INDW vs NZW: ಬ್ಯಾಟಿಂಗ್ನಲ್ಲಿ ಮಿಂಚಿದ ನ್ಯೂಜಿಲೆಂಡ್: ಮಿಥಾಲಿ ಪಡೆಗೆ ಕಠಿಣ ಟಾರ್ಗೆಟ್
Women's World Cup 2022, New Zealand Women vs India Women: ಆರಂಭಿಕರ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿದೆ. ಆ್ಯಮಿ ಸೆಟ್ಟರ್ವೈಟ್ ಹಾಗೂ ಅಮೇಲಿಯ ಕೇರ್ ಅವರ ಆಕರ್ಷಕ ಅರ್ಧಶತಕ ತಂಡಕ್ಕೆ ನೆರವಾಯಿತು.
ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ 2022ರ (ICC Womens World Cup 2022) ಎಂಟನೇ ಪಂದ್ಯದಲ್ಲಿಂದು ನ್ಯೂಜಿಲೆಂಡ್ ಮಹಿಳಾ ತಂಡ ಭಾರತ ಮಹಿಳಾ ತಂಡಕ್ಕೆ (New Zealand Women vs India Women) ಕಠಿಣ ಟಾರ್ಗೆಟ್ ನೀಡಿದೆ. ಆರಂಭಿಕರ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿದೆ. ಆ್ಯಮಿ ಸೆಟ್ಟರ್ವೈಟ್ ಹಾಗೂ ಅಮೇಲಿಯ ಕೇರ್ ಅವರ ಆಕರ್ಷಕ ಅರ್ಧಶತಕ ತಂಡಕ್ಕೆ ನೆರವಾಯಿತು. ಜೊತೆಗೆ ಅಂತಿಮ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕ್ಯಾಟಿ ಮಾರ್ಟಿನ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ರನ್ಗತಿಯನ್ನು ಮತ್ತಷ್ಟು ಏರಿಸಿದರು. ಈ ಮೂಲಕ ಮಿಥಾಲಿ (Mithali Raj) ಪಡೆಗೆ ಕಿವೀಸ್ ಸವಾಲಿನ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ ಆರಂಭದಲ್ಲೇ ಆಘಾತ ಕೂಡ ನೀಡಿತು. ನ್ಯೂಜಿಲೆಂಡ್ ಪರ ಆರಂಭಿಕರಾಗಿ ಸೂಝಿ ಬೇಟ್ಸ್ ಮತ್ತು ನಾಯಕಿ ಸೋಫಿಯ ಡೆವೈನ್ ಕಣಕ್ಕಿಳಿದರು. ಆದರೆ, ಮೂರನೇ ಓವರ್ನ ಮೊದಲ ಎಸೆತದಲ್ಲಿ ಅನಗತ್ಯ ರನ್ ಕಲೆಹಾಕಲು ಹೋಗಿ ಬೇಟ್ಸ್ ಅವರು ಪೂಜಾ ವಸ್ತ್ರಾಕರ್ರಿಂದ ರನೌಟ್ಗೆ ಬಲಿಯಾಗಬೇಕಾಯಿತು. ಇವರು 10 ಎಸೆತಗಳಲ್ಲಿ 5 ರನ್ ಗಳಿಸಿದರು. ಎರಡನೇ ವಿಕೆಟ್ಗೆ ನಾಯಕಿ ಸೋಫಿಯ ಹಾಗೂ ಅಮೇಲಿಯ ಕೇರ್ ಎಚ್ಚರಿಕೆಯ ಬ್ಯಾಟಿಂಗ್ಗೆ ಮುಂದಾದರು. ಆದರೆ, ನಾಯಕಿ ಆಟ 30 ಎಸೆತಗಳಲ್ಲಿ 35 ರನ್ಗೆ ಅಂತ್ಯವಾಯಿತು.
ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಅಮೇಲಿಯ ಜೊತೆ ಆ್ಯಮಿ ಸೆಟ್ಟರ್ವೈಟ್. 54 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ಜೊತೆಯಾದ ಈ ಜೋಡಿ ತಂಡಕ್ಕೆ ಆಧಾರವಾಗಿ ನಿಂತಿತು. ಮೂರನೇ ವಿಕೆಟ್ಗೆ ಇವರಿಬ್ಬರು 67 ರನ್ಗಳ ಕಾಣಿಕೆ ನೀಡಿದರು. ಅಮೇಲಿಯ 64 ಎಸೆತಗಳಲ್ಲಿ 50 ರನ್ ಗಳಿಸಿದ್ದಾಗ ಗಾಯಕ್ವಾಡ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ನಂತರ ಮ್ಯಾಡಿ ಗ್ರೀನ್(27) ಜೊತೆಯಾದ ಆ್ಯಮಿ ಮತ್ತೊಂದು ಅರ್ಧಶತಕ ಜೊತೆಯಾಟ ಆಡಿದರು.
ಮ್ಯಾಡಿ 36 ಎಸೆತಗಳಲ್ಲಿ 27 ರನ್ಗೆ ಔಟಾದರೆ, ಆ್ಯಮಿ 84 ಎಸೆತಗಳಲ್ಲಿ 9 ಬೌಂಡರಿ ಸಿಡಿಸಿ 75 ರನ್ ಚಚ್ಚಿದರು. ಹೀಗಿರುವಾಗ ನ್ಯೂಜಿಲೆಂಡ್ ಅಂತಿಮ ಹಂತದಲ್ಲಿ ದಿಢೀರ್ 3 ವಿಕೆಟ್ ಕಳೆದುಕೊಂಡಿತು. ಆದರೆ, ಕ್ಯಾಟಿ ಮಾರ್ಟಿನ್ ಹೋರಾಟ ನಡೆಸಿ 51 ಎಸೆತಗಳಲ್ಲಿ 41 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಕೊನೆಯದಾಗಿ ನ್ಯೂಜಿಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಬಾರಿಸಿತು. ಭಾರತ ಪರ ಪೂಜಾ ವಸ್ತ್ರಾಕರ್ 4 ವಿಕೆಟ್ ಕಿತ್ತು ಮಿಂಚಿದರೆ, ರಾಜೇಶ್ವರಿ 2 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಭಾರತ ಮಹಿಳಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಓಪನರ್ ಆದ ಶಫಾಲಿ ವರ್ಮಾ ಬದಲು ಯಸ್ತಿಕಾ ಬಾಟಿಯಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತ ಕಿವೀಸ್ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಯಸ್ತಿಕಾ ಬಾಟಿಯಾ, ದೀಪ್ತಿ ಶರ್ಮಾ, ಹರ್ಮನ್ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.
ನ್ಯೂಜಿಲೆಂಡ್ ಪ್ಲೇಯಿಂಗ್ XI: ಸೂಫಿಯ ಡೆವೈನ್ (ನಾಯಕಿ), ಸೂಝಿ ಬೇಟ್ಸ್, ಅಮೇಲಿಯ ಕೇರ್, ಆ್ಯಮಿ ಸೆಟ್ಟರ್ವೈಟ್, ಮ್ಯಾಡಿ ಗ್ರೀನ್, ಫ್ರಾನ್ಸಸ್ ಮ್ಯಾಕೆ, ಕ್ಯಾಟಿ ಮಾರ್ಟಿನ್ (ವಿಕೆಟ್ ಕೀಪರ್), ಹೇಲೆ ಜೆನ್ಸನ್, ಲೀ ಟಿಹುಹು, ಜೆಸ್ ಕೇರ್, ಹನ್ನ ರೋವ್.
IND vs SL: ಸಿಕ್ಸರ್ಗಳ ದಾಖಲೆ ಮೇಲೆ ಇಬ್ಬರ ಕಣ್ಣು: ರೋಹಿತ್-ಜಡೇಜಾ ನಡುವೆ ಶುರುವಾಗಿದೆ ಪೈಪೋಟಿ
IND vs SL: ಡೇ-ನೈಟ್ ಟೆಸ್ಟ್ಗಾಗಿ ಸಿಲಿಕಾನ್ ಸಿಟಿಗೆ ಬಂದ ಟೀಮ್ ಇಂಡಿಯಾ: ಚಿನ್ನಸ್ವಾಮಿಯಲ್ಲಿ ಅಭ್ಯಾಸ ಶುರು