INDW vs NZW: ಹರ್ಮನ್ ಏಕಾಂಗಿ ಹೋರಾಟಕ್ಕೆ ಸಿಗದ ಫಲ: ಭಾರತಕ್ಕೆ ಹೀನಾಯ ಸೋಲು
Women's World Cup 2022, New Zealand Women vs India Women: ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ಏಕಾಂಗಿ ಹೋರಾಟ ನಡೆಸಿದರು ಬಿಟ್ಟರೆ ಉಳಿದ ಬಹುತೇಕ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ನ್ಯೂಜಿಲೆಂಡ್ ವನಿತೆಯರು 62 ರನ್ಗಳ ಭರ್ಜರಿ ಜಯ ಸಾಧಿಸಿತು.
ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ 2022ರ (ICC Womens World Cup 2022) ಎಂಟನೇ ಪಂದ್ಯದಲ್ಲಿಂದು ನ್ಯೂಜಿಲೆಂಡ್ ಮಹಿಳಾ ತಂಡ ಭಾರತ ಮಹಿಳಾ ತಂಡ (New Zealand Women vs India Women) ಹೀನಾಯ ಸೋಲು ಕಂಡಿದೆ. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಉಪ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಏಕಾಂಗಿ ಹೋರಾಟ ನಡೆಸಿದರು ಬಿಟ್ಟರೆ ಉಳಿದ ಬಹುತೇಕ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ನ್ಯೂಜಿಲೆಂಡ್ ವನಿತೆಯರು 62 ರನ್ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಕಂಡಿದ್ದಾರೆ. ಇತ್ತ ಮಿಥಾಲಿ ಪಡೆ ಮೊದಲ ಸೋಲು ಅನುಭವಿಸಿದೆ. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಕಂಡಿತ್ತು. ಆದರೆ, ಅದೇ ಲಯದಲ್ಲಿ ಬ್ಯಾಟಿಂಗ್-ಬೌಲಿಂಗ್ ಮಾಡಲು ಎಡವಿದ ಭಾರತೀಯ ವನಿತೆಯರು ಹೀನಾಯವಾಗಿ ಸೋಲು ಕಂಡಿದ್ದಾರೆ. ಕಿವೀಸ್ ಪಡೆ ಆರಂಭಿಕರ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಕಾರಣ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿತು. ಭಾರತ 46.4 ಓವರ್ಗಳಲ್ಲಿ 198 ರನ್ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು.
ನ್ಯೂಜಿಲೆಂಡ್ ನೀಡಿದ್ದ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಈ ಬಾರಿಯೂ ಉತ್ತಮ ಆರಂಭ ಪಡದುಕೊಳ್ಳಲಿಲ್ಲ. 50 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸ್ಮೃತಿ ಮಂದಾನ ಈ ಬಾರಿ ಕೇವಲ 6 ರನ್ಗೆ ಔಟಾದರೆ, ದೀಪ್ತಿ ಶರ್ಮಾ 5 ರನ್ಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಶಫಾಲಿ ಬದಲು ಕಣಕ್ಕಿಳಿದ ಯಸ್ತಿಕಾ ಭಾಟಿಯ 59 ಎಸೆತಗಳಲ್ಲಿ 28 ರನ್ಗೆ ನಿರ್ಗಮಿಸಿದರು.
ಈ ಸಂದರ್ಭ ಜೊತೆಯಾದ ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್ಪ್ರೀತ್ ಕೌರ್ ಎಚ್ಚರಿಕೆಯ ಬ್ಯಾಟಿಂಗ್ಗೆ ಮುಂದಾದರು. ಆದರೆ, ಆಲ್ರೌಂಡರ್ ಅಮೆಲಿಯಾ ಕೇರ್ ಬೌಲಿಂಗ್ ಭಾರತದ ಚಿತ್ರಣವನ್ನು ಬದಲಾಯಿಸಿತು. ಮಿಥಾಲಿ 56 ಎಸೆತಗಳಲ್ಲಿ 31 ರನ್ ಗಳಿಸಿ ಸ್ಟಂಪ್ಔಟ್ಗೆ ಬಲಿಯಾದರೆ, ವಿಕೆಟ್ ಕೀಪರ್ ರಿಚ್ಚಾ ಘೋಷ್ ಬಂದ ಬೆನ್ನಲ್ಲೇ ಸೊನ್ನೆ ಸುತ್ತಿದರು. ಕಳೆದ ಪಂದ್ಯದ ಹೀರೋ ಸ್ನೇಹ್ ರಾಣ(18) ಹಾಗೂ ಪೂಜಾ ವಸ್ತ್ರಾಕರ್(6) ಬೇಗನೆ ಪೆವಿಲಿಯನ್ ಸೇರಿಕೊಂಡರು.
ಹೀಗೆ ಭಾರತ ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ ಅತ್ತ ಹರ್ಮನ್ಪ್ರೀತ್ ಕೌರ್ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿದ್ದರು. ಆದರೆ, ಇವರಿಗೆ ಯಾವೊಬ್ಬ ಬ್ಯಾಟರ್ ಸಾಥ್ ನೀಡಲಿಲ್ಲ. ಅರ್ಧಶತಕ ಸಿಡಿಸಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕೌರ್ 63 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ನೊಂದಿಗೆ 71 ರನ್ ಚಚ್ಚಿ ಅಂತಿಮ ಹಂತದಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಭಾರತ 46.4 ಓವರ್ಗಳಲ್ಲಿ 198 ರನ್ಗೆ ಆಲೌಟ್ ಆಗಿ ಸೋಲುಂಡಿತು. ನ್ಯೂಜಿಲೆಂಡ್ ಪರ ಅಮೇಲಿಯ ಕೇರ್ ಹಾಗೂ ಲೀ ತಹುಹು ತಲಾ 3 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ ಆರಂಭದಲ್ಲೇ ಆಘಾತ ಕೂಡ ನೀಡಿತು. ನ್ಯೂಜಿಲೆಂಡ್ ಪರ ಆರಂಭಿಕರಾಗಿ ಸೂಝಿ ಬೇಟ್ಸ್ ಮತ್ತು ನಾಯಕಿ ಸೋಫಿಯ ಡೆವೈನ್ ಕಣಕ್ಕಿಳಿದರು. ಆದರೆ, ಮೂರನೇ ಓವರ್ನ ಮೊದಲ ಎಸೆತದಲ್ಲಿ ಅನಗತ್ಯ ರನ್ ಕಲೆಹಾಕಲು ಹೋಗಿ ಬೇಟ್ಸ್ ಅವರು ಪೂಜಾ ವಸ್ತ್ರಾಕರ್ರಿಂದ ರನೌಟ್ಗೆ ಬಲಿಯಾಗಬೇಕಾಯಿತು. ಇವರು 10 ಎಸೆತಗಳಲ್ಲಿ 5 ರನ್ ಗಳಿಸಿದರು. ಎರಡನೇ ವಿಕೆಟ್ಗೆ ನಾಯಕಿ ಸೋಫಿಯ ಹಾಗೂ ಅಮೇಲಿಯ ಕೇರ್ ಎಚ್ಚರಿಕೆಯ ಬ್ಯಾಟಿಂಗ್ಗೆ ಮುಂದಾದರು. ಆದರೆ, ನಾಯಕಿ ಆಟ 30 ಎಸೆತಗಳಲ್ಲಿ 35 ರನ್ಗೆ ಅಂತ್ಯವಾಯಿತು.
ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಅಮೇಲಿಯ ಜೊತೆ ಆ್ಯಮಿ ಸೆಟ್ಟರ್ವೈಟ್. 54 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ಜೊತೆಯಾದ ಈ ಜೋಡಿ ತಂಡಕ್ಕೆ ಆಧಾರವಾಗಿ ನಿಂತಿತು. ಮೂರನೇ ವಿಕೆಟ್ಗೆ ಇವರಿಬ್ಬರು 67 ರನ್ಗಳ ಕಾಣಿಕೆ ನೀಡಿದರು. ಅಮೇಲಿಯ 64 ಎಸೆತಗಳಲ್ಲಿ 50 ರನ್ ಗಳಿಸಿದ್ದಾಗ ಗಾಯಕ್ವಾಡ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ನಂತರ ಮ್ಯಾಡಿ ಗ್ರೀನ್(27) ಜೊತೆಯಾದ ಆ್ಯಮಿ ಮತ್ತೊಂದು ಅರ್ಧಶತಕ ಜೊತೆಯಾಟ ಆಡಿದರು.
ಮ್ಯಾಡಿ 36 ಎಸೆತಗಳಲ್ಲಿ 27 ರನ್ಗೆ ಔಟಾದರೆ, ಆ್ಯಮಿ 84 ಎಸೆತಗಳಲ್ಲಿ 9 ಬೌಂಡರಿ ಸಿಡಿಸಿ 75 ರನ್ ಚಚ್ಚಿದರು. ಹೀಗಿರುವಾಗ ನ್ಯೂಜಿಲೆಂಡ್ ಅಂತಿಮ ಹಂತದಲ್ಲಿ ದಿಢೀರ್ 3 ವಿಕೆಟ್ ಕಳೆದುಕೊಂಡಿತು. ಆದರೆ, ಕ್ಯಾಟಿ ಮಾರ್ಟಿನ್ ಹೋರಾಟ ನಡೆಸಿ 51 ಎಸೆತಗಳಲ್ಲಿ 41 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಕೊನೆಯದಾಗಿ ನ್ಯೂಜಿಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿತು. ಭಾರತ ಪರ ಪೂಜಾ ವಸ್ತ್ರಾಕರ್ 4 ವಿಕೆಟ್ ಕಿತ್ತು ಮಿಂಚಿದರೆ, ರಾಜೇಶ್ವರಿ 2 ವಿಕೆಟ್ ಪಡೆದರು.
Shane Warne: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಸ್ಪಿನ್ ದಂತಕತೆ ಶೇನ್ ವಾರ್ನ್ಗೆ ಸ್ಮರಣಾ ಕಾರ್ಯಕ್ರಮ
Published On - 1:31 pm, Thu, 10 March 22