ಭಾರತದ ಈ ತಂಡ ಏಕದಿನ, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಬೇಕು ಎಂದ ಮೈಕಲ್ ವಾನ್
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ (Michael Vaughan) ದೊಡ್ಡ ಹೇಳಿಕೆ ನೀಡಿದ್ದು, ಭಾರತದ ಈಗಿನ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ (T20I World Cup) ಮತ್ತು ಚಾಂಪಿಯನ್ ಟ್ರೋಫಿಯನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ (Team India) ಸದ್ಯ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿದೆ. ಸದ್ಯ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಇದಕ್ಕೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಭಾರತ ವಶಪಡಿಸಿಕೊಂಡಿತ್ತು. ಹೀಗಿರುವಾಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ (Michael Vaughan) ದೊಡ್ಡ ಹೇಳಿಕೆ ನೀಡಿದ್ದು, ಭಾರತದ ಈಗಿನ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ (T20I World Cup) ಮತ್ತು ಚಾಂಪಿಯನ್ ಟ್ರೋಫಿಯನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ. ಏಕದಿನ ವಿಶ್ವಕಪ್ಗೆ ವಾತಾವರಣ ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತದೆ. ಆದರೆ, ಭಾರತ ಹೋದಲ್ಲೆಲ್ಲ ವೈಟ್ ಬಾಲ್ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂಬುದು ವಾನ್ ಮಾತು.
“ಭಾರತ ತಂಡವು ಸಂದರ್ಭಕ್ಕೆ ತಕ್ಕಂತೆ ಆಡುತ್ತದೆ. ಅದನ್ನು ನಾವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಂಡಿದ್ದೇವೆ. ನಾವು ಆಕ್ರಮಣಶೀಲತೆ ಬಗ್ಗೆ ಮಾತಾಡುತ್ತೇವೆ. ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಅದಿದೆ. ಆಕ್ರಮಣಕಾರಿ ಆಟ ತಂಡಕ್ಕೆ ತುಂಬಾ ನೆರವು ನೀಡುತ್ತದೆ. ಇಂಗ್ಲೆಂಡ್ ಅತ್ಯುತ್ತಮ ತಂಡ. ಇದುವೇ ಟೀಮ್ ಇಂಡಿಯಾಕ್ಕೆ ಸಹಕಾರಿ ಆಗಿರುವುದು. ಭಾರತದ ಈ ಏಕದಿನ ತಂಡ ಅನೇಕ ಪಂದ್ಯಗಳನ್ನು ಗೆಲ್ಲುತ್ತದೆ. ಭಾರತ ಇಷ್ಟು ಉತ್ತಮ ಪ್ರದರ್ಶನ ನೀಡಲು ಕಾರಣ ಐಪಿಎಲ್. ಭಾರತೀಯ ಆಟಗಾರರಲ್ಲಿ ಅತ್ಯುತ್ತಮ ಕೌಶಲ್ಯವಿದೆ,” ಎಂದು ಹೇಳಿದ್ದಾರೆ.
ಇಂದು ಎರಡನೇ ಏಕದಿನ:
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 10 ವಿಕೆಟ್ಗಳ ಭರ್ಜರಿ ಗೆಲುವು ಕಂಡಿತ್ತು. ಇದೀಗ ರೋಹಿತ್ ಪಡೆ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಇಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ದ್ವಿತೀಯ ಪಂದ್ಯ ಆಯೋಜಿಸಲಾಗಿದ್ದು ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಇಂಗ್ಲೆಂಡ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ತವರಿನಲ್ಲೇ ಹೀನಾಯ ಸೋಲು ಕಂಡಿರುವ ಬಟ್ಲರ್ ನಾಯಕತ್ವಕ್ಕೂ ಇದೊಂದು ಅಗ್ನಿಪರೀಕ್ಷೆಯಾಗಿದೆ.
ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ನಾಯಕತ್ವ ತೊರೆದ ಬಳಿಕ ಕ್ಯಾಪ್ಟನ್ ಆಗಿರುವ ಬಟ್ಲರ್ ಟಿ20 ಸರಣಿ ಕಳೆದುಕೊಂಡಿದ್ದರು. ಈಗ ಏಕದಿನ ಸರಣಿ ವಶಪಡಿಸಿಕೊಳ್ಳಬೇಕಾದರೆ ಇಂದು ಗೆಲ್ಲಲೇ ಬೇಕಿದೆ. ಆಂಗ್ಲರ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋ ರೂಟ್, ಬೈರ್ಸ್ಟೋರಂತಹ ಬಲಿಷ್ಠ ಆಟಗಾರರಿದ್ದರು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡರೆ, ಈ ಪಂದ್ಯದಲ್ಲಿ ಜಯಿಸುವ ಆಸೆ ಈಡೇರಬಹುದು. ಒಟ್ಟಾರೆ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
Published On - 10:23 am, Thu, 14 July 22