AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಂಚಿದ ಕನ್ನಡತಿ: ಟೀಮ್ ಇಂಡಿಯಾಗೆ ಪ್ರಯಾಸದ ಗೆಲುವು

ಭಾರತ ಮಹಿಳಾ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಮೃತಿ ಮಂಧಾನ ಅವರು ಶುಭಾರಂಭ ಮಾಡಿದ್ದಾರೆ. ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಝಿಂಬಾಬ್ವೆ ಮಹಿಳಾ ತಂಡದ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ವಿಜಯಯಾತ್ರೆ ಆರಂಭಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಮಿಂಚಿದ ಕನ್ನಡತಿ: ಟೀಮ್ ಇಂಡಿಯಾಗೆ ಪ್ರಯಾಸದ ಗೆಲುವು
Niki - Team IndiaImage Credit source: BCCI
ಝಾಹಿರ್ ಯೂಸುಫ್
|

Updated on: Oct 17, 2026 | 10:29 AM

Share

ಝಿಂಬಾಬ್ವೆ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಜಯ ಸಾಧಿಸಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ್ತಿ ಕೆಲ್ಲಿಸ್ ನ್ಡ್ಲೋವು (42 ರನ್) ಮತ್ತು ಶಾರ್ನೆ ಮೇಯರ್ಸ್ (ಅಜೇಯ 43 ರನ್) ಝಿಂಬಾಬ್ವೆ ಪರ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಭಾರತದ ಪರ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ನಂದಿನಿ ಶರ್ಮಾ ಕೇವಲ 11 ರನ್ ನೀಡಿ 2 ಪ್ರಮುಖ ವಿಕೆಟ್ ಉರುಳಿಸುವ ಮೂಲಕ ಝಿಂಬಾಬ್ವೆ ದೊಡ್ಡ ಮೊತ್ತ ಗಳಿಸದಂತೆ ಬ್ರೇಕ್ ಹಾಕಿದರು.

ಟೀಮ್ ಇಂಡಿಯಾಗೆ ಆರಂಭಿಕ ಆಘಾತ:

115 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಝಿಂಬಾಬ್ವೆಯ ನ್ಯಾಶಾ ಗ್ವಾಂಜುರಾ (18 ರನ್‌ಗೆ 3 ವಿಕೆಟ್) ಮಾರಕ ಬೌಲಿಂಗ್‌ಗೆ ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಭಾರತದ ಅಗ್ರ ಕ್ರಮಾಂಕದ 4 ವಿಕೆಟ್‌ಗಳು ಕೇವಲ 19 ರನ್‌ಗಳಿಗೆ ಪತನಗೊಂಡವು. ಈ ಹಂತದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ್ತಿ ದೀಪ್ತಿ ಶರ್ಮಾ (49 ರನ್, 41 ಎಸೆತ) ತಂಡಕ್ಕೆ ಆಸರೆಯಾಗಿ ನಿಂತರು.

ಮಿಂಚಿದ ಕನ್ನಡತಿ:

ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಕನ್ನಡತಿ ನಿಕಿ ಪ್ರಸಾದ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್​​​ನೊಮದಿಗೆ 31 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದ ನಿಕಿ, ದೀಪ್ತಿ ಶರ್ಮಾ ಜೊತೆಗೂಡಿ 5ನೇ ವಿಕೆಟ್‌ಗೆ 82 ರನ್‌ಗಳ ಅಮೋಘ ಜೊತೆಯಾಟವಾಡಿದರು. ಈ ಭರ್ಜರಿ ಜೊತೆಯಾಟದ ಪರಿಣಾಮ ಭಾರತ ತಂಡವು 15.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿ ವಿಜಯದ ಪತಾಕೆ ಹಾರಿಸಿತು.

ಭಾರತ ಪ್ಲೇಯಿಂಗ್ 11: ಶಫಾಲಿ ವರ್ಮಾ , ಸ್ಮೃತಿ ಮಂಧಾನ (ನಾಯಕಿ) , ಅನುಷ್ಕಾ ಶರ್ಮಾ , ಹರ್ಮನ್ಪ್ರೀತ್ ಕೌರ್ , ನಿಕಿ ಪ್ರಸಾದ್ , ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ , ಶ್ರೀ ಚರಣಿ , ಅರುಂಧತಿ ರೆಡ್ಡಿ , ನಂದನಿ ಶರ್ಮಾ , ಕ್ರಾಂತಿ ಗೌಡ್.

ಇದನ್ನೂ ಓದಿ: ಟೀಮ್ ಇಂಡಿಯಾದ 37 ಆಟಗಾರರಲ್ಲಿ ಮೂವರು ಕನ್ನಡಿಗರು

ಝಿಂಬಾಬ್ವೆ ಪ್ಲೇಯಿಂಗ್ 11: ಕೆಲಿಸ್ ನದ್ಲೋವು , ಬಿಲವ್ಡ್​ ಬಿಝ , ಚಿಪೋ ಮುಗೇರಿ-ಟಿರಿಪಾನೊ , ಶಾರ್ನೆ ಮೇಯರ್ಸ್ , ಮಿಚೆಲ್ ಮಾವುಂಗಾ , ನ್ಯಾಶಾ ಗ್ವಾಂಜುರಾ , ಫ್ರಾನ್ಸಿಸ್ಕಾ ಚಿಪಾರೆ , ಮಾಡೆಸ್ಟರ್ ಮುಪಚಿಕ್ವಾ (ವಿಕೆಟ್ ಕೀಪರ್) , ಜೋಸೆಫೀನ್ ಎನ್ಕೊಮೊ (ನಾಯಕಿ) , ಒಲಿಂಡರ್ ಚಾರೆ , ಟೆಂಡೈ ಮಕುಶಾ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More