ಟಿ20 ವಿಶ್ವಕಪ್‌ನ (T20 World Cup 2022) ಫೈನಲ್‌ನಲ್ಲಿ ಮುಗ್ಗರಿಸುವುದರೊಂದಿಗೆ ಪಾಕಿಸ್ತಾನ ತಂಡ ವಿಶ್ವಕಪ್ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಬಾಬರ್ ಅಜಮ್ ತಂಡವನ್ನು ಸೋಲಿಸಿತು. ಈ ಸೋಲಿನ ನಂತರ ಪಾಕಿಸ್ತಾನ ತಂಡದ ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸೋಲಿನ ನಂತರ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್, ಪಾಕ್ ತಂಡದ ಆಟಗಾರರು ಬಿರಿಯಾನಿ ತಿಂದು ತಿಂದು ಕೆಲವೇ ವಾರಗಳಲ್ಲಿ ತಮ್ಮ ತೂಕವನ್ನು ಸುಮಾರು 20 ಕೆಜಿಯಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ. ಇದಕ್ಕೆ ಧನಿಗೂಡಿಸಿರುವ ವಾಸಿಂ ಅಕ್ರಂ, ಈ ಮೊದಲು 3 ತಿಂಗಳಿಗೊಮ್ಮೆ ಪರೀಕ್ಷೆ ನಡೆಯುತ್ತಿತ್ತು. ಆದರೆ ಈಗ ಪಾಕಿಸ್ತಾನ ಮಂಡಳಿಯು ಪ್ರತಿ ತಿಂಗಳು ಫಿಟ್ನೆಸ್ ಪರೀಕ್ಷೆಯನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಆಟಗಾರರ ತೂಕ 70 ರಿಂದ 90ಕೆ.ಜಿಗೆ ಕೆಲವೇ ವಾರಗಳಲ್ಲಿ ಏರಿಕೆ
ಮುಂದುವರೆದು ಮಾತನಾಡಿದ ಮಿಸ್ಬಾ, ನಾನು ಪಾಕಿಸ್ತಾನ ತಂಡದ ಕೋಚ್ ಆಗಿದ್ದಾಗ ಪ್ರತಿ ವಾರ ಅಥವಾ ಎರಡು ವಾರಕ್ಕೊಮ್ಮೆ ತಂಡದಲ್ಲಿರುವ ಆಟಗಾರರ ತೂಕವನ್ನು ಪರಿಶೀಲಿಸುತ್ತಿದ್ದೆ. ಆದರೆ ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಂತೆ ತೋರುತ್ತದೆ ಹೀಗಾಗಿ ಆಟಗಾರರ ತೂಕ 70 ರಿಂದ 90ಕೆ.ಜಿಗೆ ಕೆಲವೇ ವಾರಗಳಲ್ಲಿ ಏರಿಕೆಯಾಗುತ್ತಿದೆ. ಆಟಗಾರರು ಊಟದ ವಿಚಾರದಲ್ಲಿ ಎಚ್ಚರ ತಪ್ಪಿದ್ದು, ಡಬೂನ್ ಬಿರಿಯಾನಿ, ರೊಟ್ಟಿ ತಿಂದರೆ ಅದೇ ಆಗುತ್ತದೆ ಎಂದು ಟಿವಿ ಕಾರ್ಯಕ್ರಮದಲ್ಲಿ ಮಿಸ್ಬಾ ಹೇಳಿದ್ದಾರೆ.
ಇದನ್ನೂ ಓದಿ: ಟಿ20 ಚಾಂಪಿಯನ್ ಆಗಿದ್ದೇ ತಡ ಐಪಿಎಲ್ ಆಡುವುದಿಲ್ಲ ಎಂದ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್..!
ಫಿಟ್ನೆಸ್ ಪರೀಕ್ಷೆಯಿಂದ ಏನೂ ಆಗುವುದಿಲ್ಲ
ಆದರೆ ಮಿಸ್ಬಾ-ಉಲ್-ಹಕ್ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿರುವ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್, ಫಿಟ್ನೆಸ್ ಪರೀಕ್ಷೆಯಿಂದ ಏನೂ ಆಗುವುದಿಲ್ಲ. ಆಟಗಾರರು ತಳಮಟ್ಟದಲ್ಲಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದಿದ್ದಾರೆ.
ಪಾಕಿಸ್ತಾನ ತಂಡದ ಕಳಪೆ ಬ್ಯಾಟಿಂಗ್
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪಯಣ ವಿಶೇಷವೇನೂ ಆಗಿರಲಿಲ್ಲ. ಸೂಪರ್ 12 ಸುತ್ತಿನಲ್ಲಿ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಬಾಬರ್ ಪಡೆ ಒಂದು ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದರು. ಆದರೆ ಅದೃಷ್ಟವಶಾತ್ ಸೆಮಿ-ಫೈನಲ್‌ಗೆ ಪ್ರವೇಶಿಸಿ, ಅಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಪಂದ್ಯಕ್ಕೆ ಎಂಟ್ರಿಕೊಟ್ಟಿದ್ದರು. ಆದರೆ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಬ್ಯಾಟಿಂಗ್ ಅವರ ಚಾಂಪಿಯನ್ ಕನಸಿಗೆ ಎಳ್ಳುನೀರು ಬಿಟ್ಟಿತು. ಫೈನಲ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿದ ಆಂಗ್ಲ ಬೌಲರ್ಗಳು ಇಡೀ ತಂಡವನ್ನು ಕೇವಲ 136 ರನ್ಗಳಿಗೆ ಕಟ್ಟಿಹಾಕಿತು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Mon, 14 November 22