AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರಿಗೂ ಅವಕಾಶ ಕೊಟ್ಟೆ, ಆದರೆ ಯಾರೂ ಕೈಹಿಡಿಯಲಿಲ್ಲ; ಸೋಲಿನ ಬಗ್ಗೆ ತಿಲಕ್ ಬೇಸರ

ಕತಾರ್‌ನಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಸೆಮಿಫೈನಲ್‌ನಲ್ಲಿ ತಿಲಕ್ ವರ್ಮಾ ನಾಯಕತ್ವದ ಭಾರತ-ಎ ತಂಡ ಶ್ರೀಲಂಕಾ-ಎ ವಿರುದ್ಧ 8 ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. 317 ರನ್ ಗಳಿಸಿದ್ದರೂ, ಶ್ರೀಲಂಕಾ ಅದನ್ನು ಸುಲಭವಾಗಿ ಬೆನ್ನಟ್ಟಿತು. ಪಂದ್ಯದ ಸೋಲಿಗೆ ಕಳಪೆ ಬೌಲಿಂಗ್ ಪ್ರಮುಖ ಕಾರಣ ಎಂದು ತಿಲಕ್ ವರ್ಮಾ ಒಪ್ಪಿಕೊಂಡಿದ್ದು, ಬೌಲರ್‌ಗಳ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಅವಕಾಶ ಕೊಟ್ಟೆ, ಆದರೆ ಯಾರೂ ಕೈಹಿಡಿಯಲಿಲ್ಲ; ಸೋಲಿನ ಬಗ್ಗೆ ತಿಲಕ್ ಬೇಸರ
Team India A
ಪೃಥ್ವಿಶಂಕರ
|

Updated on: Nov 27, 2026 | 7:17 AM

Share

ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ-ಎ ತಂಡದ ಅಭಿಯಾನ ಅಂತ್ಯಗೊಂಡಿದೆ. ನವೆಂಬರ್ 26ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ನಾಯಕತ್ವದ ಭಾರತ ತಂಡ ಶ್ರೀಲಂಕಾ-ಎ ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಫೈನಲ್ ತಲುಪುವ ಭಾರತದ ಕನಸು ನುಚ್ಚುನೂರಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ-ಎ ತಂಡದ ನಾಯಕ ತಿಲಕ್ ವರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಶ್ರೀಲಂಕಾ-ಎ ತಂಡದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 41.3 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 318 ರನ್ ಗಳಿಸಿದ ಶ್ರೀಲಂಕಾ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಭಾರತ-ಎ ತಂಡದ ನಾಯಕ ತಿಲಕ್ ವರ್ಮಾ, ತಂಡದ ಸೋಲಿಗೆ ಕಳಪೆ ಬೌಲಿಂಗ್ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಸಾಕಷ್ಟು ಪ್ರಯತ್ನ ಮಾಡಿದರೂ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಬೌಲರ್‌ಗಳನ್ನು ಪ್ರಯತ್ನಿಸಿದೆ

ಪಂದ್ಯದ ಬಳಿಕ ಪ್ರಸಾರಕರೊಂದಿಗೆ ಮಾತನಾಡಿದ ತಿಲಕ್ ವರ್ಮಾ, ‘ಪಂದ್ಯದ ಮೊದಲ 15 ಓವರ್‌ಗಳು ನಮಗೆ ಬಹಳ ಮುಖ್ಯವಾಗಿದ್ದವು. ಈ ಅವಧಿಯಲ್ಲಿ ಎದುರಾಳಿ ತಂಡವನ್ನು ಪ್ರತಿ ಓವರ್‌ಗೆ 6 ರನ್‌ಗಳಿಗಿಂತ ಕಡಿಮೆ ಗಳಿಸುವಂತೆ ನಿಯಂತ್ರಿಸಿದರೆ ನಮಗೆ ಅನುಕೂಲವಾಗಲಿದೆ ಎಂದು ಆಟಗಾರರಿಗೆ ಹೇಳಿದ್ದೆ. ಸ್ವಲ್ಪ ಸಮಯದ ಬಳಿಕ ಪಿಚ್ ನಿಧಾನವಾಗಲಿದೆ ಎಂಬ ನಿರೀಕ್ಷೆಯೂ ನಮ್ಮದಾಗಿತ್ತು.

ಆದರೆ, ನಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಇಬ್ಬರೂ ಆರಂಭಿಕ ಬ್ಯಾಟರ್‌ಗಳು ಉತ್ತಮವಾಗಿ ಆಡಿದರು. ಅವರನ್ನು ನಿಯಂತ್ರಿಸಲು ನನ್ನ ಬಳಿಯಿದ್ದ ಎಲ್ಲಾ ಬೌಲರ್‌ಗಳನ್ನು ಪ್ರಯತ್ನಿಸಿದೆ. ಆದರೆ, ಅದು ನಮ್ಮ ಪಾಲಿಗೆ ಕೆಟ್ಟ ದಿನವಾಗಿತ್ತು. ಬೌಲಿಂಗ್‌ನಲ್ಲಿ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಗಲಿಲ್ಲ.

ಇಂತಹ ಕೆಟ್ಟ ದಿನಗಳು ಕ್ರಿಕೆಟ್‌ನಲ್ಲಿ ಸಹಜ. ಆದರೆ, ಶ್ರೀಲಂಕಾ ಬ್ಯಾಟರ್‌ಗಳ ಪ್ರದರ್ಶನಕ್ಕೆ ಮೆಚ್ಚುಗೆ ಸಲ್ಲಿಸಬೇಕು. ಬ್ಯಾಟಿಂಗ್‌ನಲ್ಲಿ ನಾವು ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಬೌಲಿಂಗ್‌ನಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಡ್ರೆಸ್ಸಿಂಗ್ ರೂಮ್‌ಗೆ ಮರಳಿದ ಬಳಿಕ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಲವಾಗಿ ಕಮ್‌ಬ್ಯಾಕ್ ಮಾಡುತ್ತೇವೆ’ ಎಂದು ತಿಲಕ್ ಹೇಳಿದ್ದಾರೆ.

ರಣರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ ಯುವ ಪಡೆ

ಈ ಲೆಕ್ಕಾಚಾರ ನಮ್ಮದಾಗಿತ್ತು

ಇನ್ನು ಭಾರತ-ಎ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆಯೂ ತಿಲಕ್ ವರ್ಮಾ ಮಾತನಾಡಿದ್ದಾರೆ. ‘ನಾವು ಈ ಪಂದ್ಯದಲ್ಲಿ 320ರಿಂದ 330 ರನ್ ಗಳಿಸಿದರೆ ಉತ್ತಮವಾಗಿರುತ್ತದೆ ಎಂದುಕೊಂಡಿದ್ದೆವು. ಮೊದಲ 20 ಓವರ್‌ಗಳಲ್ಲಿ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿತ್ತು. ಆದರೆ, ಆ ಬಳಿಕ ಪಿಚ್ ನಿಧಾನವಾಯಿತು. ಕೆಲವು ಎಸೆತಗಳು ಪಿಚ್‌ನಲ್ಲಿ ನಿಂತು ಬರುತ್ತಿದ್ದವು. ಇನ್ನು ಕೆಲವು ಚೆಂಡುಗಳು ನಿರೀಕ್ಷೆಗಿಂತ ಕಡಿಮೆ ಎತ್ತರದಲ್ಲಿ ಸಾಗುತ್ತಿದ್ದವು.

ಈ ಹಂತದಲ್ಲಿ ನಾವು ಸತತವಾಗಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು. ಆದರೆ, ನಂತರ ತನುಷ್ ಮತ್ತು ಶಹಬಾಜ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಅವರ ಆಟದ ನೆರವಿನಿಂದ 317 ರನ್ ಗಳಿಸಲು ಸಾಧ್ಯವಾಯಿತು. ಪಿಚ್‌ನ ಪರಿಸ್ಥಿತಿಯನ್ನು ಗಮನಿಸಿದರೆ ನಾವು ಕಲೆಹಾಕಿದ ಮೊತ್ತ ಉತ್ತಮವಾಗಿತ್ತು’ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More