IPL 2025: ಸತತ 5ನೇ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಮುಂಬೈ

Mumbai Indians IPL Dominance: ಐಪಿಎಲ್ 2025 ರಲ್ಲಿ ಕಳಪೆ ಆರಂಭದ ನಂತರ, ಮುಂಬೈ ಇಂಡಿಯನ್ಸ್ ಐದು ಸತತ ಗೆಲುವುಗಳನ್ನು ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ರಯಾನ್ ರಿಕಲ್ಟನ್ ಅವರ ಅರ್ಧಶತಕಗಳು ಹಾಗೂ ಬುಮ್ರಾ, ಬೌಲ್ಟ್ ಮತ್ತು ವಿಲ್ ಜಾಕ್ಸ್ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಮುಂಬೈ 54 ರನ್‌ಗಳಿಂದ ಗೆದ್ದಿತು. ಇದರಿಂದಾಗಿ ಮುಂಬೈ ಐಪಿಎಲ್‌ನಲ್ಲಿ 150 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಯಿತು.

IPL 2025: ಸತತ 5ನೇ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಮುಂಬೈ
Mumbai

Updated on: Apr 27, 2025 | 8:07 PM

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಈ ಲೀಗ್​ನಲ್ಲಿ ಏಕೆ ಇಷ್ಟೊಂದು ಯಶಸ್ವಿ ತಂಡ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ಐಪಿಎಲ್ 2025 (IPL 2025) ರಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ಮುಂಬೈ ತಂಡವು ಇದೀಗ ಸತತ ಐದನೇ ಗೆಲುವು ದಾಖಲಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಏಕಪಕ್ಷೀಯ ರೀತಿಯಲ್ಲಿ 54 ರನ್‌ಗಳಿಂದ ಸೋಲಿಸಿತು. ಬ್ಯಾಟಿಂಗ್​ನಲ್ಲಿ ಸೂರ್ಯ ಕುಮಾರ್ ಯಾದವ್ (Suryakumar Yadav) ಮತ್ತು ರಯಾನ್ ರಿಕಲ್ಟನ್ ಅದ್ಭುತ ಅರ್ಧಶತಕ ಬಾರಿಸಿದರೆ, ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಬೌಲ್ಟ್ ಮತ್ತು ವಿಲ್ ಜಾಕ್ಸ್ ಲಕ್ನೋ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇದರೊಂದಿಗೆ, ಮುಂಬೈ ಐಪಿಎಲ್‌ನಲ್ಲಿ 150 ಪಂದ್ಯಗಳನ್ನು ಗೆದ್ದ ದಾಖಲಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಬರೆಯಿತು.

ರಿಕಲ್ಟನ್- ಸೂರ್ಯ ಅರ್ಧಶತಕ

ಏಪ್ರಿಲ್ 27, ಭಾನುವಾರ ನಡೆದ ಈ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್‌ನ ಪ್ರಾಬಲ್ಯ ಮೊದಲ ಓವರ್‌ನಿಂದಲೇ ಕಂಡುಬಂದಿತು. ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅದ್ಭುತ ಆರಂಭವನ್ನು ನೀಡಿದರು. ಆದರೆ ರೋಹಿತ್​ ಇನ್ನಿಂಗ್ಸ್​ಗೆ ಅಂತ್ಯ ಹಾಡುವಲ್ಲಿ ಮಯಾಂಕ್ ಯಾದವ್‌ ಯಶಸ್ವಿಯಾದರು. ಆ ಬಳಿಕ ಒಂದಾಂದ ರಯಾನ್ ರಿಕಲ್ಟನ್ (58) ಮತ್ತು ವಿಲ್ ಜ್ಯಾಕ್ಸ್ (29) ತಂಡಕ್ಕೆ ಭದ್ರ ಬುನಾದಿ ಹಾಕಿದರು.

ನಂತರ ಸೂರ್ಯಕುಮಾರ್ ಯಾದವ್ (54) ಲಕ್ನೋ ಬೌಲರ್‌ಗಳ ಮೇಲೆ ದಾಳಿ ನಡೆಸಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊನೆಯಲ್ಲಿ ನಮನ್ ಧೀರ್ (ಔಟಾಗದೆ 25) ಮತ್ತು ಕಾರ್ಬಿನ್ ಬಾಷ್ (20) ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡವನ್ನು 215 ರನ್​ಗಳಿಗೆ ಕೊಂಡೊಯ್ದರು. ಲಕ್ನೋ ಪರ ಮಯಾಂಕ್ 2 ವಿಕೆಟ್ ಪಡೆದರು.

IPL 2025: ಟಾಸ್ ಗೆದ್ದ ಆರ್​ಸಿಬಿ; ಫಿಲ್ ಸಾಲ್ಟ್​ಗೆ ಕೋಕ್; ಮತ್ತೊಬ್ಬ ಆಂಗ್ಲ ಬ್ಯಾಟರ್​ಗೆ ಅವಕಾಶ

ಮುಂಬೈ ಬೌಲರ್​ಗಳ ಅದ್ಭುತ ಪ್ರದರ್ಶನ

ಈ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಮೂರನೇ ಓವರ್‌ನಲ್ಲಿಯೇ ಆಘಾತ ಕಾದಿತ್ತು. ಜಸ್ಪ್ರೀತ್ ಬುಮ್ರಾ ಅವರು ಫಾರ್ಮ್‌ನಲ್ಲಿಲ್ಲದ ಆರಂಭಿಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರನ್ನು ತಮ್ಮ ಮೊದಲ ಬಲಿಪಶುವನ್ನಾಗಿ ಮಾಡಿದರು. ಅಲ್ಲಿಂದ ಮಿಚೆಲ್ ಮಾರ್ಷ್ (34) ಮತ್ತು ನಿಕೋಲಸ್ ಪೂರನ್ (27) ಲಕ್ನೋ ಪರ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಆದರೆ ಏಳನೇ ಓವರ್‌ನಲ್ಲಿ ಪವರ್‌ಪ್ಲೇ ಮುಗಿದ ಕೂಡಲೇ ಪರಿಸ್ಥಿತಿ ಬದಲಾಯಿತು. ವಿಲ್ ಜಾಕ್ಸ್ (2/18) ಪೂರನ್ ಮತ್ತು ನಾಯಕ ರಿಷಭ್ ಪಂತ್ (4) ಅವರನ್ನು ಮೂರು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು. ಇದು ಲಕ್ನೋವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ನಂತರ ಮಿಚೆಲ್ ಮಾರ್ಷ್ ಮತ್ತು ಆಯುಷ್ ಬಡೋನಿ (35) ಜವಾಬ್ದಾರಿ ವಹಿಸಿಕೊಂಡು ಆಕ್ರಮಣಕಾರಿ ಆಟ ಮುಂದುವರಿಸಿದರು. ಇವರಿಬ್ಬರೂ 10ನೇ ಓವರ್‌ನಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ ಟ್ರೆಂಟ್ ಬೌಲ್ಟ್ (3/20) ಸತತ ಎರಡು ಓವರ್‌ಗಳಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಲಕ್ನೋಗೆ ಆಘಾತ ನೀಡಿದರು. ನಂತರ 16 ನೇ ಓವರ್‌ನಲ್ಲಿ, ಜಸ್ಪ್ರೀತ್ ಬುಮ್ರಾ (4/22) ಡೇವಿಡ್ ಮಿಲ್ಲರ್ (24) ಮತ್ತು ಅಬ್ದುಲ್ ಸಮದ್ ಸೇರಿದಂತೆ 3 ವಿಕೆಟ್‌ಗಳನ್ನು ಕಬಳಿಸಿ ಪಂದ್ಯವನ್ನು ಸಂಪೂರ್ಣವಾಗಿ ಏಕಪಕ್ಷೀಯವಾಗಿಸಿದರು. 20ನೇ ಓವರ್‌ನ ಕೊನೆಯ ಎಸೆತದಲ್ಲಿ ಬೋಲ್ಟ್ ದಿಗ್ವೇಶ್ ರಥಿಯನ್ನು ಬೌಲ್ಡ್ ಮಾಡಿ ಇಡೀ ತಂಡವನ್ನು 161 ರನ್‌ಗಳಿಗೆ ಆಲೌಟ್ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Sun, 27 April 25