IPL 2025: ವಿರಾಟ್ ಕೊಹ್ಲಿ ಅಲ್ಲ, RCB ಗೆಲುವಿಗೆ ಕಾರಣ ಯಾರೆಂದು ತಿಳಿಸಿದ ರಜತ್ ಪಾಟಿದಾರ್

IPL 2025 RCB vs MI: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2025) 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 221 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ತಂಡ 209 ರನ್​ಗಳಿಸಲಷ್ಟೇ ಶಕ್ತರಾದರು.

IPL 2025: ವಿರಾಟ್ ಕೊಹ್ಲಿ ಅಲ್ಲ, RCB ಗೆಲುವಿಗೆ ಕಾರಣ ಯಾರೆಂದು ತಿಳಿಸಿದ ರಜತ್ ಪಾಟಿದಾರ್
Virat kohli - Rajat Patidar

Updated on: Apr 08, 2025 | 7:25 AM

ಬರೋಬ್ಬರಿ 10 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಆರ್​​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಕೇವಲ 4 ರನ್​ಗಳಿಸಿ ಮೊದಲ ಓವರ್​ನಲ್ಲೇ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಈ ಆರಂಭಿಕ ಆಘಾತದಿಂದ ಆರ್​ಸಿಬಿ ತಂಡವನ್ನು ಪಾರು ಮಾಡಿದ್ದು ವಿರಾಟ್ ಕೊಹ್ಲಿ. ಮುಂಬೈ ತಂಡದ ಅನುಭವಿ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ವಿರಾಟ್ ಕೊಹ್ಲಿ ಪವರ್​ಪ್ಲೇನಲ್ಲೇ ಪವರ್​ ತೋರಿಸಿದರು. ಅಲ್ಲದೆ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ವಿರಾಟ್ ಕೊಹ್ಲಿಯ (67) ಈ ಭರ್ಜರಿ ಬ್ಯಾಟಿಂಗ್​ನಿಂದಾಗಿ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ಬೌಲರ್​ಗಳು ಲಯ ತಪ್ಪಿದರು. ಆ ಬಳಿಕ ಬಂದ ರಜತ್ ಪಾಟಿದಾರ್ 64 ರನ್​ ಗಳಿಸಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಜಿತೇಶ್ ಶರ್ಮಾ ಅಜೇಯ 40 ರನ್ ಬಾರಿಸಿದರು. ಈ ಮೂಲಕ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು.

ಇದನ್ನೂ ಓದಿ
ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ
VIDEO: ವಿರಾಟ್ ಕೊಹ್ಲಿಗೆ ಬೌಲಿಂಗ್: ಭಾವುಕರಾಗಿ ಅರ್ಧದಲ್ಲೇ ನಿಂತ ಸಿರಾಜ್
11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
MS Dhoni: ಕೇವಲ 3 ರನ್​: ಗ್ರೇಟ್​ ಫಿನಿಶರ್ ಫಿನಿಶ್..!

222 ರನ್​ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ (56) ಹಾಗೂ ಹಾರ್ದಿಕ್ ಪಾಂಡ್ಯ (42) ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಅದ್ಭುತ ದಾಳಿ ಸಂಘಟಿಸಿದ ಆರ್​ಸಿಬಿ ತಂಡವು 12 ರನ್​ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಈ ಜಯ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಆರ್​ಸಿಬಿ ಬೌಲರ್​ಗಳಿಗೆ ನೀಡಿದರು. ಏಕೆಂದರೆ ಇದು ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ನಮ್ಮ ಬೌಲರ್‌ಗಳು ತೋರಿದ ಧೈರ್ಯವು ಅದ್ಭುತವಾಗಿತ್ತು.

ನನಗೆ ಸಿಕ್ಕಿರುವ ಈ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬೌಲಿಂಗ್ ವಿಭಾಗಕ್ಕೆ ಸಲ್ಲಬೇಕು. ಏಕೆಂದರೆ ಈ ಮೈದಾನದಲ್ಲಿ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಆರ್​ಸಿಬಿ ಬೌಲರ್​ಗಳು ಅದನ್ನು ಮಾಡಿ ತೋರಿಸಿದ್ದಾರೆ. ಹೀಗಾಗಿ ಇದರ ಸಂಪೂರ್ಣ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.

ಇನ್ನು ಆರ್​ಸಿಬಿ ತಂಡದ ವೇಗದ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿತ್ತು. ಕೃನಾಲ್ ಬೌಲಿಂಗ್ ಮಾಡಿದ ರೀತಿಯಂತು ವರ್ಣಿಸಲಾಗದು. ಏಕೆಂದರೆ ಕೊನೆಯ ಓವರ್‌ನಲ್ಲಿ ಒತ್ತಡದ ನಡುವೆ ಬೌಲಿಂಗ್ ಮಾಡುವುದು  ಸುಲಭವಾಗಿರಲಿಲ್ಲ. ಆದರೆ ಅವರು ಬೌಲಿಂಗ್ ಮಾಡಿದ ರೀತಿ ಮತ್ತು ಅವರು ತೋರಿಸಿದ ಧೈರ್ಯ ಅದ್ಭುತ.

ನಾವು ಮೊದಲೇ ಪಂದ್ಯವನ್ನು ಕೊನೆಯವರೆಗೆ ಕೊಂಡೊಯ್ಯಬೇಕೆಂದು ನಿರ್ಧರಿಸಿದ್ದೆವು. ಅದರಂತೆ ನನ್ನ ಯೋಜನೆ ಯಶಸ್ವಿಯಾಗಿತ್ತು. ಅಲ್ಲದೆ ಕೊನೆಯ ಹಂತದಲ್ಲಿ ಕೃನಾಲ್ ಪಾಂಡ್ಯ ಅವರಿಂದ ಬೌಲಿಂಗ್ ಮಾಡಿಸಲು ಪ್ಲ್ಯಾನ್ ರೂಪಿಸಿದ್ದೆವು. ಇತ್ತ ಸುಯಶ್ ಶರ್ಮಾ ಕೂಡ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು.

ಇದನ್ನೂ ಓದಿ: VIDEO: ಏನ್ ಆಡ್ತಿರೋ… RCB ಆಟಗಾರರ ಮೇಲೆ ಕೋಪಗೊಂಡು ಕ್ಯಾಪ್ ಎಸೆದ ವಿರಾಟ್ ಕೊಹ್ಲಿ

ಅಂದರೆ ಸ್ಪಿನ್ ಬೌಲಿಂಗ್ ಮೇಲೆ ವಿಶ್ವಾಸವಿದ್ದಿದ್ದರಿಂದ ಅಂತಿಮ ಓವರ್​ ಅನ್ನು ಅನುಭವಿ ಕೃನಾಲ್ ಪಾಂಡ್ಯಗೆ ನೀಡಲು ನಿರ್ಧರಿಸಿದೆವು. ಅದರಂತೆ ಅವರು ಆರ್​ಸಿಬಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ. ಅಲ್ಲದೆ ಈ ಗೆಲುವಿನ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.