India vs Zimbabwe: ಜಿಂಬಾಬ್ವೆ ವಿರುದ್ಧ ಸೋತರೂ ನೋ ಟೆನ್ಶನ್: ಸೆಮಿ ಫೈನಲ್ಗೆ ಭಾರತ ಎಂಟ್ರಿ
South Africa vs Netherlands: ಸೆಮಿ ಫೈನಲ್ಗೇರುವ ನೆಚ್ಚಿನ ತಂಡವಾಗಿದ್ದ ದಕ್ಷಿಣ ಆಫ್ರಿಕಾ ಇದೀಗ ನೆದರ್ಲೆಂಡ್ಸ್ ವಿರುದ್ಧ ಸೋತ ಪರಿಣಾಮ ಸೆಮೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಅತ್ತ ಭಾರತ ತಂಡ ಜಿಂಬಾಬ್ವೆ ವಿರುದ್ಧ ಆಡುವ ಮುನ್ನವೇ ನೇರವಾಗಿ ಸೆಮಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಊಹಿಸಲಾಗದ ಅನೇಕ ಘಟನೆಗಳು ನಡೆದಿವೆ. ದುರ್ಬಲ ಎಂದುಕೊಂಡಿದ್ದ ತಂಡಗಳೆಲ್ಲ ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡದ ಎದುರು ಗೆಲುವು ಸಾಧಿಸಿದ ಉದಾಹರಣೆ ಅನೇಕ ಬಾರಿ ಕಾಣಿಸಿಕೊಂಡಿತು. ಇದಕ್ಕೆ ಇಂದು ಸೂಪರ್ 12 ಹಂತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ (South Africa vs Netherlands) ನಡುವಣ ಪಂದ್ಯ ಕೂಡ ಸಾಕ್ಷಿಯಾಯಿತು. ಇಡೀ ಟೂರ್ನಿಯಲ್ಲಿ ಒಂದು ಬಾರಿಕೂಡ ಸೋಲು ಕಾಣದೆ ಸೆಮಿ ಫೈನಲ್ಗೇರುವ ನೆಚ್ಚಿನ ತಂಡವಾಗಿದ್ದ ಆಫ್ರಿಕಾ ಇದೀಗ ನೆದರ್ಲೆಂಡ್ಸ್ ವಿರುದ್ಧ ಸೋತ ಪರಿಣಾಮ ಸೆಮೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇದು ಒಂದು ಕಡೆಯಾದರೆ ಅತ್ತ ಭಾರತ ತಂಡ ಜಿಂಬಾಬ್ವೆ (India vs Zimbabwe) ವಿರುದ್ಧ ಆಡುವ ಮುನ್ನವೇ ನೇರವಾಗಿ ಸೆಮಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಆಫ್ರಿಕಾ-ನೆದರ್ಲೆಂಡ್ಸ್ ನಡುವಣ ಅಚ್ಚರಿಯ ಫಲಿತಾಂಶದಿಂದ ಟೀಮ್ ಇಂಡಿಯಾ ಸೆಮೀಸ್ಗೆ ಕ್ವಾಲಿಫೈಯರ್ ಆಗಿದ್ದು, ಇದೀಗ ಜಿಂಬಾಬ್ವೆ ವಿರುದ್ಧ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ.
ಭಾರತ ಈವರೆಗೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತು 6 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. +0.730 ರನ್ರೇಟ್ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಆಡಿದ ಐದು ಪಂದ್ಯಗಳ ಪೈಕಿ ಒಂದು ಮಳೆಯಿಂದ ರದ್ದಾದರೆ ತಲಾ ಎರಡು-ಸೋಲು ಗೆಲುವಿನಿಂದ 5 ಅಂಕ ಪಡೆದು +0.864 ರನ್ರೇಟ್ನಿಂದ ದ್ವಿತೀಯ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಗೆಲುವು ಪಡೆದು ರನ್ರೇಟ್ ಆಧಾರದ ಮೇಲೆ ಪಾಕ್ ಮೂರನೇ ಸ್ಥಾನದಲ್ಲಿದ್ದರೆ ಬಾಂಗ್ಲಾ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಮೂರು ತಂಡಗಳ ಸೆಮೀಸ್ ಭವಿಷ್ಯ ನಿರ್ಧರಿಸಲಿದೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಪಾಕ್ ಗೆದ್ದರೆ 6 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿಯಲಿದೆ, ಸೆಮಿ ಫೈನಲ್ಗೆ ಕ್ವಾಲಿಫೈಯರ್ ಆಗಲಿದೆ. ಬಾಂಗ್ಲಾ ಗೆದ್ದರೂ 6 ಅಂಕ ಪಡೆಯಲಿದೆ. ಎಲ್ಲಾದರು ಈ ಪಂದ್ಯ ರದ್ದಾದರಷ್ಟೆ ಆಫ್ರಿಕಾಕ್ಕೆ ಸೆಮೀಸ್ ಹಾದಿ ರನ್ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಉತ್ತಮ ಆರಂಭ ಪಡೆದುಕೊಂಡಿದೆ.
ಆಫ್ರಿಕಾ-ನೆದರ್ಲೆಂಡ್ಸ್ ಪಂದ್ಯ:
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ನೆದರ್ಲೆಂಡ್ಸ್ ಉತ್ತ, ಆರಂಭ ಪಡೆದುಕೊಂಡಿತು. ಮೈಬರ್ಗ್ 30 ಎಸೆತಗಳಲ್ಲಿ 7 ಫೋರ್ ಬಾರಿಸಿ 37 ರನ್, ಮ್ಯಾಕ್ಸ್ ಡೌಡ್ 31 ಎಸೆತಗಳಲ್ಲಿ 29 ರನ್ ಕಲೆಹಾಕಿದರು. ಕೂಪರ್ 19 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 35 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಕಾಲಿನ್ ಅಕ್ವರ್ಮೆನ್ ಕೇವಲ 26 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 41 ರನ್ ಗಳಿಸಿದರು. ನೆದರ್ಲೆಂಡ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಕ್ವಿಂಟನ್ ಡಿಕಾಕ್ (13) ವಿಕೆಟ್ ಕಳೆದುಕೊಂಡಿತು. ನಾಯಕ ತೆಂಬಾ ಬವುಮಾ 20 ಎಸೆತಗಳಲ್ಲಿ 20 ರನ್ ಗಳಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರಿಲೀ ರೊಸ್ಸೋ 19 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೊನೆಯ 6 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 26 ರನ್ಗಳ ಅವಶ್ಯಕತೆಯಿತ್ತಾದರೂ ದು ಸಾಧ್ಯವಾಗಲಿಲ್ಲ. ಹರಿಣಗಳು 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 145 ರನ್ಗಳನ್ನಷ್ಟೆ ಕಲೆಹಾಕಿ ಸೋಲುಂಡಿತು.
Published On - 10:08 am, Sun, 6 November 22




