SA vs NZ: ದಕ್ಷಿಣ ಆಫ್ರಿಕಾಕ್ಕೆ ಸತತ 2ನೇ ಸೋಲು; ಸರಣಿಯಲ್ಲಿ ಕಿವೀಸ್ ಮೇಲುಗೈ

South Africa vs New Zealand T20: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯಲ್ಲಿ ನ್ಯೂಜಿಲೆಂಡ್ 2-1 ಅಂತರದ ಮುನ್ನಡೆ ಸಾಧಿಸಿದೆ. ಮೂರನೇ T20 ಪಂದ್ಯದಲ್ಲಿ ಕಿವೀಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 136 ರನ್‌ಗಳಿಗೆ ಆಲೌಟ್ ಆಗಿದ್ದು, ಲಾಕಿ ಫರ್ಗುಸನ್ ಮಾರಕ ಬೌಲಿಂಗ್ ಪ್ರದರ್ಶಿಸಿದರು. ನಂತರ ಟಾಮ್ ಲೇಥಮ್ ಅವರ ಅಜೇಯ 63 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ಸುಲಭ ಗೆಲುವು ಸಾಧಿಸಿ, ಸರಣಿಯ ಮೇಲೆ ಹಿಡಿತ ಸಾಧಿಸಿದೆ.

SA vs NZ: ದಕ್ಷಿಣ ಆಫ್ರಿಕಾಕ್ಕೆ ಸತತ 2ನೇ ಸೋಲು; ಸರಣಿಯಲ್ಲಿ ಕಿವೀಸ್ ಮೇಲುಗೈ
Sa Vs Nz

Updated on: Mar 20, 2026 | 5:01 PM

2026 ರ ಟಿ20 ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಅದೇ ನ್ಯೂಜಿಲೆಂಡ್ (South Africa vs New Zealand) ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಉಭಯ ತಂಡಗಳ ನಡುವೆ ಈ ಟಿ20 ಸರಣಿ ನಡೆಯುತ್ತಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರಿಲ್ಲದೆ ಈ ಸರಣಿಯಲ್ಲಿ ಕಣಕ್ಕಿಳಿದಿವೆ. ಆದಾಗ್ಯೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ನಡೆದಿದ್ದು, ಕಿವೀಸ್ ಪಡೆ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

ಕಿವೀಸ್​ಗೆ ಸತತ 2ನೇ ಗೆಲುವು

ಉಭಯ ತಂಡಗಳ ನಡುವಿನ ಮೊದಲ ಪಂದ್ಯವನ್ನು ಆಫ್ರಿಕಾ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಆದರೆ ಆ ಬಳಿಕ ಭರ್ಜರಿ ಪುನರಾಗಮನ ಮಾಡಿರುವ ಕಿವೀಸ್ ಸತತ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಪಂದ್ಯವನ್ನು 68 ರನ್​ಗಳಿಂದ ಗೆದ್ದುಕೊಂಡಿದ್ದ ಕಿವೀಸ್ ಇದೀಗ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಫ್ರಿಕಾ 136 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 16.2 ಓವರ್​ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

136 ರನ್​ಗಳಿಗೆ ಕುಸಿದ ಆಫ್ರಿಕಾ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ, ಲಾಕಿ ಫರ್ಗುಸನ್ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ಹೀಗಾಗಿ ತಂಡದ ಯಾವ ಆಟಗಾರನಿಗೂ 26 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ತಂಡದ ಪರ ನ್ಕೊಬಾನಿ ಮೊಕೊಯೆನಾ ಗರಿಷ್ಠ 26 ರನ್​ಗಳ ಇನ್ನಿಂಗ್ಸ್ ಆಡಿದರೆ, ಜಾರ್ಜ್ ಲಿಂಡೆ 23 ರನ್​ಗಳ ಕಾಣಿಕೆ ನೀಡಿದರು. ಉಳಿದ ಯಾವ ಬ್ಯಾಟ್ಸ್‌ಮನ್​ಗೂ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಫ್ರಿಕಾ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿತು.

ಫರ್ಗುಸನ್ ಮಾರಕ ದಾಳಿ

ಕಿವೀಸ್ ಪರ ಮಾರಕ ದಾಳಿ ನಡೆಸಿದ ವೇಗಿ ಲಾಕಿ ಫರ್ಗುಸನ್ ತಮ್ಮ ನಾಲ್ಕು ಓವರ್‌ಗಳಲ್ಲಿ 2.25 ಎಕಾನಮಿ ರೇಟ್‌ನಲ್ಲಿ ಕೇವಲ 9 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಹಾಗೆಯೇ ತಮ್ಮ ನಾಲ್ಕು ಓವರ್‌ಗಳಲ್ಲಿ 17 ಡಾಟ್ ಬಾಲ್‌ಗಳನ್ನು ಎಸೆದಿದ್ದು, ಹರಿಣಗಳ ಮೇಲೆ ಒತ್ತಡ ಹೇರಿತು. ಉಳಿದಂತೆ ಕೈಲ್ ಜೇಮಿಸನ್, ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಬೆಂಜಮಿನ್ ಸಿಯರ್ಸ್ ತಲಾ 2 ವಿಕೆಟ್ ಪಡೆದರು.

SA vs NZ: 18 ರನ್​ಗೆ 5 ವಿಕೆಟ್; ಹೀನಾಯವಾಗಿ ಸೋತ ಆಫ್ರಿಕಾ

ಲೇಥಮ್ ಅರ್ಧಶತಕದ ಇನ್ನಿಂಗ್ಸ್

ಈ ಗುರಿ ಬೆನ್ನಟ್ಟಿದ ಕಿವೀಸ್ ಪಡೆಗೆ ಭರ್ಜರಿ ಆರಂಭ ಸಿಕ್ಕಿತು. ಎರಡನೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಆರಂಭಿಕ ಡೆವೋನ್ ಕಾನ್ವೇ 39 ರನ್​ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ ಟಾಮ್ ಲೇಥಮ್ ಜೊತೆಗೂಡಿ ಮೊದಲ ವಿಕೆಟ್​ಗೆ 96 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಲೇಥಮ್ ಅಜೇಯ 63 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಟಿಮ್ ರಾಬಿನ್ಸನ್ ಕೂಡ 17 ರನ್​ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us