137 ಎಸೆತಗಳಲ್ಲಿ ದ್ವಿಶತಕ; ಇತಿಹಾಸ ಸೃಷ್ಟಿಸಿದ 18 ವರ್ಷದ ನೀಲಂ ಭಾರದ್ವಾಜ್

Neelam Bhradwaj Creates History: ಉತ್ತರಾಖಂಡದ 18 ವರ್ಷದ ನೀಲಂ ಭಾರದ್ವಾಜ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 202 ರನ್ ಗಳಿಸಿದ ಅವರು ಈ ಸಾಧನೆ ಮಾಡಿದ ಅತಿ ಕಿರಿಯ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಮೊದಲಿಗೆ ಈ ದಾಖಲೆ ಶ್ವೇತಾ ಸೆಹ್ರಾವತ್ ಹೆಸರಿನಲ್ಲಿದ್ದು, ನೀಲಂ ಅವರು ಆ ದಾಖಲೆಯನ್ನು ಮುರಿದಿದ್ದಾರೆ.

137 ಎಸೆತಗಳಲ್ಲಿ ದ್ವಿಶತಕ; ಇತಿಹಾಸ ಸೃಷ್ಟಿಸಿದ 18 ವರ್ಷದ ನೀಲಂ ಭಾರದ್ವಾಜ್
ನೀಲಂ ಭಾರದ್ವಾಜ್

Updated on: Dec 10, 2024 | 9:37 PM

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್‌ನಲ್ಲಿ ಅನೇಕ ಪಂದ್ಯಾವಳಿಗಳು ನಡೆಯುತ್ತಿವೆ. ಇದರಲ್ಲಿ ಹಿರಿಯ ಮಹಿಳಾ ತಂಡಗಳ ಏಕದಿನ ಟ್ರೋಫಿ ಕೂಡ ಸೇರಿದೆ. ಈ ಟೂರ್ನಿಯಲ್ಲಿ ಉತ್ತರಾಖಂಡ ತಂಡವನ್ನು ಪ್ರತಿನಿಧಿಸುತ್ತಿರುವ 18ರ ಹರೆಯದ ನೀಲಂ ಭಾರದ್ವಾಜ್ ಅತಿ ಕಿರಿಯ ವಯಸ್ಸಿನಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇಂದು ನಡೆದ ಉತ್ತರಾಖಂಡ ಮತ್ತು ನಾಗಾಲ್ಯಾಂಡ್ ತಂಡಗಳ ನಡುವಿನ ಪಂದ್ಯದಲ್ಲಿ ನೀಲಂ ಭಾರದ್ವಾಜ್ ದ್ವಿಶತಕದ ಇನ್ನಿಂಗ್ಸ್ ಆಡುವ ಮೂಲಕ ಈ ದಾಖಲೆ ಸೃಷ್ಟಿಸಿದ್ದಾರೆ. ಈ ಮೊದಲು ಈ ದಾಖಲೆ ಶ್ವೇತಾ ಸೆಹ್ರಾವತ್ ಹೆಸರಿನಲ್ಲಿತ್ತು. ಈ ವರ್ಷದ ಆರಂಭದಲ್ಲಿ ಶ್ವೇತಾ ಸೆಹ್ರಾವತ್ ಕೂಡ ದ್ವಿಶತಕ ಸಿಡಿಸಿದ್ದರು.

ದ್ವಿಶತಕ ಸಿಡಿಸಿದ ನೀಲಂ ಭಾರದ್ವಾಜ್

ಉತ್ತರಾಖಂಡ ತಂಡವನ್ನು ಪ್ರತಿನಿಧಿಸುತ್ತಿರುವ ನೀಲಂ ಭಾರದ್ವಾಜ್ ಭಾರತೀಯ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 137 ಎಸೆತಗಳಲ್ಲಿ 27 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 202 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ನೀಲಂ 147.45 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ನೀಲಂ ಭಾರದ್ವಾಜ್ ಅವರಿಗೂ ಮೊದಲು, ದೆಹಲಿ ಪರ ಆಡುತ್ತಿರುವ ಶ್ವೇತಾ ಸೆಹ್ರಾವತ್ ಜನವರಿ 2024 ರಲ್ಲಿ ನಾಗಾಲ್ಯಾಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ಆಗ ಶ್ವೇತಾ ಸೆಹ್ರಾವತ್ 150 ಎಸೆತಗಳಲ್ಲಿ 242 ರನ್‌ಗಳ ಇನಿಂಗ್ಸ್‌ ಆಡಿದ್ದರು. ಈ ಐತಿಹಾಸಿಕ ಇನ್ನಿಂಗ್ಸ್‌ನಲ್ಲಿ ಅವರು 31 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಶ್ವೇತಾ ಸೆಹ್ರಾವತ್ ತಮ್ಮ 19ನೇ ವಯಸ್ಸಿನಲ್ಲಿ ಈ ದ್ವಿಶತಕದ ಇನ್ನಿಂಗ್ಸ್ ಆಡಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ನೀಲಂ ಭಾರದ್ವಾಜ್ ಈ ದಾಖಲೆಯನ್ನು ಮುರಿದಿದ್ದಾರೆ.

ಉತ್ತರಾಖಂಡಕ್ಕೆ ಭರ್ಜರಿ ಜಯ

ಈ ಪಂದ್ಯದಲ್ಲಿ ಮೊದಲು ಆಡಿದ ಉತ್ತರಾಖಂಡ್ ತಂಡ ನೀಲಂ ಭಾರದ್ವಾಜ್ ಅವರ ಇನ್ನಿಂಗ್ಸ್ ಆಧಾರದ ಮೇಲೆ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 371 ರನ್ ಗಳಿಸಿತು. ನೀಲಮ್ ಹೊರತಾಗಿ, ನಂದಿನಿ ಕಶ್ಯಪ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು, ಅವರು 79 ಎಸೆತಗಳಲ್ಲಿ 81 ರನ್ ಗಳಿಸಿದರು. ಅದೇ ಸಮಯದಲ್ಲಿ ಕಾಂಚನ್ ಪರಿಹಾರ್ ಕೂಡ 52 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಆದರೆ ಈ ದೊಡ್ಡ ಗುರಿಗೆ ಉತ್ತರವಾಗಿ ನಾಗಾಲ್ಯಾಂಡ್ ತಂಡ 47 ಓವರ್‌ಗಳಲ್ಲಿ 112 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಉತ್ತರಾಖಂಡ 259 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ