ಬುಮ್ರಾ ಬಲೆಗೆ ಬೀಳಲಿಲ್ಲ, ಕ್ಯಾಚ್ ಕೈಬಿಟ್ಟ ರಾಹುಲ್; ಲ್ಯಾಥಮ್‌ಗೆ ಕೈಹಿಡಿದ ಅದೃಷ್ಟ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ. ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅದೃಷ್ಟದ ಬಲದಿಂದ ಎಲ್‌ಬಿಡಬ್ಲ್ಯೂ ಮತ್ತು ಕ್ಯಾಚ್ ಅಪಾಯದಿಂದ ಪಾರಾಗಿ ಭರ್ಜರಿ ಅರ್ಧಶತಕ ಸಿಡಿಸಿದರು (59 ರನ್). ಭಾರತೀಯ ಬೌಲರ್‌ಗಳಿಗೆ ಆರಂಭಿಕ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಇದರಿಂದಾಗಿ ನ್ಯೂಜಿಲೆಂಡ್ ಮೊದಲ ದಿನದ ಮೊದಲ ಸೆಷನ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಅಂತಿಮವಾಗಿ ಆಕಾಶ್ ದೀಪ್ ಅವರು ಲ್ಯಾಥಮ್ ಅವರನ್ನು ಔಟ್ ಮಾಡಿದರು.

ಬುಮ್ರಾ ಬಲೆಗೆ ಬೀಳಲಿಲ್ಲ, ಕ್ಯಾಚ್ ಕೈಬಿಟ್ಟ ರಾಹುಲ್; ಲ್ಯಾಥಮ್‌ಗೆ ಕೈಹಿಡಿದ ಅದೃಷ್ಟ
ಭಾರತ vs ನ್ಯೂಜಿಲೆಂಡ್

Updated on: Nov 27, 2026 | 12:47 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಆರಂಭವಾಗಿದೆ. ಪಂದ್ಯದ ಮೊದಲ ದಿನದ ಮೊದಲ ಸೆಷನ್​ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದು ಆತಿಥೇಯ ನ್ಯೂಜಿಲೆಂಡ್ ತಂಡ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ವೆಲ್ಲಿಂಗ್ಟನ್ ಟೆಸ್ಟ್‌ನಂತೆ ಈ ಬಾರಿ ಆರಂಭದಲ್ಲೇ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರಿಗೆ ಸಿಕ್ಕ ಅದೃಷ್ಟ. ಮೊದಲ ಅವಧಿಯಲ್ಲಿ ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾದ ಅವರು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಭರ್ಜರಿ ಅರ್ಧಶತಕ ಸಿಡಿಸಿದರು. ಹಿಂದಿನ ಪಂದ್ಯದ ವೈಫಲ್ಯವನ್ನು ಮರೆತು ಬ್ಯಾಟಿಂಗ್‌ನಲ್ಲಿ ಮತ್ತೆ ಲಯ ಕಂಡುಕೊಂಡರು.

ನವೆಂಬರ್ 27ರಂದು ಹ್ಯಾಗ್ಲಿ ಓವಲ್‌ನಲ್ಲಿ ಆರಂಭವಾದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ನಾಯಕ ಟಾಮ್ ಲ್ಯಾಥಮ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದರು. ಈ ಬಾರಿ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಬೇಕಿತ್ತು. ಹಿಂದಿನ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ಗಳ ಮೊದಲ ಓವರ್‌ನಲ್ಲೇ ಬುಮ್ರಾ ಅವರಿಗೆ ಲ್ಯಾಥಮ್ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಆ ವೈಫಲ್ಯ ಮರುಕಳಿಸದಂತೆ ನೋಡಿಕೊಳ್ಳುವುದು ಅವರ ಮುಂದಿದ್ದ ಸವಾಲಾಗಿತ್ತು.

Loading...

ಎರಡು ಬಾರಿ ಪಾರಾದ ಲ್ಯಾಥಮ್

ಹಿಂದಿನ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಖಾತೆ ತೆರೆಯುವ ಮೊದಲೇ ಔಟಾಗಿದ್ದ ಟಾಮ್ ಲ್ಯಾಥಮ್, ಈ ಬಾರಿ ಎರಡನೇ ಎಸೆತದಲ್ಲೇ ಎರಡು ರನ್ ಗಳಿಸುವ ಮೂಲಕ ಸತತ ಮೂರನೇ ಬಾರಿ ಡಕ್ ಔಟ್ ಆಗುವ ಭೀತಿಯಿಂದ ಪಾರಾದರು. ಆದರೆ ಬುಮ್ರಾ ಬೌಲಿಂಗ್‌ನಿಂದ ಎದುರಾಗುತ್ತಿದ್ದ ಅಪಾಯ ಮಾತ್ರ ತಪ್ಪಿರಲಿಲ್ಲ. ಐದನೇ ಓವರ್‌ನಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ಬುಮ್ರಾ ಎಸೆದ ಎಸೆತ ಲ್ಯಾಥಮ್ ಅವರ ಪ್ಯಾಡ್‌ಗೆ ಬಡಿಯುತ್ತಿದ್ದಂತೆ ಅಂಪೈರ್ ಎಲ್‌ಬಿಡಬ್ಲ್ಯೂ ತೀರ್ಪು ನೀಡಿದರು. ತಕ್ಷಣವೇ ಲ್ಯಾಥಮ್ ಡಿಆರ್‌ಎಸ್ ಮೊರೆ ಹೋದರು.

ರಿವ್ಯೂನಲ್ಲಿ ಚೆಂಡು ಲೆಗ್ ಸ್ಟಂಪ್‌ನಿಂದ ಕೆಲವೇ ಮಿಲಿಮೀಟರ್‌ಗಳಷ್ಟು ಹೊರಗೆ ಪಿಚ್ ಆಗಿರುವುದು ಕಂಡುಬಂತು. ಹೀಗಾಗಿ ಅಂಪೈರ್ ತೀರ್ಪು ಬದಲಾಯಿತು. ಈ ಮೂಲಕ ಲ್ಯಾಥಮ್ ಮೊದಲ ಬಾರಿಗೆ ಔಟಾಗುವ ಅಪಾಯದಿಂದ ಪಾರಾದರು. ಇದಾದ ಬಳಿಕ ಎಚ್ಚರಿಕೆಯಿಂದ ಬ್ಯಾಟಿಂಗ್ ಮುಂದುವರಿಸಿದ ಲ್ಯಾಥಮ್ ಮತ್ತೊಂದು ಅವಕಾಶವನ್ನು ಎದುರು ನೋಡುತ್ತಿದ್ದರು. ಆದರೆ 15ನೇ ಓವರ್‌ನಲ್ಲಿ ಆಕಾಶ್ ದೀಪ್ ಎಸೆದ ಮೊದಲ ಎಸೆತವನ್ನು ಅವರು ಬ್ಯಾಟ್‌ನ ಅಂಚಿಗೆ ತಾಗಿಸಿದರು. ಚೆಂಡು ಮೂರನೇ ಸ್ಲಿಪ್‌ನತ್ತ ಸಾಗಿತು. ಆದರೆ ಅಲ್ಲಿ ಯಾವುದೇ ಫೀಲ್ಡರ್ ಇರಲಿಲ್ಲ. ಎರಡನೇ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರಾದರೂ ಚೆಂಡು ಅವರ ಕೈಗೆ ಸಿಗಲಿಲ್ಲ. ಆಗ ಲ್ಯಾಥಮ್ ಕೇವಲ 29 ರನ್ ಗಳಿಸಿದ್ದರು. ಈ ಕ್ಯಾಚ್ ಕೈಚೆಲ್ಲಿದ ಪರಿಣಾಮ ಭಾರತಕ್ಕೆ ಆರಂಭಿಕ ಯಶಸ್ಸು ಪಡೆಯುವ ಮತ್ತೊಂದು ಅವಕಾಶ ಕೈತಪ್ಪಿತು.

ಭಾರತದ ವಿರುದ್ಧ ಸತತ ಮೂರನೇ ಅರ್ಧಶತಕ

ಈ ಎರಡು ಜೀವದಾನಗಳ ಸಂಪೂರ್ಣ ಲಾಭ ಪಡೆದ ಟಾಮ್ ಲ್ಯಾಥಮ್, ಡೆವೊನ್ ಕಾನ್ವೆ ಜೊತೆಗೂಡಿ ಮೊದಲ ವಿಕೆಟ್‌ಗೆ 77 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಬಳಿಕ ಎರಡನೇ ಸೆಷನ್​ನಲ್ಲಿ ತಮ್ಮ ಅರ್ಧಶತಕವನ್ನೂ ಪೂರ್ಣಗೊಳಿಸಿದರು. ಭಾರತದ ವಿರುದ್ಧ ಲ್ಯಾಥಮ್ ದಾಖಲಿಸಿದ ಒಂಬತ್ತನೇ ಅರ್ಧಶತಕ ಇದಾಗಿದೆ. ಅದರಲ್ಲೂ ಕ್ರೈಸ್ಟ್‌ಚರ್ಚ್‌ನ ತಮ್ಮ ತವರು ಮೈದಾನದಲ್ಲಿ ಟೀಂ ಇಂಡಿಯಾ ವಿರುದ್ಧ ಸತತ ಮೂರನೇ ಬಾರಿ 50 ರನ್‌ಗಳ ಗಡಿ ದಾಟಿರುವುದು ವಿಶೇಷ.

ಮೊರ್ಕೆಲ್ ಹೊಗಳಿದ್ರು, ಗಿಲ್ ಕೈಬಿಟ್ರು; ಸಿರಾಜ್ ವಿಚಾರದಲ್ಲಿ ಶುರುವಾಯ್ತು ಚರ್ಚೆ

ಇದಕ್ಕೂ ಮೊದಲು 2020ರಲ್ಲಿ ಇದೇ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲೂ ಲ್ಯಾಥಮ್ ಅರ್ಧಶತಕ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆದರೆ ಲ್ಯಾಥಮ್ ಅವರ ಈ ಇನಿಂಗ್ಸ್‌ಗೆ ಕೊನೆಗೂ ಆಕಾಶ್ ದೀಪ್ ತೆರೆ ಎಳೆದರು. 59 ರನ್ ಗಳಿಸಿದ್ದ ನ್ಯೂಜಿಲೆಂಡ್ ನಾಯಕನನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮಹತ್ವದ ವಿಕೆಟ್ ತಂದುಕೊಟ್ಟರು. ಈ ಮೂಲಕ ನ್ಯೂಜಿಲೆಂಡ್‌ನ ಎರಡನೇ ವಿಕೆಟ್ ಪತನಕ್ಕೆ ಕಾರಣರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Fri, 27 November 26

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us