್ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಮನ್ವಂತ್ ಆ ಬಳಿಕ ರನ್ ವೇಗವನ್ನು ಹೆಚ್ಚಿಸಿದರು. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಅವರು 124 ಎಸೆತಗಳಲ್ಲಿ 86 ರನ್ ಗಳಿಸಿ ಅಜೇಯರಾಗುಳಿದರು.

ದ್ವಿತೀಯ ದಿನದಾಟದಲ್ಲೂ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಮನ್ವಂತ್ ಕೇವಲ 20 ಎಸೆತಗಳಲ್ಲೇ 14 ರನ್ ಕಲೆಹಾಕುವ ಮೂಲಕ ಚೊಚ್ಚಲ ಶತಕ ಪೂರೈಸಿದರು. ಈ ಶತಕದ ಬಳಿಕ ಮತ್ತೆ ರಕ್ಷಣಾತ್ಮಕ ಆಟದತ್ತ ಮುಖ ಮಾಡಿದ ಮನ್ವಂತ್ ಕುಮಾರ್ ಅಂತಿಮವಾಗಿ 214 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ 135 ರನ್​ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಮನ್ವಂತ್ ಕುಮಾರ್ ಅವರ ಈ ಪ್ರಚಂಡ ಬ್ಯಾಟಿಂಗ್ ನೆರವಿನೊಂದಿಗೆ ಕರ್ನಾಟಕ ತಂಡವು ಮೊದಲ ಇನಿಂಗ್ಸ್​​ನಲ್ಲಿ ಬರೋಬ್ಬರಿ 342 ರನ್​ ಕಲೆಹಾಕಿದೆ.

‘ಜಂಬೋ’ ದಾಖಲೆ ಉಡೀಸ್!

ಸೌರಾಷ್ಟ್ರ ವಿರುದ್ಧ ಬಾರಿಸಿದ ಈ ಭರ್ಜರಿ ಸೆಂಚುರಿಯೊಂದಿಗೆ ಮನ್ವಂತ್ ಕುಮಾರ್ 32 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಂದರೆ ಕರ್ನಾಟಕ ಪರ 9ನೇ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಇದೀಗ ಮನ್ವಂತ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು.

  • 1994-95ರ ರಣಜಿ ಸೀಸನ್​ನಲ್ಲಿ ಕೇರಳ ವಿರುದ್ಧ ಅನಿಲ್ ಕುಂಬ್ಳೆ 9ನೇ ಕ್ರಮಾಂಕದಲ್ಲಿ ಬ್ಯಾಟ್ ಅಜೇಯ 117 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು.
  • 32 ವರ್ಷಗಳ ಹಳೆಯ ದಾಖಲೆಯನ್ನು ಮನ್ವಂತ್ ಕುಮಾರ್ 135 ರನ್​ಗಳ ಭರ್ಜರಿ ಇನಿಂಗ್ಸ್​ನೊಂದಿಗೆ ಅಳಿಸಿ ಹಾಕಿದ್ದಾರೆ.
  • ಈ ಮೂಲಕ ರಣಜಿ ಟೂರ್ನಿಯಲ್ಲಿ ಕರ್ನಾಟಕ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಗರಿಷ್ಠ ಸ್ಕೋರ್ ಗಳಿಸಿದ ದಾಖಲೆಯನ್ನು ಮನ್ವಂತ್ ಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕ ಪ್ಲೇಯಿಂಗ್ 11: ರೋಹನ್ ಪಾಟೀಲ್ , ಮಾಯಾಂಕ್ ಅಗರ್ವಾಲ್ , ಅನೀಶ್ವರ್ ಗೌತಮ್ ,
ಅನೀಶ್ ಕೆ.ವಿ. ಕರುಣ್ ನಾಯರ್ , ಶ್ರೇಯಸ್ ಗೋಪಾಲ್ (ನಾಯಕ) , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಅಭಿಲಾಷ್ ಶೆಟ್ಟಿ , ಮನ್ವಂತ್ ಕುಮಾರ್ ಎಲ್ , ವಿಜಯಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.

ಇದನ್ನೂ ಓದಿ: ಹಿರಿಯರದ್ದೇ ದರ್ಬಾರ್: 100 ವರ್ಷಗಳ ಬಳಿಕ ವಿಶೇಷ ಪ್ಲೇಯಿಂಗ್ 22

ಸೌರಾಷ್ಟ್ರ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಚಿರಾಗ್ ಜಾನಿ , ಜೇ ಗೋಹಿಲ್ ,
ಅರ್ಪಿತ್ ವಾಸವಾಡ , ಪ್ರೇರಕ್ ಮಂಕಡ್ , ಸಮ್ಮರ್ ಗಜ್ಜರ್ , ಜಯದೇವ್ ಉನಾದ್ಕತ್ (ನಾಯಕ) , ಚೇತನ್ ಸಕರಿಯಾ , ಅಂಕುರ್ ಪನ್ವಾರ್ , ಪಾರ್ಥ್ ಭುಟ್ , ಹೆತ್ವಿಕ್ ಕೊಟಕ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us