ಅತ್ಯುತ್ತಮ ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ; ಇಬ್ಬರು ಭಾರತೀಯರಿಗೆ ತಂಡದಲ್ಲಿ ಸ್ಥಾನ..!
T20 World Cup 2022: ಈ ತಂಡದಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್‌ನ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನದ ತಲಾ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತಂಡ ತನ್ನ ಎರಡನೇ ಟಿ20 ವಿಶ್ವಕಪ್ (T20 World Cup 2022) ಎತ್ತಿಹಿಡಿದಿದೆ. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳ ಜಯ ಸಾಧಿಸಿತ್ತು. ಇಂಗ್ಲೆಂಡ್ ಟಿ20 ವಿಶ್ವ ಚಾಂಪಿಯನ್ ಆದ ನಂತರ ಇದೀಗ ಐಸಿಸಿ ಟೂರ್ನಮೆಂಟ್ ತಂಡವನ್ನು (ICC Best T20 World Cup Team) ಪ್ರಕಟಿಸಿದೆ. ಈ ತಂಡದಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್‌ನ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನದ (India-Pakistan) ತಲಾ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ಜಿಂಬಾಬ್ವೆಯ ಆಟಗಾರನೂ ಆಯ್ಕೆಯಾಗಿರುವುದು ದೊಡ್ಡ ಸಂಗತಿ.
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದಿಂದ ತಲಾ ಒಬ್ಬ ಆಟಗಾರ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ತಂಡದ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಐಸಿಸಿಯ ಬೆಸ್ಟ್ ವಿಶ್ವಕಪ್ ತಂಡದಲ್ಲಿ ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಇಂಗ್ಲೆಂಡ್‌ನ 4 ಆಟಗಾರರಿಗೆ ಸ್ಥಾನ
ಈ ಟೂರ್ನಿಯಲ್ಲಿ 225 ರನ್ ಬಾರಿಸಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಐಸಿಸಿಯ ಬೆಸ್ಟ್ ಪ್ಲೇಯಿಂಗ್ ಇಲೆವೆನ್‌ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಅಲೆಕ್ಸ್ ಹೇಲ್ಸ್ ಕೂಡ ಸ್ಥಾನ ಪಡೆದಿದ್ದು, ಅವರು ಒಟ್ಟಾರೆ ಟೂರ್ನಿಯಲ್ಲಿ 212 ರನ್ ಗಳಿಸಿದ್ದರು. ಐಸಿಸಿಯ ಅತ್ಯುತ್ತಮ ತಂಡದಲ್ಲಿ ಇಂಗ್ಲೆಂಡ್‌ನ ಇಬ್ಬರು ಬೌಲರ್‌ಗಳೂ ಆಯ್ಕೆಯಾಗಿದ್ದು, 6 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಜೊತೆಗೆ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದ ಮಾರ್ಕ್ ವುಡ್ ಕೂಡ ಸ್ಥಾನ ಪಡೆದಿದ್ದಾರೆ.
ವಿರಾಟ್-ಸೂರ್ಯಕುಮಾರ್ಗೆ ಸ್ಥಾನ
ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಐಸಿಸಿಯ ಬೆಸ್ಟ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಗರಿಷ್ಠ 296 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 239 ರನ್ ಗಳಿಸಿದ್ದರು. ಹೀಗಾಗಿ ಐಸಿಸಿ ಈ ಇಬ್ಬರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿದೆ.
ಇದನ್ನೂ ಓದಿ: IPL 2023: ನ.15 ಕೊನೆ ದಿನ; 10 ತಂಡಗಳಲ್ಲಿ ಯಾರು ಸೇಫ್, ಯಾರಿಗೆ ಗೇಟ್ಪಾಸ್? ಇಲ್ಲಿದೆ ವಿವರ
ಪಾಕಿಸ್ತಾನದ ಶಾದಾಬ್, ಶಾಹೀನ್ ತಂಡದಲ್ಲಿ
ಪಾಕಿಸ್ತಾನದ ಪರವಾಗಿ, ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಐಸಿಸಿಯ ಬೆಸ್ಟ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಶಾದಾಬ್ ಆಡಿದ 7 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದು, ಬ್ಯಾಟಿಂಗ್‌ನಲ್ಲೂ ಉತ್ತಮ ಕೊಡುಗೆ ನೀಡಿದ್ದಾರೆ. ಮತ್ತೊಂದೆಡೆ ಶಾಹೀನ್ ಶಾ ಆಫ್ರಿದಿ ಕೂಡ 7 ಪಂದ್ಯಗಳಲ್ಲಿ 11 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಫಿಲಿಪ್ಸ್, ಸಿಕಂದರ್ ರಜಾ, ನೋಕಿಯಾಗೆ ಅವಕಾಶ
ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಜಾ ಐಸಿಸಿಯ ಬೆಸ್ಟ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಇಡೀ ಟೂರ್ನಿಯಲ್ಲಿ 219 ರನ್‌ಗಳನ್ನು ಗಳಿಸುವುದರ ಜೊತೆಗೆ, ಸಿಕಂದರ್ ರಜಾ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರೊಂದಿಗೆ ಆಫ್ರಿಕಾ ಪರ 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಎನ್ರಿಕ್ ನೋಕಿಯಾ ಕೂಡ ಇದ್ದಾರೆ. ಅದೇ ವೇಳೆ ನ್ಯೂಜಿಲೆಂಡ್ ಪರ 201 ರನ್ ಗಳಿಸಿದ್ದ ಗ್ಲೆನ್ ಫಿಲಿಪ್ಸ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಸಿಸಿ ಅತ್ಯುತ್ತಮ ಟಿ20 ವಿಶ್ವಕಪ್ ತಂಡ: ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಜಾ, ಶಾದಾಬ್ ಖಾನ್, ಸ್ಯಾಮ್ ಕರನ್, ಎನ್ರಿಕ್ ನೋಕಿಯಾ, ಮಾರ್ಕ್ ವುಡ್, ಶಾಹೀನ್ ಶಾ ಆಫ್ರಿದಿ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Mon, 14 November 22