ಎಲ್ಲರಿಗೂ ಧನ್ಯವಾದ… ಟೆಸ್ಟ್​​ ಕ್ರಿಕೆಟ್​ಗೆ ಮೊಹಮ್ಮದ್ ಶಮಿ ದಿಢೀರ್ ನಿವೃತ್ತಿ!

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಹಾಗೂ ಮಾರಕ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ತಮ್ಮ ವಿಶಿಷ್ಟ ಸೀಮ್ ಪೊಸಿಷನ್ ಮತ್ತು ಅದ್ಭುತ ರಿವರ್ಸ್ ಸ್ವಿಂಗ್ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ್ದ ಶಮಿ, ತಾವು ಕೆಂಪು ಚೆಂಡಿನ ಕ್ರಿಕೆಟ್‌ಗೆ ಕೆರಿಯರ್ ಆರಂಭಿಸಿದ ಅದೇ ದಿನಾಂಕದಂದೇ ಸುಖಾಂತ್ಯ ಹಾಡಿದ್ದಾರೆ.

ಎಲ್ಲರಿಗೂ ಧನ್ಯವಾದ... ಟೆಸ್ಟ್​​ ಕ್ರಿಕೆಟ್​ಗೆ ಮೊಹಮ್ಮದ್ ಶಮಿ ದಿಢೀರ್ ನಿವೃತ್ತಿ!
Mohammed Shami
Image Credit source: GettyImages

Updated on: Nov 07, 2026 | 7:42 AM

ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ನವೆಂಬರ್ 6, 2026 ರಂದು ಟೆಸ್ಟ್ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ತಾವು ಇನ್ಮುಂದೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ವೈಟ್-ಬಾಲ್ (ಏಕದಿನ ಹಾಗೂ ಟಿ20) ಮತ್ತು ಐಪಿಎಲ್​ನಲ್ಲಿ ಕಣಕ್ಕಿಳಿಯುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಭಾವುಕ ವಿದಾಯ:

“ನಾನು ಮೊದಲ ಬಾರಿಗೆ ಭಾರತದ ಟೆಸ್ಟ್ ಜರ್ಸಿ ಧರಿಸಿದಾಗ, ನನ್ನ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಒಂದೇ ಒಂದು ಕನಸಿತ್ತು. ಅಂದಿನಿಂದ ಇಂದಿನವರೆಗೆ ನಾನು ಪಡೆದ ಪ್ರತಿ ವಿಕೆಟ್, ಪಟ್ಟ ಪ್ರತಿ ಶ್ರಮ, ಎದುರಿಸಿದ ಪ್ರತಿ ಗಾಯ ಮತ್ತು ಮಾಡಿದ ಪ್ರತಿ ಪುನರಾಗಮನವೂ ನನಗೆ ಒಂದೊಂದು ಪಾಠ ಕಲಿಸಿದೆ.”

Loading...

“ಟೆಸ್ಟ್ ಕ್ರಿಕೆಟ್ ನನಗೆ ಕೇವಲ ಒಂದು ಆಟದ ಮಾದರಿಯಾಗಿರಲಿಲ್ಲ, ಅದು ನನ್ನ ಜೀವನದ ಅತ್ಯಂತ ವಿಶೇಷವಾದ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ನಾನು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ.”

“ನನ್ನ ಈ ಸುದೀರ್ಘ ಪಯಣದಲ್ಲಿ ನನ್ನ ಏಳು-ಬೀಳುಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು, ನನ್ನ ಮೇಲೆ ನಂಬಿಕೆ ಇಟ್ಟಿದ್ದ ಪ್ರತಿ ಸಹ ಆಟಗಾರರು, ತರಬೇತುದಾರರು, ಕುಟುಂಬಸ್ಥರು ಹಾಗೂ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಧನ್ಯವಾದಗಳು. ಇದರೊಂದಿಗೆ ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ ಬಿಸಿಸಿಐ ಮತ್ತು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಸಂಸ್ಥೆಗಳಿಗೂ ಧನ್ಯವಾದಗಳು” ಎಂದು ಮೊಹಮ್ಮದ್ ಶಮಿ ತಮ್ಮ ನಿವೃತ್ತಿ ಘೋಷಣೆಯ ವಿಡಿಯೋದಲ್ಲಿ ತಿಳಿಸಿದ್ದಾರೆ.

ಶಮಿ ವೃತ್ತಿಜೀವನ:

2013ರ ನವೆಂಬರ್ 6 ರಂದು ವೆಸ್ಟ್ ಇಂಡೀಸ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನ ಆರಂಭಿಸಿದ್ದ ಶಮಿ, ಇದೀಗ ಕೆರಿಯರ್ ಆರಂಭಿಸಿದ ಅದೇ ದಿನಾಂಕದಂದೇ (ನವೆಂಬರ್ 6, 2026) ನಿವೃತ್ತಿ ಘೋಷಿಸಿದ್ದಾರೆ. ತಮ್ಮ 13 ವರ್ಷಗಳ ಅದ್ಭುತ ಟೆಸ್ಟ್ ಕೆರಿಯರ್‌ನಲ್ಲಿ ಶಮಿ ಮಾಡಿರುವ ಕಮಾಲ್​ನ ಅಂಕಿ-ಅಂಶಗಳು ಈ ಕೆಳಗಿನಂತಿವೆ:

ಸಾಧನೆಯ ವಿವರ ಅಂಕಿ-ಅಂಶಗಳು
ಒಟ್ಟು ಟೆಸ್ಟ್ ಪಂದ್ಯಗಳು 64
ಒಟ್ಟು ಇನ್ನಿಂಗ್ಸ್‌ಗಳು 122
ಬೌಲಿಂಗ್‌ನಲ್ಲಿ ಪಡೆದ ವಿಕೆಟ್‌ಗಳು 229
ಬೌಲಿಂಗ್ ಸರಾಸರಿ 27.71
ಅತ್ಯುತ್ತಮ ಪ್ರದರ್ಶನ 56 ರನ್‌ಗಳಿಗೆ 6 ವಿಕೆಟ್ (6/56)
5 ವಿಕೆಟ್‌ಗಳ ಸಾಧನೆ  6 ಬಾರಿ
ಒಟ್ಟು ರನ್‌ಗಳು 750 (2 ಅರ್ಧಶತಕಗಳು)

ನಿವೃತ್ತಿಗೆ ಕಾರಣವೇನು?

2023ರ ಏಕದಿನ ವಿಶ್ವಕಪ್‌ನ ಭರ್ಜರಿ ಪ್ರದರ್ಶನದ ಬಳಿಕ ಮೊಹಮ್ಮದ್ ಶಮಿ ಅವರು ತೀವ್ರವಾದ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದರು. ಇದಕ್ಕಾಗಿ ಶಸ್ತ್ರಚಿಕಿತ್ಸೆ ಪಡೆದಿದ್ದ ಅವರು, ಸುದೀರ್ಘ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿಯಬೇಕಾಯಿತು.

ನಂತರ ಯಶಸ್ವಿಯಾಗಿ ಚೇತರಿಸಿಕೊಂಡ ಶಮಿ ಟೀಮ್ ಇಂಡಿಯಾ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಆ ಬಳಿಕ ಬೆಂಗಾಲ್ ತಂಡದ ಪರ ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿದ್ದರು. ಇದಾಗ್ಯೂ ಅವರನ್ನು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಪರಿಗಣಿಸಲಾಗಿಲ್ಲ. ಹೀಗಾಗಿಯೇ ಇದೀಗ ವೈಟ್ ಬಾಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

ಕೊನೆಯ ಪಂದ್ಯ ಮತ್ತು ಮುಂದಿನ ಹಾದಿ:

ಶಮಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಜೂನ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಶಮಿ ವೈಟ್-ಬಾಲ್ (ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಹಾಗೂ ಐಪಿಎಲ್‌ನಲ್ಲಿ ಸಕ್ರಿಯವಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಒಂದಷ್ಟು ವರ್ಷಗಳ ಕಾಲ ಶಮಿಯನ್ನು ಐಪಿಎಲ್​ನಲ್ಲಿ ಎದುರು ನೋಡಬಹುದು. ಇದಾಗ್ಯೂ ಅವರಿಗೆ ಭಾರತ ಏಕದಿನ ತಂಡದಲ್ಲಿ ಚಾನ್ಸ್ ಸಿಗುವುದು ಡೌಟ್ ಎಂದೇ ಹೇಳಬಹುದು.

ಇದನ್ನೂ ಓದಿ: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ಒಟ್ಟಾರೆಯಾಗಿ, ತಮ್ಮ ಮಾರಕ ಸ್ವಿಂಗ್ ಮತ್ತು ಸೀಮ್ ಬೌಲಿಂಗ್ ಮೂಲಕ ವಿಶ್ವದ ಘಟಾನುಘಟಿ ಬ್ಯಾಟರ್‌ಗಳನ್ನು ನಡುಗಿಸಿದ್ದ ಮೊಹಮ್ಮದ್ ಶಮಿ, ಭಾರತೀಯ ಟೆಸ್ಟ್ ಕ್ರಿಕೆಟ್‌ನ ಸುವರ್ಣ ಯುಗದ ಅಪ್ರತಿಮ ನಾಯಕ. ಈಡನ್ ಗಾರ್ಡನ್ಸ್‌ನಿಂದ ಆರಂಭವಾದ ಅವರ ಕೆಂಪು ಚೆಂಡಿನ ಯಾನ, ಭಾರತಕ್ಕೆ ವಿದೇಶಿ ಮಣ್ಣಿನಲ್ಲಿ ಐತಿಹಾಸಿಕ ಜಯಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗಾಯದ ಸವಾಲುಗಳನ್ನು ಮೆಟ್ಟಿ ನಿಂತು ಅವರು ತೋರಿದ ಹೋರಾಟದ ಗುಣ ಮುಂದಿನ ಪೀಳಿಗೆಗೆ ಸದಾ ಪ್ರೇರಣೆ. ಟೆಸ್ಟ್ ಕ್ರಿಕೆಟ್‌ಗೆ ಶಮಿ ಅವರ ವಿದಾಯ ಒಂದು ಯುಗದ ಅಂತ್ಯವಾದರೂ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಮುಂದಿನ ಇನ್ನಿಂಗ್ಸ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us