
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಬ್ಬಾಸ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 5 ವಿಕೆಟ್ ಪಡೆಯುವ ಮೂಲಕ 74 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅಬ್ಬಾಸ್ 22 ಓವರ್ಗಳಲ್ಲಿ 57 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇದಕ್ಕೂ ಮುನ್ನ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದರು. ಈ ಮೂಲಕ ಒಟ್ಟು 9 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಕಬಳಿಸಿದ ಒಟ್ಟು 9 ವಿಕೆಟ್ಗಳೊಂದಿಗೆ ಮೊಹಮ್ಮದ್ ಅಬ್ಬಾಸ್ ಲಾರ್ಡ್ಸ್ ಮೈದಾನದಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಏಷ್ಯಾದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಲೆ ಪಾಕಿಸ್ತಾನದ ವಾಖರ್ ಯೂನಿಸ್ ಹೆಸರಿನಲ್ಲಿತ್ತು. 1996 ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಾಖರ್ ಯೂನಿಸ್ 184 ರನ್ ನೀಡಿ 8 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು.
ಹಾಗೆಯೇ ಈ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ಏಷ್ಯಾದ ಹಿರಿಯ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಭಾರತದ ಸ್ಪಿನ್ನರ್ ವಿನೂ ಮಂಕಡ್ (1952ರಲ್ಲಿ 36ನೇ ವಯಸ್ಸು) ಹೆಸರಿನಲ್ಲಿತ್ತು.
ಇದೀಗ 36 ವರ್ಷ, 5 ತಿಂಗಳ ವಯಸ್ಸಿನ ಮೊಹಮ್ಮದ್ ಅಬ್ಬಾಸ್ 74 ವರ್ಷಗಳ ಬಳಿಕ ವಿನೂ ಮಂಕಡ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಇದನ್ನೂ ಓದಿ: WTC ಫೈನಲ್ ರೇಸ್ನಲ್ಲಿ 5 ತಂಡಗಳು
ಈ ಪಂದ್ಯದಲ್ಲಿ ಪಡೆದ 9 ವಿಕೆಟ್ಗಳೊಂದಿಗೆ ಮೊಹಮ್ಮದ್ ಅಬ್ಬಾಸ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನದಲ್ಲಿ 900 ವಿಕೆಟ್‌ಗಳ ಬೃಹತ್ ಮೈಲಿಗಲ್ಲನ್ನು ದಾಟಿದ್ದಾರೆ. ಈ ಮೂಲಕ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಆಟಗಾರರ ಪೈಕಿ 900ಕ್ಕೂ ಅಧಿಕ ಪ್ರಥಮ ದರ್ಜೆ ವಿಕೆಟ್ ಹೊಂದಿರುವ ಜಗತ್ತಿನ ಕೇವಲ ನಾಲ್ಕು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.