ಮಿಚೆಲ್ ಮ್ಯಾಜಿಕ್: ನ್ಯೂಝಿಲೆಂಡ್ ತಂಡಕ್ಕೆ ಭರ್ಜರಿ ಜಯ
New Zealand vs Netherlands: 323 ರನ್ಗಳ ಕಠಿಣ ಗುರಿ ಪಡೆದ ನೆದರ್ಲೆಂಡ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 67 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಹಾದಿ ಹಿಡಿದಿದ್ದರು. ಇದಾಗ್ಯೂ ಕಾಲಿನ್ ಅಕರ್ಮನ್ 69 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು.
ಏಕದಿನ ವಿಶ್ವಕಪ್ನ 6ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಆರಂಭಿಕ ಆಟಗಾರ ವಿಲ್ ಯಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
80 ಎಸೆತಗಳನ್ನು ಎದುರಿಸಿದ ವಿಲ್ ಯಂಗ್ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 70 ರನ್ ಬಾರಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 51 ಎಸೆತಗಳಲ್ಲಿ 51 ರನ್ ಬಾರಿಸಿದರೆ. ನಾಯಕ ಟಾಮ್ ಲಾಥಮ್ 46 ಎಸೆತಗಳಲ್ಲಿ 53 ರನ್ ಚಚ್ಚಿದರು. ಪರಿಣಾಮ 50 ಓವರ್ಗಳಲ್ಲಿ ನ್ಯೂಝಿಲೆಂಡ್ ತಂಡವು 7 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿತು.
323 ರನ್ಗಳ ಕಠಿಣ ಗುರಿ ಪಡೆದ ನೆದರ್ಲೆಂಡ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 67 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಹಾದಿ ಹಿಡಿದಿದ್ದರು. ಇದಾಗ್ಯೂ ಕಾಲಿನ್ ಅಕರ್ಮನ್ 69 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಮೋಡಿ ಮುಂದೆ ನೆದರ್ಲೆಂಡ್ಸ್ನ ಉಳಿದ ಬ್ಯಾಟರ್ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ನೆದರ್ಲೆಂಡ್ಸ್ ತಂಡವು 46.3 ಓವರ್ಗಳಲ್ಲಿ 223 ರನ್ಗಳಿಗೆ ಆಲೌಟ್ ಆಗುವ ಮೂಲಕ 99 ರನ್ಗಳಿಂದ ಸೋಲೊಪ್ಪಿಕೊಂಡಿತು. ನ್ಯೂಝಿಲೆಂಡ್ ಪರ 10 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 59 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ಇದನ್ನೂ ಓದಿ: VIDEO: ಮೊದಲ ಪಂದ್ಯದಲ್ಲೇ ‘ಚಿನ್ನದ ಪದಕ’ ಗೆದ್ದ ವಿರಾಟ್ ಕೊಹ್ಲಿ
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
Published On - 10:07 pm, Mon, 9 October 23