ಮಾಜಿ ನಾಯಕನ ಮಕ್ಕಳ ಸಂದರ್ಶನಕ್ಕೆ ಹೆದರಿ ಲಾರ್ಡ್ಸ್‌ ಟೆಸ್ಟ್ ಬಹಿಷ್ಕರಿಸಲು ಮುಂದಾಗಿದ್ದ ಪಾಕ್ ತಂಡ

Pak Cricket Boycott Threat: ಲಾರ್ಡ್ಸ್ ಟೆಸ್ಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಪಂದ್ಯ ಬಹಿಷ್ಕರಿಸಲು ಮುಂದಾಗಿತ್ತು. ಇಮ್ರಾನ್ ಖಾನ್ ಪುತ್ರರು ತಮ್ಮ ತಂದೆಯ ಆರೋಗ್ಯ ಮತ್ತು ಜೀವಕ್ಕೆ ಅಪಾಯದ ಬಗ್ಗೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ನೀಡಿದ ಸಂದರ್ಶನ ಇದಕ್ಕೆ ಕಾರಣ. ಈ ಸಂದರ್ಶನದಿಂದ ಪಾಕ್ ಸರ್ಕಾರಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಪಾಕ್ ಕ್ರಿಕೆಟ್ ಮಂಡಳಿ (PCB) ಆಟಗಾರರನ್ನು ಮೈದಾನಕ್ಕಿಳಿಸದೆ ಪ್ರತಿಭಟಿಸಿತು. ಕೊನೆಗೆ ಮಾತುಕತೆ ನಡೆದು ಪಂದ್ಯ ಮುಂದುವರೆಯಿತು.

ಮಾಜಿ ನಾಯಕನ ಮಕ್ಕಳ ಸಂದರ್ಶನಕ್ಕೆ ಹೆದರಿ ಲಾರ್ಡ್ಸ್‌ ಟೆಸ್ಟ್ ಬಹಿಷ್ಕರಿಸಲು ಮುಂದಾಗಿದ್ದ ಪಾಕ್ ತಂಡ
Pak Team

Updated on: Aug 28, 2026 | 3:02 PM

ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್ (England vs Pakistan) ಪ್ರವಾಸದಲ್ಲಿದ್ದು, ಅಲ್ಲಿ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಇದೀಗ ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Test) ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದ ಭೋಜನ ವಿರಾಮದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡ ಮೈದಾನಕ್ಕಿಳಿಯಲು ಹಿಂದೇಟು ಹಾಕಿ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿತ್ತು ಎಂಬ ಆಘಾತಕ್ಕಾರಿ ಮಾಹಿತಿ ಹೊರಬಿದ್ದಿದೆ. ಪಾಕ್ ಕ್ರಿಕೆಟ್ ಮಂಡಳಿಯ ಆದೇಶದ ಮೇರೆಗೆ ಪಾಕ್ ಆಟಗಾರರು ಆಟ ಮುಂದುವರೆಸಲು ತಡ ಮಾಡಿದ ಬಗ್ಗೆಯೂ ವರದಿಯೂ ಆಗಿದೆ.

ಇಮ್ರಾನ್ ಖಾನ್ ಪುತ್ರರ ಸಂದರ್ಶನ

ಅಷ್ಟಕ್ಕೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಯುತ್ತಿರುವ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದು ಏಕೆ? ಪಾಕ್ ಮಂಡಳಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಎಂಬುದನ್ನು ನೋಡುವುದಾದರೆ.. ಅದಕ್ಕೆ ಕಾರಣ ಅದೇ ಪಾಕ್ ತಂಡದ ಮಾಜಿ ನಾಯಕ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಕ್ಕಳ ವಿಶೇಷ ಸಂದರ್ಶನ. ಇಮ್ರಾನ್ ಖಾನ್ ಪುತ್ರರೊಂದಿಗೆ ಇಂಗ್ಲೆಂಡ್‌ನ ಮಾಜಿ ನಾಯಕ ಸ್ಕೈ ಸ್ಪೋರ್ಟ್ಸ್ ನಿರೂಪಕ ಮೈಕೆಲ್ ಅಥರ್ಟನ್ ನಡೆಸಿದ ವಿಶೇಷ ಸಂದರ್ಶನ ಮೊದಲ ದಿನದಾಟದ ಭೋಜನ ವಿರಾಮದ ವೇಳೆ ಪ್ರಸಾರವಾಯಿತು.

ತಂಡವನ್ನು ಕಣಕ್ಕಿಳಿಸದಿರಲು ನಿರ್ಧಾರ

ಈ ಸಂದರ್ಶನದಲ್ಲಿ ಇಮ್ರಾನ್ ಖಾನ್ ಮಕ್ಕಳು ಮೂರು ವರ್ಷಗಳಿಂದ ಜೈಲಿನಲ್ಲಿರುವ ತಮ್ಮ ತಂದೆಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಾಗೆಯೇ ಇಮ್ರಾನ್ ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು. ಇದು ಪಾಕ್ ಸರ್ಕಾರವನ್ನು ಜಾಗತೀಕವಾಗಿ ಮುಜುಗರಕ್ಕೀಡುಮಾಡಿತು. ಇದರಿಂದ ಅಸಮಾಧಾನಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ಸೆಷನ್ ಆರಂಭಕ್ಕೂ ಮುನ್ನ ತನ್ನ ತಂಡವನ್ನು ಕಣಕ್ಕಿಳಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿತ್ತು. ಅಂತಿಮವಾಗಿ ಪಾಕ್ ಮಂಡಳಿಯ ಮನವೊಲಿಸಿ ಆಟವನ್ನು ಮುಂದುವರೆಸಲಾಗಿದೆ.

ವಾಸ್ತವವಾಗಿ ಬುಧವಾರ ಬೆಳಿಗ್ಗೆ ಲಾರ್ಡ್ಸ್‌ನಲ್ಲಿರುವ ಬರಹಗಾರರ ಕೋಣೆಯಲ್ಲಿ ಅಥರ್ಟನ್, ಇಮ್ರಾನ್ ಖಾನ್ ಅವರ ಇಬ್ಬರು ಪುತ್ರರಾದ ಸುಲೇಮಾನ್ ಮತ್ತು ಖಾಸಿಮ್ ಖಾನ್ ಅವರೊಂದಿಗೆ 18 ನಿಮಿಷಗಳ ಸಂದರ್ಶನ ನಡೆಸಿದರು. ಆ ಬಳಿಕ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಸ್ಕೈ ಸ್ಪೋರ್ಟ್ಸ್ ಈ ಸಂದರ್ಶನದ ಟೀಸರ್ ಪ್ರಸಾರ ಮಾಡಿತು. ಇದರಿಂದ ಅಸಮಾಧಾನಗೊಂಡ ಪಾಕ್ ಕ್ರಿಕೆಟ್ ಮಂಡಳಿ ಈ ಸಂದರ್ಶನವನ್ನು ಪ್ರಸಾರ ಮಾಡಿದರೆ, ಊಟದ ವಿರಾಮದ ಬಳಿಕ ತಂಡವನ್ನು ಕಣಕ್ಕಿಳಿಸುವುದಿಲ್ಲ ಎಂಬ ಬೆದರಿಕೆಯನ್ನೊಡ್ಡಿತು. ಉಭಯ ಮಂಡಳಿಗಳ ಮಾತುಕತೆಯ ಸಮಯದಲ್ಲಿ ಸ್ಕೈ ಸ್ಪೋರ್ಟ್ಸ್ ಈ ಸಂದರ್ಶನವನ್ನು ಪ್ರಸಾರ ಮಾಡುವುದನ್ನು ವಿಳಂಬಗೊಳಿಸಿತು. ಮಾತುಕತೆಗಳ ನಂತರ, ಪಾಕಿಸ್ತಾನಿ ಆಟಗಾರರು ಮಧ್ಯಾಹ್ನ 2:40 ಕ್ಕೆ ಎರಡನೇ ಸೆಷನ್​ಗಾಗಿ ಮೈದಾನಕ್ಕೆ ಇಳಿದರು. ಆದರೆ ಈ ನಡುವೆ ಸ್ಕೈ ಸ್ಪೋರ್ಟ್ಸ್ 18 ನಿಮಿಷಗಳ ಸಂದರ್ಶನವನ್ನು ಪ್ರಸಾರ ಮಾಡಿತು.

ಇಮ್ರಾನ್ ಖಾನ್ ಆರೋಗ್ಯದಲ್ಲಿ ಏರುಪೇರು

ಆದಾಗ್ಯೂ ಪಾಕಿಸ್ತಾನದಲ್ಲಿ ಈ ಟೆಸ್ಟ್ ಸರಣಿಯನ್ನು ಪ್ರಸಾರ ಮಾಡುವ ಹಕ್ಕು ಹೊಂದಿರುವ ಪಿಟಿವಿಯಲ್ಲಿ ಈ ಸಂದರ್ಶನವನ್ನು ಪ್ರಸಾರ ಮಾಡಲಿಲ್ಲ. ಈ ಸಂದರ್ಶನದಲ್ಲಿ ಇಮ್ರಾನ್ ಖಾನ್ ಅವರ ಇಬ್ಬರು ಪುತ್ರರು ತಮ್ಮ ತಂದೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅವರ ಜೀವಕ್ಕೆ ಅಪಾಯವಿರುವುದನ್ನು ಉಲ್ಲೇಖಿಸಿದ್ದಾರೆ.

71 ವರ್ಷದ ಇಮ್ರಾನ್ ಖಾನ್ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ತೀರ ಹದಗೆಟ್ಟಿರುವುದಾಗಿ ವರದಿಯಾಗಿತ್ತು. ಕಳೆದ ವಾರ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ಅವರನ್ನು ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಶಿಫಾ ಆಸ್ಪತ್ರೆಗೆ ದಾಖಲಿಸಲು ಆದೇಶಿಸಿತ್ತು. ಆದರೆ ಶಿಫಾ ಆಸ್ಪತ್ರೆಯ ಬದಲು ಇಮ್ರಾನ್ ಅವರನ್ನು ಸರ್ಕಾರಿ ಸ್ವಾಮ್ಯದ ಪಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆಯ ನಂತರ ತಕ್ಷಣವೇ ಇಮ್ರಾನ್ ಅವರನ್ನು ಮತ್ತೆ ಜೈಲಿಗೆ ಹಾಕಲಾಯಿತು. ಕೆಲವು ದಿನಗಳ ಹಿಂದೆ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನ ಮಾಜಿ ಆಟಗಾರರು ಸೇರಿದಂತೆ 21 ಮಾಜಿ ಅಂತರರಾಷ್ಟ್ರೀಯ ನಾಯಕರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್‌ಗೆ ಪತ್ರ ಬರೆದು, ಇಮ್ರಾನ್ ಖಾನ್ ಅವರಿಗೆ ಸರಿಯಾದ ವೈದ್ಯಕೀಯ ಆರೈಕೆ ನೀಡಬೇಕೆಂದು ಒತ್ತಾಯಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 28 August 26

Loading...
Unable to load recommendations.
Follow Us