Australia Team: ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ..!

TV9 Digital Desk

| Edited By: Zahir Yusuf

Updated on: Jan 15, 2022 | 5:27 PM

Nivethan Radhakrishnan: ಸೆಲ್ವನ್ ಅವರು ತಮಿಳುನಾಡು ಪರ ಜೂನಿಯರ್ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಇದೀಗ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕೆಂಬ ತಂದೆಯ ಕನಸನ್ನು ಮಗ ಈಡೇರಿಸುವತ್ತಾ ಹೆಜ್ಜೆಯನ್ನಿಟ್ಟಿದ್ದಾರೆ.

Australia Team: ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ..!
Nivethan Radhakrishnan


ಕೆರಿಬಿಯನ್ನರ ನಾಡಲ್ಲಿ ಅಂಡರ್ 19 ವಿಶ್ವಕಪ್ (U19 World Cup) ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್​ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾದ ಈ ಗೆಲುವಿನಲ್ಲಿ ಭಾರತೀಯನೊಬ್ಬನ ಕೊಡುಗೆ ಕೂಡ ಇದೆ ಎಂಬುದೇ ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 40.1 ಓವರ್​ಗಳಲ್ಲಿ 169 ರನ್​ಗಳಿಸಿ ಸರ್ವಪತನ ಕಂಡಿತು. ಹೀಗೆ ವಿಂಡೀಸ್ ದಾಂಡಿಗರು ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು ವೇಗಿ ಟಾಮ್ ವೈಟ್ನೆ ಹಾಗೂ ಸ್ಪಿನ್ನರ್ ನಿವೇತನ್ ರಾಧಾಕೃಷ್ಣನ್ (Nivethan Radhakrishnan). ಇಬ್ಬರು ಮೂರು ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವು ಕಡಿಮೆ ಮೊತ್ತಕ್ಕೆ ಕುಸಿಯಲು ಕಾರಣರಾದರು.

ಆದರೆ ಇಲ್ಲಿ ಸ್ಪಿನ್ ಮೋಡಿ ಮಾಡಿರುವ ನಿವೇತನ್ ರಾಧಾಕೃಷ್ಣನ್ ಮೂಲತಃ ಭಾರತೀಯ ಎಂಬುದು ವಿಶೇಷ. ಅದರಲ್ಲೂ ಈ ಹಿಂದೆ ಐಪಿಎಲ್ ತಂಡಗಳ ಪರ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲೂ ಸ್ಪಿನ್ ಮೋಡಿ ಮಾಡಿದ್ದರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ನಿವೇತನ್ ಬಲಗೈಯಿಂದ ಆಫ್ ಸ್ಪಿನ್ ಮತ್ತು ಎಡಗೈಯಿಂದ ಸ್ಪಿನ್ ಬೌಲಿಂಗ್ ಮಾಡುವಲ್ಲಿ ನಿಸ್ಸೀಮರು. ಹೀಗಾಗಿಯೇ ಎದುರಾಳಿ ಬ್ಯಾಟರ್​ನ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಾ ಬೌಲಿಂಗ್ ಶೈಲಿಯನ್ನು ಬದಲಿಸುತ್ತಾರೆ.

ಅಂದಹಾಗೆ ನಿವೇತನ್ ರಾಧಾಕೃಷ್ಣನ್ ನವೆಂಬರ್ 25, 2002 ರಲ್ಲಿ ಚೆನ್ನೈನಲ್ಲಿ ಜನಿಸಿದರು. 10 ವರ್ಷದವರಾಗಿದ್ದಾಗ, ಅವರ ಕುಟುಂಬವು ಸಿಡ್ನಿಗೆ ಸ್ಥಳಾಂತರಗೊಂಡಿತು. ಸಿಡ್ನಿಗೆ ತೆರಳಿದ ಬಳಿಕ ನಿವೇತನ್ ರಾಧಾಕೃಷ್ಣನ್ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸಿದರು. ಅದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಜರ್ನಿ ಶುರುವಾಯಿತು.

ಇದಾಗ್ಯೂ ನಿವೇತನ್ ತನ್ನ ತವರಿನ ತಂಡದಿಂದ ದೂರವಿರಲಿಲ್ಲ. ಹೀಗಾಗಿಯೇ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಲೋವರ್ ಡಿವಿಷನ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಈ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದು ಕೂಡ ಮಿಂಚಿದ್ದರು. ಇನ್ನು 2017 ಮತ್ತು 2018 ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಎರಡೂ ಕೈನಲ್ಲಿ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದರು.

2019 ರಲ್ಲಿ ಆಸ್ಟ್ರೇಲಿಯಾದ ಅಂಡರ್ 16 ತಂಡಕ್ಕೆ ಎಂಟ್ರಿ ಕೊಡುವುದರೊಂದಿಗೆ ನಿವೇತನ್ ರಾಧಾಕೃಷ್ಣನ್ ಆಸೀಸ್ ಪರ ಹೊಸ ಇನಿಂಗ್ಸ್ ಆರಂಭಿಸಿದ್ದರು. ಇದಾದ ಬಳಿಕ ಯುವ ಸ್ಪಿನ್ ಮೋಡಿಗಾರ ಹಿಂತಿರುಗಿ ನೋಡಿಲ್ಲ ಎಂಬುದು ವಿಶೇಷ. ಇದೀಗ ಆಸ್ಟ್ರೇಲಿಯಾ ಅಂಡರ್ 19 ತಂಡದಲ್ಲಿ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿ ಮಿಂಚಿದ್ದಾರೆ.

ಇನ್ನು ಕಳೆದ ಸೀಸನ್​ ಐಪಿಎಲ್​ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ನಿವೇತನ್ ರಾಧಾಕೃಷ್ಣನ್ ಖ್ಯಾತ ಆಟಗಾರರಿಗೆ ನೆಟ್ಸ್​ನಲ್ಲೇ ಸ್ಪಿನ್ ಮೋಡಿ ಮಾಡಿದ್ದರು. ಹೀಗಾಗಿ ಈ ಬಾರಿ ಕೂಡ ಐಪಿಎಲ್ ಮೆಗಾ ಹರಾಜಿಗಾಗಿ ನಿವೇತನ್ ರಾಧಾಕೃಷ್ಣನ್ ಹೆಸರು ನೀಡುವ ಸಾಧ್ಯತೆಯಿದೆ.

ಅಂದಹಾಗೆ ನಿವೇತನ್ ರಾಧಾಕೃಷ್ಣನ್ ಅವರ ತಂದೆ ಅನ್ಬು ಸೆಲ್ವನ್ ಕೂಡ ಕ್ರಿಕೆಟಿಗರಾಗಿದ್ದರು. ಸೆಲ್ವನ್ ಅವರು ತಮಿಳುನಾಡು ಪರ ಜೂನಿಯರ್ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಇದೀಗ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕೆಂಬ ತಂದೆಯ ಕನಸನ್ನು ಮಗ ಈಡೇರಿಸುವತ್ತಾ ಹೆಜ್ಜೆಯನ್ನಿಟ್ಟಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ನಿವೇತನ್ ರಾಧಾಕೃಷ್ಣನ್ ಆಸ್ಟ್ರೇಲಿಯಾ ಅಂಡರ್ 19 ತಂಡದ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Meet Australia’s Spinner Nivethan Radhakrishnan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada