
ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಟಿ20 ಸರಣಿ ಸೋತಿದೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದ ಕಿವೀಸ್ ಪಡೆ, ಅದಕ್ಕೂ ಮೊದಲು ಭಾರತದಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಸೋಲು ಕಂಡಿತ್ತು. ಇದೀಗ ತವರಿನಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲೂ ಸೋಲು ಎದುರಿಸಿದೆ. ಈ ಸರಣಿಯಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ನ್ಯೂಜಿಲೆಂಡ್ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೂ, ಭಾರತ ತಂಡ 3-2 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಸರಣಿಯಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಜೊತೆಗೆ, ನ್ಯೂಜಿಲೆಂಡ್ ತಂಡದ ಕಳಪೆ ಫೀಲ್ಡಿಂಗ್ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಬರೋಬ್ಬರಿ 14 ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 22ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿ ಹ್ಯಾಮಿಲ್ಟನ್‌ನಲ್ಲಿ ಅಂತ್ಯಗೊಂಡಿತು. ಈ ಸರಣಿಯ ಬಹುತೇಕ ಪಂದ್ಯಗಳಲ್ಲಿ ಎರಡೂ ತಂಡಗಳ ಫೀಲ್ಡಿಂಗ್‌ನಲ್ಲಿ ಸಾಕಷ್ಟು ತಪ್ಪುಗಳು ಕಂಡುಬಂದವು. ಹಲವು ಸುಲಭ ಕ್ಯಾಚ್‌ಗಳು ಕೈತಪ್ಪಿದರೆ, ಕೆಲವು ರನೌಟ್ ಅವಕಾಶಗಳನ್ನೂ ಕೈಚೆಲ್ಲಲಾಯಿತು. ಇದರ ಜೊತೆಗೆ ಮಿಸ್‌ಫೀಲ್ಡಿಂಗ್‌ಗಳು ಕೂಡ ತಂಡಗಳಿಗೆ ದುಬಾರಿಯಾದವು. ಆದರೆ ನ್ಯೂಜಿಲೆಂಡ್ ತಂಡದ ಕ್ಯಾಚಿಂಗ್ ಪ್ರದರ್ಶನ ಮಾತ್ರ ಎಲ್ಲರ ಅಚ್ಚರಿಗೆ ಕಾರಣವಾಯಿತು.
ಹ್ಯಾಮಿಲ್ಟನ್‌ನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ನ್ಯೂಜಿಲೆಂಡ್ ಆಟಗಾರರು ಮೂರು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರಿಂದ ಭಾರತ ತಂಡ 191 ರನ್‌ಗಳ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು. ವಾಸ್ತವವಾಗಿ, ಈ ಸರಣಿಯ ಮೊದಲ ಪಂದ್ಯದಿಂದಲೇ ಕಿವೀಸ್ ಆಟಗಾರರ ಕ್ಯಾಚಿಂಗ್ ವೈಫಲ್ಯ ಆರಂಭವಾಗಿತ್ತು. ಐದು ಪಂದ್ಯಗಳಲ್ಲೂ ಇದೇ ತಪ್ಪು ಪುನರಾವರ್ತನೆಯಾಗಿದ್ದು, ಒಟ್ಟಾರೆಯಾಗಿ ನ್ಯೂಜಿಲೆಂಡ್ ತಂಡ ಬರೋಬ್ಬರಿ 14 ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಈ ಮೂಲಕ ಟಿ20 ಸರಣಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತನ್ನ ಹಿಂದಿನ ದಾಖಲೆಯನ್ನೇ ಸಮನಾಗಿಸಿದೆ.
ಕ್ರಿಕೆಟ್‌ನಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದು ಎಷ್ಟು ದುಬಾರಿ ಎಂಬುದಕ್ಕೆ ಈ ಸರಣಿಯೇ ಉತ್ತಮ ಉದಾಹರಣೆ. ನ್ಯೂಜಿಲೆಂಡ್ ಆಟಗಾರರು ಕ್ಯಾಚ್ ಕೈಚೆಲ್ಲಿದ ಪ್ರತಿಯೊಂದು ಸಂದರ್ಭದಲ್ಲೂ ಭಾರತೀಯ ಬ್ಯಾಟರ್‌ಗಳು ಆ ಅವಕಾಶವನ್ನು ಬಳಸಿಕೊಂಡು ದೊಡ್ಡ ಮೊತ್ತ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ಶತಕ, ನಮನ್ ಧೀರ್ ಅವರ ಪಂದ್ಯಕ್ಕೆ ತಿರುವು ನೀಡಿದ ಬ್ಯಾಟಿಂಗ್ ಹಾಗೂ ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ ಬಾರಿಸಿದ ಅರ್ಧಶತಕದ ಹಿಂದೆ ಕಿವೀಸ್ ಆಟಗಾರರು ಕೈಬಿಟ್ಟ ಕ್ಯಾಚ್‌ಗಳ ಪಾತ್ರವೂ ಇತ್ತು. ಈ ತಪ್ಪುಗಳು ಅಂತಿಮವಾಗಿ ನ್ಯೂಜಿಲೆಂಡ್ ತಂಡಕ್ಕೇ ಮುಳುವಾದವು.
‘ನನ್ನ ಡಿಕ್ಷನರಿಯಲ್ಲಿ ಭಯ ಎಂಬ ಪದವೇ ಇಲ್ಲ’: ಟೀಕೆಗಳಿಗೆ ಗಂಭೀರ್ ಖಡಕ್ ಉತ್ತರ
ಇನ್ನು ನ್ಯೂಜಿಲೆಂಡ್‌ಗೆ ಹೋಲಿಸಿದರೆ ಭಾರತ ತಂಡದ ಫೀಲ್ಡಿಂಗ್ ಸ್ವಲ್ಪ ಉತ್ತಮವಾಗಿತ್ತು. ಟೀಂ ಇಂಡಿಯಾ ಕೂಡ ಸರಣಿಯಲ್ಲಿ ಸುಮಾರು 6ರಿಂದ 7 ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಕೆಲವು ಸಂದರ್ಭಗಳಲ್ಲಿ ಅದಕ್ಕೆ ಬೆಲೆ ತೆರಬೇಕಾಯಿತು. ಅದರಲ್ಲೂ ಅಂತಿಮ ಪಂದ್ಯದಲ್ಲಿ ಟಿಮ್ ಸೀಫರ್ಟ್ ಕೇವಲ 14 ರನ್ ಗಳಿಸಿದ್ದಾಗ ಭಾರತೀಯ ಆಟಗಾರರು ಕ್ಯಾಚ್ ಕೈಬಿಟ್ಟಿದ್ದರು. ಈ ಜೀವದಾನದ ಲಾಭ ಪಡೆದ ಸೀಫರ್ಟ್ 93 ರನ್‌ಗಳ ಬೃಹತ್ ಇನ್ನಿಂಗ್ಸ್ ಆಡಿದರು. ಒಟ್ಟಿನಲ್ಲಿ, ಈ ಸರಣಿಯಲ್ಲಿ ಎರಡೂ ತಂಡಗಳ ಫೀಲ್ಡಿಂಗ್‌ನಲ್ಲಿ ತಪ್ಪುಗಳು ಕಂಡುಬಂದರೂ, ನ್ಯೂಜಿಲೆಂಡ್‌ನ ಕ್ಯಾಚಿಂಗ್ ವೈಫಲ್ಯ ಮಾತ್ರ ತಂಡದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು.